ಪಿಎಸ್‌ಐ ಅಕ್ರಮ ನೇಮಕಾತಿ, ಗ್ರಾಮೀಣಾಭಿವೃದ್ಧಿ ಇಲಾಖೆ ಹಗರಣಗಳು, ಶಿಕ್ಷಣ ಇಲಾಖೆ ಹಗರಣಗಳು, ಕೋಲಾರ ಉಸ್ತುವಾರಿ ಸಚಿವರ ಅಕ್ರಮದ ಬಗ್ಗೆ ರೈತರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿರುವುದು ಸೇರಿ ಎಲ್ಲವನ್ನೂ ನಾವು ಮಾತನಾಡಬೇಕಲ್ಲವೇ: ಡಿ.ಕೆ.ಶಿವಕುಮಾರ್‌ 

ಬೆಂಗಳೂರು(ಆ.26):ಆಡಳಿತಾರೂಢ ಬಿಜೆಪಿಯ ಜನೋತ್ಸವ ಆಚರಣೆಗೆ ಪ್ರತಿಯಾಗಿ ನಾವು ಕೂಡ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ‘ಭ್ರಷ್ಟೋತ್ಸವ’ ಆಚರಿಸುತ್ತೇವೆ. ಪೊಲೀಸ್‌ ನೇಮಕಾತಿ, 40 ಪರ್ಸೆಂಟ್‌ ಕಮಿಷನ್‌ ಸೇರಿದಂತೆ ಎಲ್ಲಾ ಅಕ್ರಮಗಳ ಬಗ್ಗೆ ಧ್ವನಿ ಎತ್ತುವ ಮೂಲಕ ಬಿಜೆಪಿಯ ಭ್ರಷ್ಟೋತ್ಸವ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವರೊಬ್ಬರು ಅಪೆಕ್ಸ್‌ ಬ್ಯಾಂಕ್‌ಗೆ 600-700 ಕೋಟಿ ರು. ಸಾಲ ಬಾಕಿ ಇಟ್ಟುಕೊಂಡಿದ್ದಾರೆ. ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಬಗ್ಗೆ ತನಿಖೆ ನಡೆಸುವ ಮೊದಲೇ ಕ್ಲೀನ್‌ಚಿಟ್‌ ಕೊಟ್ಟಿದ್ದಾರೆ. ಪಿಎಸ್‌ಐ ಅಕ್ರಮ ನೇಮಕಾತಿ, ಗ್ರಾಮೀಣಾಭಿವೃದ್ಧಿ ಇಲಾಖೆ ಹಗರಣಗಳು, ಶಿಕ್ಷಣ ಇಲಾಖೆ ಹಗರಣಗಳು, ಕೋಲಾರ ಉಸ್ತುವಾರಿ ಸಚಿವರ ಅಕ್ರಮದ ಬಗ್ಗೆ ರೈತರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿರುವುದು ಸೇರಿ ಎಲ್ಲವನ್ನೂ ನಾವು ಮಾತನಾಡಬೇಕಲ್ಲವೇ ಎಂದು ಹೇಳಿದರು.

ಬಿಜೆಪಿ ಆಯೋಜಿಸುತ್ತಿರುವುದು ಜನೋತ್ಸವ ಅಲ್ಲ ಭ್ರಷ್ಟೋತ್ಸವ: ಸಿದ್ದರಾಮಯ್ಯ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಾಂಗ್ರೆಸ್‌ ಏಜೆಂಟ್‌ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಗುತ್ತಿಗೆದಾರರ ಸಂಘದ ಅಧ್ಯಕ್ಷರು ಕಳೆದ ಒಂದು ವರ್ಷದಿಂದ ನನ್ನನ್ನಾಗಲಿ, ಸಿದ್ದರಾಮಯ್ಯ ಅವರನ್ನಾಗಲಿ ಭೇಟಿ ಮಾಡಿರಲಿಲ್ಲ. ನಿನ್ನೆ ಮಾತ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಇದಕ್ಕೂ ಮುನ್ನ ಕೆಲವು ತಿಂಗಳ ಹಿಂದೆ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದರು. ಕೆಂಪಣ್ಣ ಅವರು ಕಾಂಗ್ರೆಸ್‌ ಏಜೆಂಟರಾಗಿದ್ದರೆ, ಮುಖ್ಯಮಂತ್ರಿಗಳು ಅವರನ್ನು ಭೇಟಿ ಮಾಡಿದ್ದು ಯಾಕೆ? ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತನಾಡುವುದು ಬಿಜೆಪಿಗೆ ಹೊಸದಲ್ಲ ಎಂದು ತಿರುಗೇಟು ನೀಡಿದರು.

ಗುತ್ತಿಗೆದಾರರು ಸರ್ಕಾರದ ಭ್ರಷ್ಟಾಚಾರ, ಕಿರುಕುಳ ವಿಚಾರ ತಿಳಿಸಿದಾಗ ವಿರೋಧ ಪಕ್ಷವಾಗಿ ಧ್ವನಿ ಎತ್ತುವುದು ನಮ್ಮ ಕರ್ತವ್ಯ. ನಾವು ಈ ರಾಜ್ಯದ ಅಭಿವೃದ್ಧಿ ಪರ ಇರಬೇಕಲ್ಲವೇ? ಪೊಲೀಸ್‌ ಇಲಾಖೆ ನೇಮಕಾತಿ ಅಕ್ರಮ ನಂತರ ಈಗ ಕೆಪಿಟಿಸಿಎಲ ನೇಮಕಾತಿ ಅಕ್ರಮ ಹೊರಬರುತ್ತಿದೆ. ಬೆಳಗಾವಿ ಗುತ್ತಿಗೆದಾರ ಸಂತೋಷ್‌ ಪಾಟೀಲ ಅವರ ಕುಟುಂಬಸ್ಥರು ನ್ಯಾಯಾಲಯದಲ್ಲಿ ಮೇಲರ್ಜಿ ಹಾಕಿದ್ದಾರೆ. ಅವರು ಹಾಕಿದ್ದು ಯಾಕೆ? ಪ್ರಕರಣದಲ್ಲಿ ಆರೋಪಿ ಈಶ್ವರಪ್ಪ ವಿರುದ್ಧ ಎಫ್‌ಐಆರ್‌ ದಾಖಲಿಸುವ ಮೊದಲೇ ನಿರ್ದೋಷಿ ಎಂದು ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಮಾಣಪತ್ರ ನೀಡಿದ್ದು ಯಾಕೆ? ಇವೆಲ್ಲಾ ಚರ್ಚೆಯಾಗಬೇಕಲ್ಲವೇ ಎಂದು ಪ್ರಶ್ನಿಸಿದರು.