ಬಿಎಸ್‌ವೈ ದಿಲ್ಲಿ ಭೇಟಿ: ಮತ್ತೇನೋ ಹೊಸ ರಾಜಕೀಯ ಬದಲಾವಣೆ ಆಗುವಂತಿದೆ ಎಂದ ಕಾಂಗ್ರೆಸ್
ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾದ ಬೆನ್ನಲ್ಲೇ ಮೊದಲ ಬಾರಿಗೆ ಬಿಎಸ್ ಯಡಿಯೂರಪ್ಪ ಅವರು ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರು, (ಆಗಸ್ಟ್.26):ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಹತ್ತಿರುವಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ಸದ್ದಿಲ್ಲದೇ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಸಂಪುಟ ವಿಸ್ತರಣೆ ಮಾತುಗಳು ಕೇಳಿರುತ್ತಿದ್ರೆ, ಮತ್ತೊಂದೆಡೆ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಚರ್ಚೆಗಳು ನಡೆಯುತ್ತಿವೆ, ಇದರ ಮಧ್ಯೆ ಯಡಿಯೂರಪ್ಪ ದೆಹಲಿಗೆ ತೆರಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಹೌದು.. ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ಆಯ್ಕೆಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರಿಷ್ಠರ ಭೇಟಿಗಾಗಿ ಇಂದು (ಆಗಸ್ಟ್ 26) ದೆಹಲಿಗೆ ತೆರಳಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಭಾರೀ ಸಂಚಲನ ಮೂಡಿಸಿದೆ.
ರಾಷ್ಟ್ರ ಮಟ್ಟದಲ್ಲಿ ತಮಗೆ ಉನ್ನತ ಸ್ಥಾನ ದೊರಕಿದ ಬಳಿಕ ಅವರು ಇದೇ ಮೊದಲ ಬಾರಿಗೆ ವರಿಷ್ಠರ ಭೇಟಿಗೆ ತೆರಳಿದ್ದಾರೆ. ಇಂದು ಹಾಗೂ ನಾಳೆ(ಶನಿವಾರ) ಎರಡು ದಿನಗಳ ಕಾಲ ಅವರು ದಿಲ್ಲಿಯಲ್ಲೇ ವಾಸ್ತವ್ಯ ಹೂಡಲಿದ್ದು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ. ಭೇಟಿ ವೇಳೆ ರಾಜ್ಯ ರಾಜಕಾರಣದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪಗೆ ಮೋದಿ ದೊಡ್ಡ ಹುದ್ದೆ ನೀಡಿದ್ದೇಕೆ?
ಚುನಾವಣಾ ವರ್ಷವಾಗಿರುವುದರಿಂದ ಯಡಿಯೂರಪ್ಪ ತಟಸ್ಥವಾಗಿ ಕುಳಿತುಕೊಳ್ಳದಿರುವ ನಿಟ್ಟಿನಲ್ಲಿ ರಾಜ್ಯದಲ್ಲಿ ಸಂಘಟನಾತ್ಮಕವಾಗಿ ಒಂದಿಷ್ಟು ಜವಾಬ್ದಾರಿ ನೀಡುವಂತೆ ಅವರು ವರಿಷ್ಠರ ಬಳಿ ಮನವಿ ಮಾಡುವ ಸಾಧ್ಯತೆ ಇದೆ. ಅಲ್ಲದೇ ಸಂಘಟನಾತ್ಮಕವಾಗಿ ನಾಲ್ಕು ಕಂದಾಯ ವಿಭಾಗಗಳಲ್ಲಿ ಸಮಾವೇಶ ನಡೆಸುವಂತೆ ಅವರು ವರಿಷ್ಠರ ಬಳಿ ಮನವಿ ಮಾಡುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.
ಬಿಎಸ್‌ವೈ ಪ್ರತಿಕ್ರಿಯೆ
ತಮ್ಮ ಪ್ರಯಾಣದ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿ ಎಸ್ ಯಡಿಯೂರಪ್ಪ, ಈಗ ದೆಹಲಿಗೆ ಹೋಗುತ್ತಿದ್ದು ಸಂಜೆ ಪ್ರಧಾನಿ ಮೋದಿ ಸೇರಿದಂತೆ ಬೇರೆ ನಾಯಕರನ್ನು ಭೇಟಿ ಮಾಡುತ್ತೇನೆ, ನಾಳೆ ಸಾಯಂಕಾಲದವರೆಗೂ ಅಲ್ಲಿದ್ದು ಮುಂದೆ ಏನು ಕೆಲಸ ಮಾಡಬೇಕೆಂದು ಸಲಹೆ ಕೇಳುತ್ತೇನೆ, ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿ ಸರ್ಕಾರಿಯ ವಾಹಕ ಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆಯವರನ್ನು ಕೂಡ ಭೇಟಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಕುತೂಹಲ ಮೂಡಿಸಿದ ದಿಲ್ಲಿ ಭೇಟಿ
ಆರ್ ಎಸ್ ಎಸ್ ಪ್ರಧಾನ ಕಾರ್ಯದರ್ಶಿಯವರನ್ನು ಯಡಿಯೂರಪ್ಪನವರು ಭೇಟಿ ಮಾಡುತ್ತಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ. ಸರ್ಕಾರದ ಮೇಲೆ 40% ಕಮಿಷನ್ ಆರೋಪ, ಕರಾವಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೋಮುಗಲಭೆ, ರಾಜ್ಯದ ಅಭಿವೃದ್ಧಿ ವಿಚಾರಗಳ ಕುರಿತು ಪ್ರತಿಪಕ್ಷಗಳ ವಾಗ್ಯುದ್ಧ, ಚುನಾವಣಾ ಹೊಸ್ತಿಲು, ಸಚಿವ ಸಂಪುಟ ವಿಸ್ತರಣೆ, ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಊಹಾಪೋಹಗಳ ಮಧ್ಯೆ ಯಡಿಯೂರಪ್ಪನವರ ದೆಹಲಿ ಭೇಟಿ ಮಹತ್ವ ಪಡೆದಿದೆ. ಯಡಿಯೂರಪ್ಪ ಹೈಕಮಾಂಡ್ ಭೇಟಿಯಿಂದಾಗಿ ಏನೆಲ್ಲಾ ಬೆಳವಣಿಗೆಗಳು ಆಗಲಿವೆ ಎನ್ನುವ ಕುತೂಹಲ ರಾಜ್ಯ ಬಿಜೆಪಿ ನಾಯಕರಲ್ಲಿದೆ.
ಕಾಂಗ್ರೆಸ್ ಟ್ವೀಟ್
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿ ಭೇಟಿಯ ಮರ್ಮವೇನು ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
‘#BSYMukthaBJP ಅಧ್ಯಾಯ ಮುಗಿದಿದೆ ಎಂದುಕೊಳ್ಳುತ್ತಿರುವಾಗಲೇ ಯಡಿಯೂರಪ್ಪ ಪುನಃ ದೆಹಲಿಗೆ ಹೊರಟಿದ್ದಾರೆ. ಯತ್ನಾಳ್ ಹೇಳಿದಂತೆ #TirupatiAgreement ನಂತರ ಮತ್ತೇನೋ ಹೊಸ ರಾಜಕೀಯ ಬದಲಾವಣೆ ಆಗುವಂತಿದೆ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.