Ramanagara; ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಮತ್ತೊಮ್ಮೆ ಸ್ಫೋಟ!
ಹರೀಸಂದ್ರ ಗ್ರಾಪಂ ಅಧ್ಯಕ್ಷರ ಚುನಾವಣೆಯಲ್ಲಿ ಸದಸ್ಯರ ಪಕ್ಷ ದ್ರೋಹ. ನಾಯಕರೇ ಬೆನ್ನಿಗೆ ನಿಂತ ಅನುಮಾನ. ಕಾಂಗ್ರೆಸ್ ಮುಖಂಡ ಇಕ್ಬಾಲ್ ಶಕ್ತಿ ಕುಂದಿಸುವ ತಂತ್ರ.
-ಎಂ.ಅಫ್ರೆಜ್ ಖಾನ್
ರಾಮನಗರ (ಆ.26): ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದರು ರಾಮನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ನಾಯಕರ ನಡುವಿನ ಭಿನ್ನಮತ ಇನ್ನೂ ತಣ್ಣಗಾಗಿಲ್ಲ. ಇಷ್ಟುದಿನ ತೆರೆಮೆರೆಯಲ್ಲಿ ನಡೆಯುತ್ತಿದ್ದ ಭಿನ್ನಮತೀಯ ಚಟುವಟಿಕೆ ಇದೀಗ ಹರೀಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ ಮೂಲಕ ಬಹಿರಂಗವಾಗಿಯೇ ನಡೆದು ಮತ್ತೊಮ್ಮೆ ಬಣ ರಾಜಕೀಯ ಸ್ಫೋಟಗೊಂಡಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ರಾಮನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಬಣ ರಾಜಕೀಯ ತಾರಕಕ್ಕೇರಿದ ಸಂದರ್ಭದಲ್ಲಿ ಖುದ್ದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಎರಡು ಬಣಗಳ ನಾಯಕರನ್ನು ಕರೆದು ಸುಧೀರ್ಘವಾಗಿ ಚರ್ಚೆ ನಡೆಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದನ್ನು ಬದಿಗಿಟ್ಟು ಸಾಮೂಹಿಕ ನಾಯಕತ್ವದಲ್ಲಿ ಪಕ್ಷ ಸಂಘಟನೆ ಮಾಡುವಂತೆ ತಾಕೀತು ಮಾಡಿ ಕಳುಹಿಸಿದ್ದರು. ಆದರೀಗ ಹರೀಸಂದ್ರ ಗ್ರಾಪಂ ಅಧಿಕಾರ ಹಿಡಿಯಲು ಸಾಕಷ್ಟುಅವಕಾಶಗಳಿದ್ದರು ಬಣ ರಾಜಕೀಯದಿಂದಾಗಿ ಕಾಂಗ್ರೆಸ್ ಕೈ ತಪ್ಪಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಪಂನ ನೂತನ ಅಧ್ಯಕ್ಷರಾದ ಬಿಜೆಪಿ ಬೆಂಬಲಿತ ಸದಸ್ಯ ಸಿ.ಶಿವಕುಮಾರ್, ಚುನಾವಣೆಗೆ ಗೈರಾದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ ದಿ ಗ್ರೇಟರ್ ಬಿಡದಿ ಬೆಂಗಳೂರು ಸ್ಮಾರ್ಚ್ ಸಿಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ವರದರಾಜು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಹಿರಿಯ ನಾಯಕರಾದ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಜೀವಂತವಾಗಿರುವುದಕ್ಕೆ ಇಂಬು ನೀಡಿದಂತಿದೆ.
ಕಾಂಗ್ರೆಸ್ ಬೆಂಬಲಿತರು ಗೈರು: ಮೊದಲ ಅವಧಿ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಬೆಂಬಲಿತ ಮೈತ್ರಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಡುವೆ ತೀವ್ರ ಪೈಪೋಟಿ ನಡೆದು ಸಮಬಲ ಸಾಧಿಸಿದ್ದರು. ಅಂತಿಮವಾಗಿ ಲಾಟರಿ ಪ್ರಕ್ರಿಯೆಯಲ್ಲಿ ಮೈತ್ರಿ ಅಭ್ಯರ್ಥಿ ಆಶಾ ಮಂಚೇಗೌಡ ಅವರಿಗೆ ಅದೃಷ್ಟಲಕ್ಷ್ಮಿ ಒಲಿದಿದ್ದಳು.
ಎರಡನೇ ಅವಧಿಗೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಬೆಂಬಲಿತ ಮೈತ್ರಿ ಅಭ್ಯರ್ಥಿಯಾಗಿ ಶಿವಕುಮಾರ್ ಮತ್ತು ಕಾಂಗ್ರೆಸ್ ಬೆಂಬಲದಿಂದ ವೀರಭದ್ರಸ್ವಾಮಿ ಕಣಕ್ಕಿಳಿದಿದ್ದರು. ದಳ - ಕಮಲ ಪತಿಗಳು ಕಾಂಗ್ರೆಸ್ ಬೆಂಬಲಿತ ನಾಲ್ವರು ಸದಸ್ಯರನ್ನೂ ತಮ್ಮತ್ತ ಸೆಳೆದುಕೊಂಡು ರಣತಂತ್ರ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಧ್ಯಕ್ಷೀಯ ಚುನಾವಣೆಗೂ ಮುನ್ನ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ಪ್ರಭಾವಿ ನಾಯಕರೊಬ್ಬರನ್ನು ಭೇಟಿಯಾಗಿ ನಿಮ್ಮ ಆಶೀರ್ವಾದ ಇದ್ದರೆ ಮುಂದುವರೆಯುವುದಾಗಿ ಹೇಳಿ ಆಯ್ಕೆಗೆ ಸಹಕರಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಪೂರಕವಾಗಿ ಕಾಂಗ್ರೆಸ್ ಬೆಂಬಲಿತ ನಾಲ್ವರು ಸದಸ್ಯರು ಚುನಾವಣೆಗೆ ಗೈರಾಗಿದ್ದು ಒಂದಕ್ಕೊಂದು ತಾಳೆಯಾಗುತ್ತಿದೆ.
ಗೆಲುವಿನ ಹಾದಿ ಸುಗಮ: ಚುನಾವಣೆಯಲ್ಲಿ ಗೈರಾದ ಕೈ ಬೆಂಬಲಿತ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯರಾದ ರಮ್ಯಾ, ಸ್ವಾಮಿ ಹಾಗೂ ರಂಜಿತಾ ಅವರು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪರವರ ಬಣದಲ್ಲಿ ಗುರುತಿಸಿಕೊಂಡಿದ್ದವರು. ಇವರೆಲ್ಲರ ಗೈರು ಮೈತ್ರಿ ಅಭ್ಯರ್ಥಿ ಗೆಲುವಿನ ಹಾದಿಯನ್ನು ಸುಗುಮಗೊಳಿಸಿತು. ಇಷ್ಟೇ ಅಲ್ಲದೆ, ನೂತನ ಅಧ್ಯಕ್ಷರು ಗೈರಾದ ಸದಸ್ಯರು ಮತ್ತು ಸದಸ್ಯೆಯರ ಪತಿಯರು ಹಾಗೂ ಬಿಜೆಪಿ ಮುಖಂಡ ವರದರಾಜು ಜತೆಗೂಡಿ ಸಿ.ಎಂ.ಲಿಂಗಪ್ಪ ಅವರನ್ನು ಭೇಟಿಯಾಗಿ ಅಭಿನಂದನೆ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದೊಳಗಿನ ಒಳಜಗಳ ಮತ್ತೊಮ್ಮೆ ತೀವ್ರ ಸ್ವರೂಪ ಪಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಕಾರ್ಯಕರ್ತರಲ್ಲಿ ಬೇಸರ: ಈ ಹಿಂದೆ ದಿ.ಮರಿದೇವರು ಕಾಂಗ್ರೆಸ್ ಸಾರಥ್ಯ ವಹಿಸಿದಾಗ ಗ್ರಾಪಂನಲ್ಲಿ ಜೆಡಿಎಸ್ ಬೆಂಬಲಿತರು ಹೆಚ್ಚು ಸ್ಥಾನ ಗಳಿಸಿದ್ದರೂ ಕಾಂಗ್ರೆಸ್ ಬೆಂಬಲಿತರೇ ಅಧಿಕಾರ ಹಿಡಿಯುವಂತೆ ನೋಡಿಕೊಳ್ಳುತ್ತಿದ್ದರು. ಆದರೀಗ ಬಹುಮತಕ್ಕೆ ಅವಶ್ಯಕತೆ ಇದ್ದ 2 ಸದಸ್ಯರನ್ನು ಕೈ ನಾಯಕರಾದ ಲಿಂಗಪ್ಪ ಮತ್ತು ಇಕ್ಬಾಲ್ ಜತೆಗೂಡಿ ಚರ್ಚಿಸಿ ಸೆಳೆಯುವಲ್ಲಿ ವಿಫಲರಾಗಿದ್ದು ಕಾರ್ಯಕರ್ತರಲ್ಲಿ ಬೇಸರಕ್ಕೆ ಕಾರಣವಾಗಿದೆ.
ಚುನಾವಣೆಗೆ ಗೈರಾಗಿ ಪಕ್ಷಕ್ಕೆ ದ್ರೋಹ ಬಗೆದಿರುವ ಸ್ವ ಪಕ್ಷೀಯ ಸದಸ್ಯರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವೀರಭದ್ರ ಸ್ವಾಮಿ ಆಯ್ಕೆ ಇಷ್ಟವಿರಲಿಲ್ಲ ಎಂದು ಕಾರಣ ನೀಡುತ್ತಿದ್ದಾರೆ. ಅಲ್ಲದೆ, ಇವರಿಗೆ ಕಾಂಗ್ರೆಸ್ ನಾಯಕರೇ ಬೆನ್ನಿಗೆ ನಿಂತ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.
ಬಿಜೆಪಿ ಜನೋತ್ಸವದ ದಿನ ಕಾಂಗ್ರೆಸ್ನಿಂದ ಭ್ರಷ್ಟೋತ್ಸವ: ಡಿಕೆಶಿ
ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಭಾವಿತ ಅಭ್ಯರ್ಥಿ ಇಕ್ಬಾಲ್ ಹುಸೇನ್ ಸ್ವಾತಂತ್ರ್ಯೋತ್ಸವ ನಡಿಗೆ ಹೆಸರಿನಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಮತದಾರರ ಮನೆ ಬಾಗಿಲಿಗೆ ಭೇಟಿ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಮತ್ತೊಂದೆಡೆ ಸ್ವ ಪಕ್ಷೀಯ ನಾಯಕರೇ ಪಕ್ಷದ ಶಕ್ತಿ ಕುಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆಂದು ಕಾರ್ಯಕರ್ತರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
\ಬಿಎಸ್ವೈ ದಿಲ್ಲಿ ಭೇಟಿ: ಮತ್ತೇನೋ ಹೊಸ ರಾಜಕೀಯ ಬದಲಾವಣೆ ಆಗುವಂತಿದೆ ಎಂದ ಕಾಂಗ್ರೆಸ್
ಅಧಿಕಾರ ಕೈ ತಪ್ಪಲು ಕಾರಣವೇನು?: ಹರೀಸಂದ್ರ ಗ್ರಾಪಂನ ಒಟ್ಟು 16 ಸ್ಥಾನಗಳ ಪೈಕಿ ಕಾಂಗ್ರೆಸ್ - 7, ಜೆಡಿಎಸ್ - 5 ಹಾಗೂ ಬಿಜೆಪಿ - 4 ಬೆಂಬಲಿತ ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಹೋರಾಟ ನಡೆಸಿದ್ದರಿಂದ 7 ಸ್ಥಾನ ಪಡೆದಿದ್ದ ಕಾಂಗ್ರೆಸ್ಗೆ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ಕೇವಲ 2 ಸದಸ್ಯರ ಬೆಂಬಲ ಬೇಕಾಗಿತ್ತು. ಕಳೆದ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆ ವೇಳೆ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಕೆಆರ್ ಐಡಿಎಲ್ ಅಧ್ಯಕ್ಷ ರುದ್ರೇಶ್, ದಿ ಗ್ರೇಟರ್ ಬಿಡದಿ ಬೆಂಗಳೂರು ಸ್ಮಾರ್ಚ್ ಸಿಟಿ ಅಧ್ಯಕ್ಷ ವರದರಾಜು ಹಾಗೂ ಜೆಡಿಎಸ್ ಮುಖಂಡರಾದ ತಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್ ಮಾತುಕತೆ ನಡೆಸಿ ಜೆಡಿಎಸ್ - ಬಿಜೆಪಿ ಮೈತ್ರಿ ರೂಪಿಸಿದ್ದರು.