ಒಂದು ದಿನದಲ್ಲಿ ಮೋದಿ ಅವರು ಸುಮಾರು ಮೂರರಿಂದ ನಾಲ್ಕು ಕಡೆಗಳಲ್ಲಿ ಸಭೆ ಸಮಾರಂಭ ಅಥವಾ ರೋಡ್ ಶೋಗಳಲ್ಲಿ ಪಾಲ್ಗೊಳ್ಳುವ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.
ಬೆಂಗಳೂರು(ಏ.19): ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಆಡಳಿತಾರೂಢ ಬಿಜೆಪಿಯು ಭರ್ಜರಿ ಪ್ರಚಾರ ಆರಂಭಿಸಲು ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚೂ ಕಡಮೆ ಐದರಿಂದ ಆರು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪದ ಪರ ಮತಯಾಚನೆ ಮಾಡುವ ನಿರೀಕ್ಷೆಯಿದೆ. ಒಂದು ದಿನದಲ್ಲಿ ಮೋದಿ ಅವರು ಸುಮಾರು ಮೂರರಿಂದ ನಾಲ್ಕು ಕಡೆಗಳಲ್ಲಿ ಸಭೆ ಸಮಾರಂಭ ಅಥವಾ ರೋಡ್ ಶೋಗಳಲ್ಲಿ ಪಾಲ್ಗೊಳ್ಳುವ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.
ಒಟ್ಟು 10 ದಿನಗಳ ಕಾಲ ರಾಜ್ಯದಲ್ಲಿ ಮೋದಿ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಬಗ್ಗೆ ರಾಜ್ಯ ಘಟಕದಿಂದ ಬಿಜೆಪಿ ರಾಷ್ಟ್ರೀಯ ಘಟಕ ಹಾಗೂ ಪ್ರಧಾನಮಂತ್ರಿ ಕಚೇರಿಗೆ ಮನವಿ ರವಾನಿಸಲಾಗಿದೆ. ಆದರೆ, 10 ದಿನಗಳ ಕಾಲ ಮೋದಿ ಅವರ ಸಮಯ ಸಿಗುವುದು ಅನುಮಾನ ಎನ್ನಲಾಗಿದ್ದು, 5ರಿಂದ 6 ದಿನಗಳ ಕಾಲವಾದರೂ ಪ್ರಚಾರಕ್ಕೆ ಲಭ್ಯವಾಗಬಹುದು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ಇನ್ನೆರಡು ದಿನಗಳಲ್ಲಿ ಪ್ರಧಾನಿ ಮೋದಿ ಅವರ ಕಾರ್ಯಕ್ರಮದ ರೂಪುರೇಷೆ ಅಂತಿಮಗೊಳ್ಳಬಹುದು. ರಾಜ್ಯದ ಎಲ್ಲ ಭಾಗಗಳನ್ನೂ ಒಳಗೊಳ್ಳುವಂತೆ ಪ್ರವಾಸ ರೂಪಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
PartyRounds ಸೋತ ವ್ಯಕ್ತಿಗೆ ಕರ್ನಾಟಕ ಉಸ್ತುವಾರಿ, ಹಿರಿಯರಾದ ನಾವು ಕೈಕಟ್ಟಿ ಕೂರಬೇಕು, ಶೆಟ್ಟರ್ ಬಾಂಬ್!
ಯೋಗಿ, ಶಾ ಕೂಡ ರಾಜ್ಯಕ್ಕೆ:
ಮೋದಿ ಅವರ ಪ್ರವಾಸ ಕಾರ್ಯಕ್ರಮ ಅಂತಿಮಗೊಂಡ ಬಳಿಕ ಅವರ ದಿನಾಂಕಗಳನ್ನು ನೋಡಿಕೊಂಡು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರ ನಾಯಕರ ಪ್ರವಾಸವೂ ನಿರ್ಧಾರವಾಗಲಿದೆ ಎಂದು ತಿಳಿದು ಬಂದಿದೆ.
ಮೋದಿ ಪ್ರವಾಸ ಎಲ್ಲಿ?:
ಮೋದಿ ಅವರು ಮೇ ಮೊದಲ ವಾರ ಕರಾವಳಿಗೆ ಬರಲಿದ್ದಾರೆ. ಬಹುತೇಕ ಉಭಯ ಜಿಲ್ಲೆಗಳಿಗೆ ಅನುಕೂಲವಾಗುವಂತೆ ದ.ಕ. ಜಿಲ್ಲೆಯ ಮೂಲ್ಕಿ-ಮೂಡುಬಿದಿರೆಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಿಂಗಳಾಂತ್ಯದಲ್ಲಿ ಕುಂದಾಪುರ ಮತ್ತು ಬೈಂದೂರು ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಚನ್ನಪಟ್ಟಣ ಅಥವಾ ರಾಮನಗರದಲ್ಲಿ ಪ್ರಚಾರ ನಡೆಸುವ ಸಾಧ್ಯತೆ ಇದೆ ಎಂದು ಪಕ್ಷದ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದ್ದಾರೆ. ಇದೇ 30ರ ನಂತರ ಪ್ರಧಾನಿ ಮೋದಿ ಅವರು ರಾಜ್ಯಾದ್ಯಂತ ಹಲವು ರಾರಯಲಿಗಳಲ್ಲಿ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ 4ನೇ ಪಟ್ಟಿ ಬಿಡುಗಡೆ: ಶೆಟ್ಟರ್‌ಗೆ ಟಿಕೆಟ್- ಪುಲಿಕೇಶಿನಗರ ಸೇರಿ 8 ಕ್ಷೇತ್ರ ಬಾಕಿ
ಈಗಾಗಲೆ ಜೆ.ಪಿ.ನಡ್ಡಾ ಅವರೂ ರಾಜ್ಯದಲ್ಲಿ ಪ್ರವಾಸ ಮಾಡ್ತಿದ್ದಾರೆ. ಯೋಗಿ ಆದಿತ್ಯನಾಥ್, ಅಮಿತ್ ಶಾ ಸೇರಿ ಹಲವು ನಾಯಕರು ಪ್ರಚಾರಕ್ಕೆ ಬರಲಿದ್ದಾರೆ ಎಂದು ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿಯೂ ಆಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
