ಕಾಂಗ್ರೆಸ್‌ 4ನೇ ಪಟ್ಟಿ ಬಿಡುಗಡೆ: ಶೆಟ್ಟರ್‌ಗೆ ಟಿಕೆಟ್‌- ಪುಲಿಕೇಶಿನಗರ ಸೇರಿ 8 ಕ್ಷೇತ್ರ ಬಾಕಿ

ಕಾಂಗ್ರೆಸ್ ನ  ನಾಲ್ಕನೇ ಪಟ್ಟಿ ರಿಲೀಸ್ ಆಗಿದ್ದು, ಒಟ್ಟು 7 ಕ್ಷೇತ್ರದ ಟಿಕೆಟ್‌ ಘೋಷಣೆ ಮಾಡಲಾಗಿದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸೇರಿ ಒಟ್ಟು 7 ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ.

Congress 4th list release pulikeshinagara Ticket not announce sat

ಬೆಂಗಳೂರು (ಏ.18):  ಕಾಂಗ್ರೆಸ್ ನ  ನಾಲ್ಕನೇ ಪಟ್ಟಿ ರಿಲೀಸ್ ಆಗಿದ್ದು, ಒಟ್ಟು 7 ಕ್ಷೇತ್ರದ ಟಿಕೆಟ್‌ ಘೋಷಣೆ ಮಾಡಲಾಗಿದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸೇರಿ ಒಟ್ಟು 7 ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಪುಲಿಕೇಶಿನಗರ ಸೇರಿದಂತೆ ಒಟ್ಟು 8 ಕ್ಷೇತ್ರಗಳ ಪಟ್ಟಿಯನ್ನು ಬಾಕಿ ಉಳಿಸಿಕೊಂಡಿದೆ.

ಒಟ್ಟು 15 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಬಾಕಿ ಉಳಿಸಿಕೊಂಡಿದ್ದ ಕೈ ಪಾಳಯ ಅಳೆದು ತೂಗಿ 7 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮೊದಲೇ ನಿರ್ಧರಿಸಿದಂತೆ ಹುಬ್ಬಳ್ಳಿ -ಧಾರವಾಡ ಕೇಂದ್ರಕ್ಕೆ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇನ್ನು ಮುಖ್ಯವಾಗಿ ಅಖಂಡ ಶ್ರೀನಿವಾಸ್ ಶಾಸಕರಾಗಿದ್ದ ಪುಲಕೇಶಿ ನಗರ ಕ್ಷೇತ್ರದಲ್ಲಿ  ಅವರಿಗೆ ಟಿಕೆಟ್ ಘೋಷಣೆ ಮಾಡಲಾಗುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರೂ, ಇನ್ನೂ ಬಾಕಿ ಉಳಿಸಿಕೊಂಡಿದೆ.

ಕಾಂಗ್ರೆಸ್‌ ನಾಯಕನ ಪುತ್ರನಿಗೆ 881 ಕೋಟಿ ಸಾಲ ಕೊಟ್ಟ ಬ್ಯಾಂಕ್‌ಗಳು: ಮತ್ತೊಬ್ಬ ಮಲ್ಯ ಎನ್ನಬೇಡಿ!

  1. ಲಿಂಗಸೂರು : ದುರ್ಗಪ್ಪ ಎಸ್. ಹೊಲಗೇರಿ 
  2. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ : ಜಗದೀಶ್ ಶೆಟ್ಟರ್
  3. ಹುಬ್ಬಳ್ಳಿ ಧಾರವಾಡ ಪಶ್ಚಿಮ : ದೀಪಕ್‌ ಚಿಂಚೋಳಿ
  4. ಶಿಗ್ಗಾಂವಿ : ಮಹಮ್ಮದ್‌ ಯೂಸುಫ್‌ ಸವಣೂರು
  5. ಹರಿಹರ : ನಂದಗಾವಿ ಶ್ರೀನಿವಾಸ್
  6. ಚಿಕ್ಕಮಗಳೂರು : ಎಚ್.ಡಿ. ತಮ್ಮಯ್ಯ
  7. ಶ್ರವಣಬೆಳಗೊಳ: ಎಂಎ. ಗೋಪಾಲಸ್ವಾಮಿ 

ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳು ಇಲ್ಲಿವೆ:
ಪುಲಕೇಶಿ ನಗರ
ಸಿವಿ ರಾಮನ್ ನಗರ
ಮುಳಬಾಗಿಲು
ರಾಯಚೂರು ನಗರ
ಅರಕಲಗೂಡು 
ಮಂಗಳೂರು ಉತ್ತರ 
ಶಿಡ್ಲಘಟ್ಟ 
ಕೆ ಆರ್ ಪುರಂ 

ಹರಿಹರ ಹಾಲಿ ಶಾಸಕ ರಾಮಪ್ಪಗೆ ಟಿಕೆಟ್‌ ಮಿಸ್‌: ಇನ್ನು ಹರಿಹರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ರಾಮಪ್ಪ ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎಂದು ಕೇಳಿಬಂದಿತ್ತು. ಈಗಾಗಲೇ ಕಾಂಗ್ರೆಸ್‌ನ 3 ಪಟ್ಟಿಗಳು ಬಿಡುಗಡೆ ಆಗಿದ್ದರೂ ರಾಮಪ್ಪ ಅವರು ಹೆಸರು ಮಾತ್ರ ಘೋಷಣೆ ಆಗಿರಲಿಲ್ಲ. ಇದಕ್ಕಾಗಿ ಸಿದ್ದರಾಮಯ್ಯ ಸೇರಿ ಅನೇಕ ಕಾಂಗ್ರೆಸ್‌ ಮುಖಂಡರ ಮನೆಗೆ ರಾಮಪ್ಪ ಹೋಗಿ ಟಿಕೆಟ್‌ಗಾಗಿ ಮನವಿ ಸಲ್ಲಿಸಿದ್ದರು. ಆದರೆ, ಅವರನ್ನು ಕೈಬಿಟ್ಟು ಈಗ ನಂದಗಾವಿ ಶ್ರೀನಿವಾಸ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಿದೆ.

ಕಾಂಗ್ರೆಸ್‌ 3ನೇ ಪಟ್ಟಿ: 43ರಲ್ಲಿ 21 ಹೊಸ ಮುಖಗಳು...!

ಪಟ್ಟಿ ಬಿಡುಗಡೆಗೂ ಮುನ್ನವೇ ನಾಮಪತ್ರ ಸಲ್ಲಿಕೆ ಸಿದ್ಧತೆ: ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ಬಿಡುಗಡೆ ಮುನ್ನವೇ ಲಿಂಗಸಗೂರಿನ ಹಾಲಿ ಶಾಸಕ ದುರ್ಗಪ್ಪ.ಎಸ್. ಹೂಲಗೇರಿ ಅವರು ತಮ್ಮ ಬೆಂಬಲಿಗರಿಗೆ ಕರೆ ಮಾಡಿ ನಾನು 20 ನೇ ತಾರೀಖು ನಾಮಪತ್ರ ಸಲ್ಲಿಸುತ್ತೇನೆ, ಹಾಗಾಗಿ ಕಾರ್ಯಕರ್ತರು, ಬೆಂಬಲಿಗರು ಬರಬೇಕು ಎಂದು ಮನವಿ ಮಾಡಿದ್ದರು. ಇವರಿಗೆ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಪಟ್ಟಿ ಬಿಡುಗಡೆಗೂ ಮುನ್ನವೇ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ, ರಾಜ್ಯ ನಾಯಕರು ನನ್ನನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಹಾಗಾಗಿ ನಾಮಪತ್ರ ಸಲ್ಲಿಕೆ ಮಾಡುವ ದಿನ ಬಂದು ನನ್ನ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದರು.

ಕಾಂಗ್ರೆಸ್‌ 2ನೇ ಪಟ್ಟಿ ಬಿಡುಗಡೆ: 42 ಕ್ಷೇತ್ರಗಳ ಅಭ್ಯರ್ಥಿಗಳು ಇಲ್ಲಿದ್ದಾರೆ ನೋಡಿ..

ಶೆಟ್ಟರ್‌ ಬೇಡ- ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಿ: ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ವಿರುದ್ದ ಸ್ಪರ್ಧಿಸಲು ಸಿದ್ಧಗೊಂಡಿದ್ದ ಕಾಂಗ್ರೆಸ್ ಮುಖಂಡ ಮಹಮ್ಮದ್ ಸವಣೂರ ಅವರಿಗೆ ಈಗ ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್‌ ಟಿಕೆಟ್ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಮಹಮ್ಮದ್‌ ಸವಣೂರು ಸ್ಪರ್ಧೆ ಮಾಡಲಿದ್ದಾರೆ. ಇವರು ಹುಬ್ಬಳ್ಳಿ ಅಂಜುಮನ್‌ ಸಂಸ್ಥೆ ಅಧ್ಯಕ್ಷರಾಗಿದ್ದು, ಸ್ಥಳೀಯವಾಗಿ ಪ್ರಭಾವಿ ವ್ಯಕ್ತಿಯಾಗಿದ್ದರು. 

ಶ್ರವಣಬೆಳಗೊಳದ ಟಿಕೆಟ್‌ ಮಾಜಿ ಎಂಎಲ್‌ಸಿ ಪಾಲು: ತೀವ್ರ ಪೈಪೋಟಿ ನಡುವೆ ಶ್ರವಣಬೆಳಗೊಳ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಧಾನಪರಿಷತ್ ಮಾಜಿ ಸದಸ್ಯನ ಪಾಲಾಗಿದೆ. ಶ್ರವಣಬೆಳಗೊಳ ಕ್ಷೇತ್ರದ ಅಭ್ಯರ್ಥಿಯಾಗಿ ಎಂ.ಎ. ಗೋಪಾಲಸ್ವಾಮಿ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಮಾಜಿ ಸಚಿವ ದಿವಂಗತ ಶ್ರೀಕಂಠಯ್ಯ ಮೊಮ್ಮಗ ಲಲಿತ್ ರಾಘವ್, ಜತ್ತೇನಹಳ್ಳಿ ರಾಮಚಂದ್ರ ಸೇರಿ ಹಲವರಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ತೀವ್ರ ಕುತೂಹಲ ಮೂಡಿಸಿದ್ದ ಕ್ಷೇತ್ರ ದಲ್ಲಿ ನಾಲ್ಕನೇ ಪಟ್ಟಿಯಲ್ಲಿ ಗೋಪಾಲಸ್ವಾಮಿ ಹೆಸರು ಘೋಷಣೆ ಮಾಡಲಾಗಿದೆ.

ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

Latest Videos
Follow Us:
Download App:
  • android
  • ios