Asianet Suvarna News Asianet Suvarna News

ಬಿಜೆಪಿಯಲ್ಲಿ ಬಿಎಸ್‌ವೈ, ಶೆಟ್ಟರ್‌, ಈಗ ಡಿವಿಎಸ್‌ ಕಡೆಗಣನೆ: ರೇಣುಕಾಚಾರ್ಯ ಕಿಡಿ

ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಿ ಪಕ್ಷವನ್ನು ಯಾವ ಮಟ್ಟದಲ್ಲಿ ಸಂಘಟಿಸಲು ಸಾಧ್ಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಖಾರವಾಗಿ ಪ್ರಶ್ನಿಸಿದ್ದಾರೆ. 

Ex Minister MP Renukacharya Talks Over DV Sadananda Gowda gvd
Author
First Published Nov 11, 2023, 10:43 PM IST

ಬೆಂಗಳೂರು (ನ.11): ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಿ ಪಕ್ಷವನ್ನು ಯಾವ ಮಟ್ಟದಲ್ಲಿ ಸಂಘಟಿಸಲು ಸಾಧ್ಯ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಖಾರವಾಗಿ ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಿರಿಯ ನಾಯಕರನ್ನು ಒಬ್ಬೊಬ್ಬರನ್ನಾಗಿ ಕಡೆಗಣಿಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ್‌ ಶೆಟ್ಟರ್ ಬಳಿಕ ಇದೀಗ ಡಿ.ವಿ.ಸದಾನಂದಗೌಡರ ಸರದಿ. ಸದಾನಂದಗೌಡ ಅವರನ್ನು ಕಡೆಗಣಿಸುತ್ತಿರುವುದು ಅತ್ಯಂತ ನೋವಿನ ಸಂಗತಿ. ಅವರು ಪಕ್ಷಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು. ಯಡಿಯೂರಪ್ಪ ಅವರನ್ನು 2013 ಮತ್ತು 2023ರಲ್ಲಿ ಮೂಲೆ ಗುಂಪು ಮಾಡಿದರು. 

ಇದರಿಂದ ಬಿಜೆಪಿ ಅಧಿಕಾರಕ್ಕೆ ಬರುವುದರಿಂದ ವಂಚಿತವಾಯಿತು. ಚುನಾವಣೆ ಪೂರ್ವದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದವರ ಆಡಿಯೋ ಬಹಿರಂಗವಾಯಿತು. ಅದರಲ್ಲಿ ಹಲವರ ಹೆಸರು ಪ್ರಸ್ತಾಪ ಆಯಿತು. ಜಗದೀಶ್‌ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ ಸೇರಿದಂತೆ ಹಲವರ ಹೆಸರು ಕೇಳಿಬಂದವು. ಜಗದೀಶ್‌ ಶೆಟ್ಟರ್‌ ಅವರಿಗೆ  ಚುನಾವಣೆಯ ಕೊನೆಯ ಸಮಯದಲ್ಲಿ ಟಿಕೆಟ್‌ ಕೊಡಲಿಲ್ಲ. ಬದಲಿಗೆ ಶೆಟ್ಟರ್‌ ಮಗನಿಗೆ ನೀಡುತ್ತೇವೆ ಎಂದು ಕಡೆಗಣಿಸುವ ಕೆಲಸ ಮಾಡಿದರು ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ 10-15 ವರ್ಷ ಅಧಿಕಾರಕ್ಕೆ ಬರದಿದ್ದರೂ ಕಾಯೋಣ ಎಂಬಂಥ ದುರಂಹಕಾರದ ಹೇಳಿಕೆಗಳನ್ನು ನೀಡಲಾಗಿದೆ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಆಪಾದಿಸಿದರು.

ಅಧಿಕಾರಿಗಳು ಪ್ರಾಮಾಣಿಕ ಜನಸೇವೆ ಮಾಡಿ: ಎಚ್.ಡಿ.ಕುಮಾರಸ್ವಾಮಿ

ಬರ ಅಧ್ಯಯನದಿಂದ ಹೊರಗಿಟ್ಟಿದ್ದು ನನಗೆ ನಷ್ಟವಿಲ್ಲ: ನಾನು ಬಿಜೆಪಿಯಲ್ಲಿದ್ದೇನೆ ಎಂಬುದು ಹನುಮಂತನ ರೀತಿ ಎದೆ ಬಗೆದು ತೋರಿಸಬೇಕಾ, ನಾನು ಬಿಜೆಪಿಯಲ್ಲೇ ಇದ್ದೇನೆ, ಕಾಂಗ್ರೆಸ್‍ಗೆ ಹೋಗೋದಿಲ್ಲ, ಬಿಜೆಪಿ ಬರ ಅಧ್ಯಯನ ಪಟ್ಟಿಯಿಂದ ಹೊರಗಿಟ್ಟರೆ ನನಗೇನು ನಷ್ಟವಿಲ್ಲ ಅದು ಬಿಜೆಪಿಗೇ ನಷ್ಟ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. 

ಹೊನ್ನಾಳಿ -ನ್ಯಾಮತಿ ಅವಳಿ ತಾಲೂಕಿನ ಮಂಡಲದ ಅಧ್ಯಕ್ಷರ ನೇತೃತ್ವದಲ್ಲಿ ಎಚ್.ಕಡದಕಟ್ಟೆ, ಅರಬಗಟ್ಟೆ,ಸೊರಟೂರು, ಮಾದನಬಾವಿ ಗ್ರಾಮಗಳಲ್ಲಿ ಮೂರನೇ ದಿನದ ಬರ ಅಧ್ಯಯನ ಪ್ರವಾಸ ಮಾಡಿ, ರೈತರಿಂದ ಮಾಹಿತಿ ಪಡೆದು ಮಾತನಾಡಿ ರಾಜ್ಯ ಸರ್ಕಾರ 220ಕ್ಕೂ ಹೆಚ್ಚಿನ ತಾಲೂಕುಗಳ ಬರ ಪೀಡಿತವೆಂದು ಘೋಷಿಸಿದ್ದು, ಪರಿಹಾರ ಮಾತ್ರ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ, ಒಂದು ಎಕರೆಗೆ 25 ಸಾವಿರ ರುಪಾಯಿಯಂತೆ ಪರಿಹಾರ ನೀಡ ಬೇಕು ಇಲ್ಲದೇ ಇದ್ದರೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಶ್ರೀ ದೇವೀರಮ್ಮ ಜಾತ್ರಾ ಮಹೋತ್ಸವ: ಇಂದು ಮಧ್ಯರಾತ್ರಿಯಿಂದ ಬೆಟ್ಟವನ್ನೇರಿ ಹರಕೆ ತೀರಿಸುವ ಭಕ್ತರು

ಬಿಎಸ್‌ವೈ, ಸಿಎಂಗೆ ಬರ ಅಧ್ಯಯನ ವರದಿ: ಕಳೆದ ಮೂರು ದಿನಗಳಿಂದ ಅವಳಿ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಬರ ಅಧ್ಯಯನ ನಡೆಸಿ, ರೈತರ ಸಮಸ್ಯೆಗಳ ಆಲಿಸುತ್ತಿದ್ದು ಈ ಬಗ್ಗೆ ವರದಿ ಸಿದ್ಧಪಡಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯದ ಮುಖ್ಯಮಂತ್ರಿಗೆ ನೀಡಿ, ಅವಳಿ ತಾಲೂಕುಗಳಿಗೆ ಆದಷ್ಟು ಬೇಗ ಪರಿಹಾರ ಬಿಡುಗಡೆ ಮಾಡಲು ಮನವಿ ಮಾಡಲಾಗುವುದು ಎಂದು ತಿಳಿಸಿದರು. ಬರಪಟ್ಟಿ ಸಿದ್ದಪಡಿಸಿದವರು ದಾರ ಸೂಜಿಯಂತೆ ಕೆಲಸ ಮಾಡ ಬೇಕು ಆದರೇ ಕತ್ತರಿಯಾಗಿ ಕೆಲಸ ಮಾಡಬಾರದು ಎಂದು ಆಕ್ರೋಶ ವ್ಯಕ್ತ ಪಡಿಸಿದ ರೇಣುಕಾಚಾರ್ಯ. ನಮ್ಮವರೇ ಆದ ಶೇ.90 ರಷ್ಟು ಜನ ನಾನು ಕಾಂಗ್ರೆಸ್‌ಗೆ ಹೋಗುತ್ತೇನೆಂದು ಅಪಪ್ರಚಾರ ಮಾಡುತ್ತಿದ್ದಾರೆ, ಯಾವ ಕಾರಣಕ್ಕೆ ಬರ ಅಧ್ಯಯನ ಪಟ್ಟಿಯಿಂದ ಹೊರಗಿಟ್ಟಿದ್ದಾರೆಂದು ಬಹಿರಂಗ ಪಡಿಸಬೇಕೆಂದರು.

Follow Us:
Download App:
  • android
  • ios