ಕಾಂಗ್ರೆಸ್ ಬೆಂಬಲಿಸಿದ್ದರೆ ಆಣೆ-ಪ್ರಮಾಣಕ್ಕೆ ಸಿದ್ಧ: ಎಲ್.ಆರ್.ಶಿವರಾಮೇಗೌಡ
ಬಿಜೆಪಿ ಪಕ್ಷದಿಂದ ನನ್ನ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿಗೆ ಮತ ಕೇಳುವಂತಹ ಮುಠ್ಠಾಳತನದ ಕೆಲಸ ಮಾಡಿದ್ದರೆ ಆಣೆ-ಪ್ರಮಾಣಕ್ಕೆ ಸಿದ್ಧನಿದ್ದೇನೆ.
ನಾಗಮಂಗಲ (ಮೇ.18): ಬಿಜೆಪಿ ಪಕ್ಷದಿಂದ ನನ್ನ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿ ಕಾಂಗ್ರೆಸ್ ಅಭ್ಯರ್ಥಿ ಚಲುವರಾಯಸ್ವಾಮಿಗೆ ಮತ ಕೇಳುವಂತಹ ಮುಠ್ಠಾಳತನದ ಕೆಲಸ ಮಾಡಿದ್ದರೆ ಆಣೆ-ಪ್ರಮಾಣಕ್ಕೆ ಸಿದ್ಧನಿದ್ದೇನೆ. ಧರ್ಮಸ್ಥಳದ ಅಣ್ಣಪ್ಪನೆದುರು ಬಂದು ಆಣೆ-ಪ್ರಮಾಣ ಮಾಡುವುದಕ್ಕೆ ಸುರೇಶ್‌ಗೌಡ ಸಿದ್ಧನಿದ್ದಾನೆಯೇ ಎಂದು ಮಾಜಿ ಶಾಸಕ ಸುರೇಶ್‌ಗೌಡ ಹೇಳಿಕೆಗೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಖಾರವಾಗಿ ತಿರುಗೇಟು ನೀಡಿದರು. ಪಟ್ಟಣದ ಟಿ.ಬಿ.ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬಿಜೆಪಿ ಪಕ್ಷದ ಮುಖಂಡರ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್-ಬಿಜೆಪಿ ಒಳಮೈತ್ರಿ ಮಾಡಿಕೊಂಡಿರುವುದು ನನಗೆ ಆರು ತಿಂಗಳ ಹಿಂದೆಯೇ ಗೊತ್ತಿತ್ತು. ಶಿವರಾಮೇಗೌಡರು ಪತ್ನಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್‌ಗೆ ಮತಹಾಕಿಸಿದರು.
ಆದರೂ ನಾವು ಹೋರಾಟ ಮಾಡಿರುವುದಾಗಿ ಚುನಾವಣೆಯಲ್ಲಿ ಸೋಲಿನಿಂದ ಹತಾಶರಾಗಿರುವ ಮಾಜಿ ಶಾಸಕ ಸುರೇಶ್‌ಗೌಡ ನನ್ನ ವಿರುದ್ಧ ಇಲ್ಲದ ಆರೋಪ ಮಾಡಿದ್ದಾರೆ. ಸುರೇಶ್‌ಗೌಡನ ಆರೋಪ ಸತ್ಯವಾಗಿದ್ದಲ್ಲಿ ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಎದುರಿಗೆ ಆಣೆ ಪ್ರಮಾಣಕ್ಕೆ ಸಿದ್ದವಾಗಲಿ. ನಾನು ಹತ್ತು ಬಸ್‌ಗಳಲ್ಲಿ ಜನರನ್ನು ಕರೆತರುತ್ತೇನೆ. ಅವರೂ ಹತ್ತು ಬಸ್‌ಗಳಲ್ಲಿ ತಮ್ಮ ಕಾರ್ಯಕರ್ತರನ್ನು ಕರೆತರಲಿ ದಿನಾಂಕವನ್ನೂ ಅವರೇ ನಿಗದಿಪಡಿಸಲಿ, ಆಣೆ ಪ್ರಮಾಣಕ್ಕೆ ನಾನು ಸಿದ್ಧ ಎಂದು ಬಹಿರಂಗ ಸವಾಲು ಹಾಕಿದರು. ನಾನು ಈವರೆಗೂ 12 ಚುನಾವಣೆಗಳನ್ನು ಎದುರಿಸಿದ್ದು ಗೆಲುವು-ಸೋಲು ಎರಡನ್ನೂ ಕಂಡಿದ್ದೇನೆ. ಎಂತಹ ಸಂದರ್ಭದಲ್ಲಿಯೂ ಯಾವ ರಾಜಕಾರಣಿಯೊಂದಿಗೂ ಅದರಲ್ಲೂ ವಿಶೇಷವಾಗಿ ಚಲುವರಾಯಸ್ವಾಮಿ ಅಥವಾ ಸುರೇಶ್‌ಗೌಡರಿಂದ ಹಣಕಾಸಿನ ಸಹಾಯ ಪಡೆದಿಲ್ಲ. ನನ್ನಿಂದಲೇ ಕೆಲವರು ಸಹಾಯ ಪಡೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಅರುಣ್ ಕುಮಾರ್ ಪುತ್ತಿಲ ಎಫೆಕ್ಟ್: ಬಿಜೆಪಿ ವೋಟು ಶೇ.4.90 ಕುಸಿತ!
ಸಾರಿಗೆ ಸಚಿವ ಎಂದು ಪೋಸ್ಟ್ ಹಾಕೊಂಡಿದ್ದ: ಚುನಾವಣೆಯಲ್ಲಿ ಗೆಲ್ಲುವ ಮುನ್ನವೇ ಮುಂದಿನ ಸಾರಿಗೆ ಸಚಿವ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಸಿಕೊಂಡು ಬೀಗುತ್ತಿದ್ದ ಸುರೇಶ್‌ಗೌಡ ಸೋತು ಮಕಾಡೆ ಮಲಗಿದ್ದಾನೆ. ಅವನ ಬಗ್ಗೆ ನಾನು ಮಾತನಾಡುತ್ತಿರಲಿಲ್ಲ. ಆದರೆ ವಿನಾ ಕಾರಣ ನನ್ನ ಮೇಲೆ ಇಲ್ಲದ ಆರೋಪ ಮಾಡುತ್ತಿರುವುದರಿಂದ ನನಗೆ ಸಹಿಸಲಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಜಿಲ್ಲೆಯಲ್ಲಿರುವ ಒಂದು ವರ್ಗದ ಜನ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ಅದೆಲ್ಲವನ್ನೂ ಎದುರಿಸಿಕೊಂಡೇ ಬಂದಿದ್ದೇನೆ. ಕೆಲವರು ಗೆದ್ದಿರುವುದು ಒಂದೇ. ನಾವು ಸೋತಿರುವುದೂ ಒಂದೇ. ಆ ಮಟ್ಟಕ್ಕೆ ಬದುಕಿದ್ದೇನೆ. ಚುನಾವಣೆಗೂ ಮುನ್ನ ನಾನು ಹಾಗೂ ಚಲುವರಾಯಸ್ವಾಮಿ ದೂರವಾಣಿಯಲ್ಲಿ ಮಾತನಾಡಿರುವುದು ನಿಜ. ನಮ್ಮಿಬ್ಬರನ್ನು ರಾಜೀ ಮಾಡಲು ಬೇರೆಯವರು ಪ್ರಯತ್ನಿಸಿರುವುದೂ ಸತ್ಯ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಚುನಾವಣೆ ಘೋಷಣೆಯಾದ ಬಳಿಕ ರಾಜಕೀಯವಾಗಿ ಯಾವುದೇ ರೀತಿಯಲ್ಲಿಯೂ ಮಾತನಾಡಿಲ್ಲ ಎಂದರು.
ಅಪಪ್ರಚಾರ ಮಾಡಿದವರ ಮನೆ ಹಾಳಾಗಲಿ: ಚುನಾವಣೆಯಲ್ಲಿ ನಮಗೆ ಮತಗಳು ಕಡಿಮೆಯಾಗಿವೆ ಎಂಬ ನೋವಿದೆ. ಆದರೆ, ಸೋತಿರುವುದಕ್ಕೆ ನನಗೆ ನೋವಿಲ್ಲ. ಬಿಜೆಪಿ ಪಕ್ಷದ 15ರಿಂದ 20ಸಾವಿರ ಮತಗಳು ಏನಾದವು? ನನ್ನದೇ ಆದ 35 ರಿಂದ 40ಸಾವಿರ ಮತಗಳು ಏನಾದವು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಚುನಾವಣೆ ಎದುರಿಸಲು ಸಂಪನ್ಮೂಲ ಕೊಡುವುದರಲ್ಲಿಯೂ ನಾನು ಇವರಿಬ್ಬಗೆ ಹಿಂದೆಬಿದ್ದಿಲ್ಲ. ಸಾಲ ಮಾಡಿ ಸಮಯಕ್ಕೆ ಸರಿಯಾಗಿ ಸಂಪನ್ಮೂಲ ಒದಗಿಸಿದ್ದೇನೆ. ಚಲುವರಾಯಸ್ವಾಮಿಯನ್ನು ಗೆಲ್ಲಿಸಲು ನಾನು ಇಲ್ಲಿಗೆ ಬಂದು ಇಷ್ಟೊಂದು ನೀರು ಕುಡಿಯಬೇಕಿತ್ತೆ. ನನ್ನ ವಿರುದ್ಧ ಅಪಪ್ರಚಾರ ಮಾಡಿದವರ ಮನೆ ಹಾಳಾಗಲಿ ಎಂದು ಶಪಿಸಿದ ಎಲ್‌ಆರ್‌ಎಸ್, ನನ್ನಿಂದ ಏನಾದರೂ ತಪ್ಪಾಗಿದ್ದರೆ ದಯವಿಟ್ಟು ಕ್ಷಮೆ ಇರಲಿ ಎಂದು ಭಾವುಕರಾದರು.
28 ಸಾವಿರ ಎಕರೆ ಜಮೀನು ಮಂಜೂರು: ಈ ಹಿಂದೆ ನಾನು ಶಾಸಕನಾಗಿದ್ದ ವೇಳೆ ತಾಲೂಕಿನ ಬಡ ರೈತರಿಗೆ 28 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಮಂಜೂರು ಮಾಡಿಕೊಟ್ಟಿದ್ದೇನೆ. 139ಕ್ಕೂ ಹೆಚ್ಚುಮಂದಿಗೆ ಉದ್ಯೋಗ ಕೊಡಿಸಿದ್ದೇನೆ. ಅವರ ಕುಟುಂಬದವರಾದರೂ ನನ್ನ ಕೈಹಿಡಿಯಬೇಕಿತ್ತಲ್ಲವೇ ಎಂದು ಕಣ್ಣೀರು ಹಾಕಿದ ಶಿವರಾಮೇಗೌಡ, ಬಿಜೆಪಿ ಪಕ್ಷದ ಕಾರ್ಯಕರ್ತರು ಕೆಲಸ ಕಾರ್ಯಗಳಿಗಾಗಿ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗುವ ಅವಶ್ಯಕತೆಯಿಲ್ಲ. ನಾನೊಬ್ಬ ಮಾಜಿ ಶಾಸಕ ಮಾಜಿ ಸಂಸದನಾಗಿದ್ದು ಅಧಿಕಾರವಿಲ್ಲದಿದ್ದರೂ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಕಷ್ಟಸುಖಗಳಿಗೆ ಸ್ಪಂದಿಸುವ ಜೊತೆಗೆ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳಿದ್ದರೂ ಮಾಡಿಸಿಕೊಡುತ್ತೇನೆ ಎಂದು ಧೈರ್ಯ ತುಂಬಿದರು. ಮುಖಂಡರಾದ ಟಿ.ಕೃಷ್ಣಪ್ಪ, ಟಿ.ಕೆ.ರಾಮೇಗೌಡ, ಬಿದರಕೆರೆ ಮಂಜೇಗೌಡ, ಪಾಳ್ಯ ರಘು, ಹೇಮರಾಜು, ಬಿ.ಬಿ.ಸತ್ಯನ್, ಚಿಣ್ಯ ಕರಿಯಣ್ಣ, ನರಸಿಂಹಮೂರ್ತಿ, ಸೋಮಶೇಖರ್, ಸಿದ್ದಲಿಂಗಸ್ವಾಮಿ, ಬ್ರಹ್ಮದೇವರಹಳ್ಳಿ ಸೋಮು ಸೇರಿದಂತೆ ಬಿಜೆಪಿ ಪಕ್ಷದ ನೂರಾರುಮಂದಿ ಮುಖಂಡರಿದ್ದರು.
ನನ್ನ ಗೆಲುವಿನಲ್ಲಿ ಹೊನ್ನಾವರದ ಮತದಾರರ ಪಾತ್ರ ದೊಡ್ಡದು: ಶಾಸಕ ದಿನಕರ ಶೆಟ್ಟಿ
ಜೆಡಿಎಸ್‌ನಿಂದಲೂ ಆಹ್ವಾನ ಬಂದಿತ್ತು: ನಾನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕೆಂಬ ನಿರ್ಧಾರ ಕೈಗೊಂಡಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ನಲ್ಲಿ ಮಾತುಕತೆ ನಡೆಯುತ್ತಿರುವಾಗಲೇ ಜೆಡಿಎಸ್‌ನಿಂದಲೂ ನನಗೆ ಆಹ್ವಾನ ಬಂದಿತ್ತು. ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ನಿನ್ನನ್ನು ಲೋಕಸಭೆಗೆ ಕಳುಹಿಸುತ್ತೇವೆ. ಈ ಬಾರಿ ಸುರೇಶ್‌ಗೌಡಗೆ ಬೆಂಬಲ ನೀಡಿ ಎಂದು ನನ್ನ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಅಂತಹ ವ್ಯಕ್ತಿಗೆ ಬೆಂಬಲ ಕೊಡುವ ಕೆಟ್ಟಕೆಲಸವನ್ನು ನನ್ನ ಜೀವನದಲ್ಲಿ ಮತ್ತೊಂದು ಸಲ ಮಾಡುವುದಿಲ್ಲವೆಂದು ಖಡಾಖಂಡಿತವಾಗಿ ತಿರಸ್ಕರಿಸಿ, ನನಗೆ ಟಿಕೆಟ್ ಕೊಡಲು ಸಾಧ್ಯವಿಲ್ಲದಿದ್ದರೆ ನನ್ನ ಪುತ್ರ ಚೇತನ್‌ಗೌಡಗೆ ಟಿಕೆಟ್ ಕೊಡುವಂತೆ ಬೇಡಿಕೆಯಿಟ್ಟಿದ್ದೆ ಎಂದು ಹೇಳಿದರು.