Asianet Suvarna News Asianet Suvarna News

ಬಿಜೆಪಿ ಜತೆ ಮೈತ್ರಿ ಆಗದಿದ್ದರೆ ಜೆಡಿಎಸ್‌ಗೆ ಉಳಿಗಾಲವಿಲ್ಲ: ಮಾಜಿ ಸಂಸದ ಶಿವರಾಮೇಗೌಡ

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಜೆಡಿಎಸ್ ಪಕ್ಷಕ್ಕೆ ಉಳಿಗಾಲವೇ ಇಲ್ಲ. ಸಂಕಷ್ಟದಲ್ಲಿರುವ ಜೆಡಿಎಸ್ ಪಕ್ಷ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಂತೆ ನಮ್ಮದೇ ರಾಜ್ಯಭಾರ ಎನ್ನುತ್ತಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು. 

Ex MP LR Shivaramegowda Reaction On BJP JDS Alliance gvd
Author
First Published Sep 14, 2023, 10:23 PM IST

ನಾಗಮಂಗಲ (ಸೆ.14): ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಜೆಡಿಎಸ್ ಪಕ್ಷಕ್ಕೆ ಉಳಿಗಾಲವೇ ಇಲ್ಲ. ಸಂಕಷ್ಟದಲ್ಲಿರುವ ಜೆಡಿಎಸ್ ಪಕ್ಷ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಂತೆ ನಮ್ಮದೇ ರಾಜ್ಯಭಾರ ಎನ್ನುತ್ತಾರೆ. ಇದಕ್ಕೆ ಅವಕಾಶ ನೀಡಬಾರದು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು. ಪಟ್ಟಣದ ಟಿ.ಬಿ.ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಜೆಡಿಎಸ್ ಮೈತ್ರಿ ಕೇವಲ ಲೋಕಸಭಾ ಚುನಾವಣೆಗಷ್ಟೇ ಸೀಮಿತವಾಗಬಾರದು. ಗ್ರಾಪಂ, ತಾಪಂ, ಜಿಪಂ ಸೇರಿದಂತೆ ತಳಹಂತದಿಂದ ಮೈತ್ರಿ ಮಾಡಿಕೊಂಡರೆ ಬಿಜೆಪಿಗೂ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಜೆಡಿಎಸ್‌ನೊಂದಿಗೆ ಮೈತ್ರಿ ವಿಚಾರದಲ್ಲಿ ಬಿಜೆಪಿ ಕೇಂದ್ರದ ನಾಯಕರು ತೀರ್ಮಾನ ತೆಗೆದುಕೊಳ್ಳಲಿ. ಆದರೆ, ಮೈತ್ರಿ ಲೋಕಸಭಾ ಚುನಾವಣೆಗಷ್ಟೇ ಸೀಮಿತವಾಗದೆ ತಳಮಟ್ಟದ ಚುನಾವಣೆಗೂ ಅನ್ವಯವಾಗಬೇಕು. ಮೈತ್ರಿ ಬಗ್ಗೆ ಮಾಜಿ ಸಿಎಂ ಬಿಎಸ್.ಯಡಿಯೂರಪ್ಪ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಯಿಂದಷ್ಟೇ ನನಗೆ ಗೊತ್ತಾಗಿದೆ ಎಂದರು. ಸಂಸದೆ ಸುಮಲತಾ ಅಂಬರೀಷ್ ಅವರು ಬಿಜೆಪಿ ಕೇಂದ್ರದ ನಾಯಕರೊಂದಿಗೆ ಮಾತುಕತೆ ನಡೆಸಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಹೊಂದಾಣಿಕೆ ಮಾಡಿಕೊಂಡಿರುವ ವೇಳೆ ಸಂಸದೆ ಸುಮಲತಾ ನಿಲುವೇನು ಎಂಬುದನ್ನು ಪಕ್ಷ ಚಿಂತನೆ ಮಾಡಬೇಕು. 

ಬಿಜೆಪಿ-ಜೆಡಿಎಸ್ ಮೈತ್ರಿ: ಲೋಕಸಭಾ ಚುನಾವಣೆಯಲ್ಲಿ ಸುಮಲತಾರನ್ನು ಬೆಂಬಲಿಸುತ್ತಾ ಜೆಡಿಎಸ್?

ಆದ್ದರಿಂದ ಮಂಡ್ಯ, ಮೈಸೂರು ಅಥವಾ ತುಮಕೂರು ಕ್ಷೇತ್ರವನ್ನು ಬಿಟ್ಟುಕೊಡುತ್ತಾರಾ ಎಂಬುದು ಇನ್ನೂ ಸಹ ಸ್ಪಷ್ಟತೆಯಿಲ್ಲ. ಆದರೆ, ಪಕ್ಷದ ಕೇಂದ್ರದ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡುವುದಾಗಿ ತಿಳಿಸಿದರು. ರಾಜ್ಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರು ಒಂದಾದರೆ ಕ್ಷೇತ್ರದಲ್ಲಿ ನನ್ನ ಹಾಗೂ ಮಾಜಿ ಶಾಸಕ ಸುರೇಶ್‌ಗೌಡರದ್ದು ಲೆಕ್ಕಕ್ಕೆ ಬರುವುದಿಲ್ಲ. ಯಾವುದೇ ಚರ್ಚೆ ಇಲ್ಲದೆ ಸ್ವಯಂ ಆಗಿ ಒಂದಾಗುತ್ತೇವೆ. 

ಆ ರೀತಿಯ ಸಹಕಾರವಿಲ್ಲದಿದ್ದರಿಂದಲೇ ಸುರೇಶ್‌ಗೌಡ ಕಳೆದ ಚುನಾವಣೆಯಲ್ಲಿ ಅಂಗಲಾಚಿ ಬಿದ್ದಿದ್ದು. ಎಲ್ಲವೂ ಸರಿಯಿದ್ದರೆ ಅವರೇಕೆ ಸೋಲುತ್ತಿದ್ದರು. ಶಿವರಾಮೇಗೌಡ, ಅಪ್ಪಾಜಿಗೌಡ, ಕೆ.ಟಿ.ಶ್ರೀಕಂಠೇಗೌಡ ಎಲ್ಲಿದ್ದಾರೆ ಎಂಬುದು ಈಗ ಅವರಿಗೆ ಗೊತ್ತಾಗಿರಬಹುದು ಎಂದು ಮಾಜಿ ಶಾಸಕ ಸುರೇಶ್‌ಗೌಡರನ್ನು ಜರಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಸ್ಥಾನ ಗಳಿಸಿದ್ದರಿಂದ ಬಿಜೆಪಿಯಿಂದಿಗೆ ಮೈತ್ರಿಗೆ ಮುಂದಾಗಿದ್ದಾರೆ. ಕುಮಾರಣ್ಣ ಹಿಡಿತ ತೆಗೆದುಕೊಳ್ಳುವಲ್ಲಿ ಬಹಳ ಬುದ್ಧಿವಂತರು. ಮೈತ್ರಿ ಹೆಸರಿನಲ್ಲಿ ಜೆಡಿಎಸ್‌ನವರನ್ನು ಉಸಿರಾಡಲು ಬಿಟ್ಟು ಬಿಜೆಪಿ ನಾಯಕರು ಎಲ್ಲರನ್ನೂ ಕರೆದುಕೊಂಡು ಹೋಗಿ ಗದ್ದೆಗೆ ಬೀಳಿಸಬಾರದು ಎಂದು ಒತ್ತಾಯಿಸಿದರು.

ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನೋಡೋದು ತಪ್ಪು: ಯದುವೀರ್‌ ಒಡೆಯರ್‌

ಕಾವೇರಿ ಸಮಸ್ಯೆಗೆ ಮೇಕೆದಾಟು ಯೋಜನೆಯೇ ಪರಿಹಾರ: ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೇ ಬಂದರೂ ಸಹ ಕಾವೇರಿ ಸಮಸ್ಯೆ ಬಗೆಹರಿಯುವುದಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬೇಕೆಂದರೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬರಬೇಕು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈಗಲಾದರೂ ಮೇಕೆದಾಟು ಯೋಜನೆಗೆ ಒಪ್ಪಿಗೆ ಪಡೆಯುವ ಪ್ರಯತ್ನಕ್ಕೆ ಮುಂದಾಗಬೇಕು. ನನಗೆ ಶಸ್ತ್ರ ಚಿಕಿತ್ಸೆ ನಡೆದಿರುವ ಹಿನ್ನೆಲೆಯಲ್ಲಿ ಕಾವೇರಿ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಜಿಲ್ಲೆಯ ರೈತರು ಮತ್ತು ಕಾವೇರಿ ಹೋರಾಟಗಾರರಲ್ಲಿ ಕ್ಷಮೆ ಕೇಳುತ್ತೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಿವರಾಮೇಗೌಡರ ಪುತ್ರ ಎಲ್.ಎಸ್.ಚೇತನ್‌ಗೌಡ, ಪುರಸಭೆ ಮಾಜಿ ಸದಸ್ಯ ಲಾರಿಚನ್ನಪ್ಪ, ವಕೀಲ ಟಿ.ಕೆ.ರಾಮೇಗೌಡ, ತಾಪಂ ಮಾಜಿ ಸದಸ್ಯ ಹೇಮರಾಜು, ಬಿ.ವಿ.ಸತ್ಯನ್, ಸಿ.ಜೆ.ಕುಮಾರ್ ಸೇರಿದಂತೆ ಹಲವರು ಇದ್ದರು.

Follow Us:
Download App:
  • android
  • ios