ತನ್ನ ಮಾತು ಕೇಳದವರನ್ನು ಧ್ವಂಸ ಮಾಡುವುದು ಜನಾರ್ದನ ರೆಡ್ಡಿ ಹುಟ್ಟುಗುಣ: ಸೋಮಶೇಖರ ರೆಡ್ಡಿ
ಜನಾರ್ದನ ರೆಡ್ಡಿ ನಮ್ಮನ್ನು ಅಡ್ಡವಾಗಿಟ್ಟುಕೊಂಡು ತಾನು ಅಕ್ರಮವಾಗಿ ಹಣ ಮಾಡಿದ. ನಮ್ಮನ್ನೂ ಬೆಳೆಸುವ ನೆಪದಲ್ಲಿ ತಾನು ಬೆಳೆದ. ಹಣದಿಂದ ಜನರನ್ನು ಖರೀದಿಸುವುದು ಅವನ ಗುಣ. ಯಾರೇ ಆಗಲಿ ಅವನ ಕೆಳಗೆ ಇರಬೇಕು, ಅವನು ಹೇಳಿದ್ದೇ ಆಗಬೇಕು.

ಬಳ್ಳಾರಿ (ಜೂ.02): ಜನಾರ್ದನ ರೆಡ್ಡಿ ನಮ್ಮನ್ನು ಅಡ್ಡವಾಗಿಟ್ಟುಕೊಂಡು ತಾನು ಅಕ್ರಮವಾಗಿ ಹಣ ಮಾಡಿದ. ನಮ್ಮನ್ನೂ ಬೆಳೆಸುವ ನೆಪದಲ್ಲಿ ತಾನು ಬೆಳೆದ. ಹಣದಿಂದ ಜನರನ್ನು ಖರೀದಿಸುವುದು ಅವನ ಗುಣ. ಯಾರೇ ಆಗಲಿ ಅವನ ಕೆಳಗೆ ಇರಬೇಕು, ಅವನು ಹೇಳಿದ್ದೇ ಆಗಬೇಕು. ಹೇಳಿದ್ದು ಕೇಳಲಿಲ್ಲ ಎಂದರೆ ಧ್ವಂಸ ಮಾಡುವುದೇ ಅವನ ಹುಟ್ಟುಗುಣ ಎಂದು ಮಾಜಿ ಶಾಸಕ ಸೋಮಶೇಖರ ರೆಡ್ಡಿ ತನ್ನ ಸಹೋದರನ ವಿರುದ್ಧವೇ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಸಹೋದರ ಜನಾರ್ದನ ರೆಡ್ಡಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಆತ ಹಣದಿಂದ ಜನರ ಖರೀದಿಸುವುದು ಇಡೀ ಪ್ರಪಂಚಕ್ಕೆ ಗೊತ್ತಿರುವ ಸಂಗತಿ. ಈ ಹಿಂದೆ ಕರುಣಾಕರ ರೆಡ್ಡಿ ಲೋಕಸಭೆಗೆ ಸ್ಪರ್ಧಿಸಿದ್ದಾಗ ಅದೇ ತಂತ್ರ ಬಳಸಿದ. ಕಾಂಗ್ರೆಸ್ ಮತ್ತಿತರ ಪಕ್ಷಗಳ ಮುಖಂಡರನ್ನು ಖರೀದಿಸಿದ. ಹೀಗಾಗಿಯೇ ಕರುಣಾರರೆಡ್ಡಿ ಗೆದ್ದ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ತನ್ನ ಪತ್ನಿಯನು ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿಯವರನ್ನು ಖರೀದಿಸಿಯೇ ಚುನಾವಣೆ ಮಾಡಿದ. ನಾನು ಚಿಕ್ಕವನಿದ್ದಾಗನಿಂದಲೂ ನೋಡಿದ್ದೇನೆ. ಅವನ ಗುಣ ನನಗೆ ಗೊತ್ತು ಎಂದು ಸೋಮಶೇಖರ ರೆಡ್ಡಿ ಹರಿಹಾಯ್ದರು.
ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಸಹಕರಿಸಿ: ಶಾಸಕ ಸಿ.ಎಸ್.ನಾಡಗೌಡ
ನಾನು ಬೆಳೆಸಿದ ಹೇಡಿಗಳು ಸೋತು ಮನೆಯಲ್ಲಿದ್ದಾರೆ. ನಾನು ಗೆದ್ದು ವಿಧಾನಸಭೆಗೆ ಬಂದಿದ್ದೇನೆ ಎಂದು ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ಹೇಳಿಕೆ ನೀಡಿದ್ದಾರೆ. ಹಾಗಾದರೆ, ನಾನು, ಶ್ರೀರಾಮುಲು, ಸೋಮಲಿಂಗಪ್ಪ, ಸುರೇಶಬಾಬು, ಕರುಣಾಕರರೆಡ್ಡಿ ಸೇರಿದಂತೆ ಜಿಲ್ಲೆಯಲ್ಲಿ ಸೋಲುಂಡ ಬಿಜೆಪಿ ಅಭ್ಯರ್ಥಿಗಳು ಹೇಡಿಗಳಾ? ಎಂದು ಪ್ರಶ್ನಿಸಿದರು. ಈ ರೀತಿಯ ಮಾತನಾಡುವುದು ಸರಿಯೆ, ನಾವು ಹೇಡಿಗಳಲ್ಲ. ಜನಾರ್ದನ ರೆಡ್ಡಿಯೇ ಹೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಬಾರಿಯ ಚುನಾವಣೆಯಲ್ಲಿ ನಾನು ಸೋಲಲು ಜನಾರ್ದನ ರೆಡ್ಡಿ ಪಕ್ಷದ ಕೆಆರ್‌ಪಿಪಿ ಅಭ್ಯರ್ಥಿಯೇ ಕಾರಣ.
ಒಂದು ವೇಳೆ ಕೆಆರ್‌ಪಿಪಿ ಸ್ಪರ್ಧೆ ಮಾಡದಿದ್ದರೆ ಖಂಡಿತವಾಗಿ ನಾನು ಗೆಲ್ಲುತ್ತಿದ್ದೆ. ನನ್ನನ್ನು ಸೋಲಿಸಲೆಂದೇ ಜನಾರ್ದನರೆಡ್ಡಿ ತನ್ನ ಪತ್ನಿಯನ್ನು ಚುನಾವಣೆಗೆ ನಿಲ್ಲಿಸಿದರು. ಜತೆಗೆ ಹಿಂದೂ ವಿರೋಧಿ ಶಕ್ತಿಗಳು ಬಲ ಹೆಚ್ಚಾಯಿತು. ಹೀಗಾಗಿ ನಾನು ಸೋಲಬೇಕಾಯಿತು ಎಂದು ವಿವರಿಸಿದರು. ನಾನು ಸೋಲಿನಿಂದ ವಿಚಲಿತನಾಗಿಲ್ಲ. ಬಡವರು ಸೇರಿದಂತೆ ಎಲ್ಲ ಸಮುದಾಯಗಳಿಗೆ ಸಾಕಷ್ಟುಕೆಲಸ ಮಾಡಿದೆ. ಬಳ್ಳಾರಿ ಅಭಿವೃದ್ಧಿಗೆ ಶ್ರಮಿಸಿದೆ ಎಂಬ ಸಮಾಧಾನ ನನಗಿದೆ. ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿಗಳ ಭರವಸೆಯಿಂದ ಸೋಲಾಗಿದೆ. ಬಳ್ಳಾರಿ ನಗರ ವಿಚಾರದಲ್ಲಿ ಅಭಿವೃದ್ಧಿ ಸೋತಿದೆ. ಕಾಂಗ್ರೆಸ್ಸಿನ ಗ್ಯಾರಂಟಿ ಭರವಸೆ ಗೆದ್ದಿದೆ ಎಂದು ವಿಶ್ಲೇಷಿಸಿದರು.
ಚುನಾವಣೆ ಸೋಲು ನನ್ನನ್ನು ಕಂಗಾಲಾಗಿಸಿಲ್ಲ. ಜನಪರವಾಗಿ ಎಷ್ಟೇ ಕೆಲಸ ಮಾಡಿದರೂ ಸೋತೆನಲ್ಲ ಎಂದು ಬೇಸರವಾಯಿತು ಅಷ್ಟೇ. ಸೋತರು ಸುಮ್ಮನೆ ಕೂಡುವುದಿಲ್ಲ. ಪಕ್ಷ ಸಂಘಟನೆ ಮಾಡುತ್ತೇನೆ. ಲೋಕಸಭೆ ಚುನಾವಣೆ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿವೆ. ಪಕ್ಷವನ್ನು ಗೆಲ್ಲಿಸಿಕೊಂಡು ಬರಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ. ಜನರ ಬಳಿ ತೆರಳಿ ಸಂಘಟನೆ ಮಾಡುತ್ತೇವೆ. ಕಾಂಗ್ರೆಸ್ಸಿನವರು ಚುನಾವಣೆ ಮುನ್ನ ನೀಡಿದ ಗ್ಯಾರಂಟಿ ಭರವಸೆಗಳನ್ನು ಈಡೇರಿಸದೆ ಹೋದಲ್ಲಿ ಹೋರಾಟಕ್ಕೆ ಇಳಿಯುತ್ತೇನೆ ಎಂದು ಎಚ್ಚರಿಸಿದರು.
ಜಿಲ್ಲಾ ಉಸ್ತುವಾರಿ ಹೊಣೆ ಯಾರಿಗೆ?: ಎಂ.ಬಿ.ಪಾಟೀಲರೋ? ಶಿವಾನಂದ ಪಾಟೀಲರೋ ಎಂಬ ಕುತೂಹಲ
ಜನಾರ್ದನ ರೆಡ್ಡಿ ಮತ್ತೆ ಬಿಜೆಪಿಗೆ ಬರುವುದಿಲ್ಲ ಎಂದುಕೊಂಡಿರುವೆ. ಯಡಿಯೂರಪ್ಪ, ಶ್ರೀರಾಮುಲು ಅವರಿಗಿರುವ ಇಮೇಜು ಜನಾರ್ದನ ರೆಡ್ಡಿಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸೋಮಶೇಖರ ರೆಡ್ಡಿ ಉತ್ತರಿಸಿದರು. ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್, ಸಂಸದ ವೈ. ದೇವೇಂದ್ರಪ್ಪ, ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ, ಮುಖಂಡರಾದ ಡಾ. ಬಿ.ಕೆ. ಸುಂದರ್, ಡಾ. ಅರುಣಾ ಕಾಮಿನೇನಿ, ಅನಿಲ್‌ನಾಯ್ಡು ಮೋಕಾ ಸುದ್ದಿಗೋಷ್ಠಿಯಲ್ಲಿದ್ದರು.