ಅಧಿಕಾರಿಗಳು ಪ್ರಾಮಾಣಿಕ ಜನಸೇವೆ ಮಾಡಿ: ಎಚ್.ಡಿ.ಕುಮಾರಸ್ವಾಮಿ
ಜಿಲ್ಲೆಯಲ್ಲೆಡೆ ಬರ ಆವರಿಸಿದ್ದು, ಕೃಷಿ, ರೇಷ್ಮೇ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ ರೈತರಿಗೆ ನೆರವಾಗಬೇಕು ಎಂದು ಮಾಜಿ ಸಿಎಂ ಹಾಗೂ ಕ್ಷೇತ್ರದ ಶಾಸಕ ಕುಮಾರಸ್ವಾಮಿ ತಾಕೀತು ಮಾಡಿದರು.
ಚನ್ನಪಟ್ಟಣ (ನ.11): ಜಿಲ್ಲೆಯಲ್ಲೆಡೆ ಬರ ಆವರಿಸಿದ್ದು, ಕೃಷಿ, ರೇಷ್ಮೇ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ ರೈತರಿಗೆ ನೆರವಾಗಬೇಕು ಎಂದು ಮಾಜಿ ಸಿಎಂ ಹಾಗೂ ಕ್ಷೇತ್ರದ ಶಾಸಕ ಕುಮಾರಸ್ವಾಮಿ ತಾಕೀತು ಮಾಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹುತೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಲಭ್ಯ ಸಿಬ್ಬಂದಿಯೊಂದಿಗೆ ಸಾರ್ವಜನಿಕ ಕೆಲಸಗಳಿಗೆ ಅಡ್ಡಿಯಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಪ್ರಾಮಾಣಿಕವಾಗಿ ಕೆಲಸ ಮಾಡಿ: ಅಧಿಕಾರಿಗಳು ಯಾವುದೇ ಒತ್ತಡಗಳಿಗೆ ಒಳಗಾಗದೆ ಪ್ರಾಮಾಣಿತೆಯಿಂದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು. ನಾನು ಎಂದಿಗೂ ಕಾನೂನು ಬಾಹಿರ ಕೆಲಸ ಮಾಡಲು ಅವಕಾಶ ನೀಡಿಲ್ಲ. ಹಿಂದೆ ಹೇಗೆ ಕೆಲಸ ಮಾಡಿದಿರೋ ಗೊತ್ತಿಲ್ಲ, ಇನ್ನು ಮುಂದೆ ಬದ್ಧತೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು.
ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು
ಕಂದಾಯ ಇಲಾಖೆ, ಪಿಡಿಒಗಳಿಗೆ ತರಾಟೆ: ತಾಲೂಕಿನಲ್ಲಿ ಅತಿ ಹೆಚ್ಚು ಸಮಸ್ಯೆಗಳು ಸೃಷ್ಟಿಯಾಗುವುದೇ ಕಂದಾಯ ಇಲಾಖೆಯಲ್ಲಿ. ಕಂದಾಯ ಇಲಾಖೆ ಅಧಿಕಾರಿಗಳು ರೈತರನ್ನು ಕಚೇರಿಗೆ ಅಲೆದಾಡಿಸಬೇಡಿ. ಲಂಚಕ್ಕಾಗಿ ಪೀಡಿಸದೇ ಅವರ ಸಂಕಷ್ಟ ಅರಿತು ಕೆಲಸ ಕಾರ್ಯಗಳನ್ನು ತ್ವರಿವಾಗಿ ಮಾಡಿಕೊಡಬೇಕು ಎಂದು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಬಹುತೇಕ ಸಮಸ್ಯೆಗಳಿಗೆ ಪಿಡಿಒಗಳೇ ನೇರ ಕಾರಣಕರ್ತರಾಗಿದ್ದಾರೆ. ಜನರ ಕೆಲಸ ಮಾಡಿಕೊಡದೇ ಜನರನ್ನು ಅಲೆದಾಡಿಸುವ ಜತೆಗೆ ರಾಜಕೀಯ ಮಾಡಿಕೊಂಡು ತಿರುಗುತ್ತಾರೆ. ತಹಸೀಲ್ದಾರ್ ಹಾಗೂ ತಾಪಂ ಇಒ, ಪಿಡಿಒಗಳ ಕಾರ್ಯವೈಖರಿಗಳಿಗೆ ಕಡಿವಾಣ ಹಾಕಬೇಕು. ಪಿಡಿಒಗಳನ್ನು ಬಿಗಿ ಮಾಡಿ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಬೇಕು ಎಂದು ಸೂಚಿಸಿದರು
ಎಂದಿಗೂ ಹಣ ಸಂಗ್ರಹಿಸಲು ಹೇಳಿಲ್ಲ: ನಾನು ಮುಖ್ಯಮಂತ್ರಿಯಾದ ವೇಳೆಯಲ್ಲಿ ಆಗಲಿ, ನನ್ನ ಶಾಸಕತ್ವ ಅವಧಿಯಲ್ಲಾಗಲಿ ಎಂದಿಗೂ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಿಲ್ಲ. ಬೇರೆಯವರಂತೆ ಅಧಿಕಾರಿಗಳ ವಿರುದ್ಧ ಹರಿಹಾಯಲಿಲ್ಲ. ನನ್ನ ಪರ ಹಣ ಸಂಗ್ರಹಿಸುವಂತೆ ಎಂದಿಗೂ ಯಾವ ಅಧಿಕಾರಿಗೂ ಸೂಚಿಸಿಲ್ಲ. ನೀವು ಮಾಡುವ ಕೆಲಸದಿಂದ ನನಗೆ ಕೆಟ್ಟ ಹೆಸರು ಬರಬಾರದು. ಇನ್ನಾದರೂ ಅಧಿಕಾರಿಗಳು ಜನಪರ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ ಎಂದು ಮೃದುವಾಗಿಯೆ ಛಾಟಿ ಬೀಸಿದರು.
ಕಾಂಗ್ರೆಸ್ ವಿರುದ್ಧ ತೆಲಂಗಾಣದಲ್ಲಿ ಪ್ರಚಾರ: ಕೋಡಿಹಳ್ಳಿ ಚಂದ್ರಶೇಖರ್
ಅನುದಾನದ ನಿರೀಕ್ಷೆ ಇಲ್ಲ: ಈ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಮಟ್ಟದ ಅನುದಾನಗಳು ದೊರೆಯುವ ನಿರೀಕ್ಷೆ ಇಲ್ಲ. ಬರುವ ಕೆಲ ಅನುದಾನಗಳು ಸಹ ಸೋರಿಕೆಯಾಗುತ್ತಿದೆ. ಅಧಿಕಾರಿಗಳು ಬರುವ ಅನುದಾನಗಳನ್ನು ಸದ್ಬಳಸಿಕೊಂಡು ಕೆಲಸ ಮಾಡಿ. ನಿಮಗೆ ಯಾವುದೇ ತೊಂದರೆಯಾದರೂ ನನ್ನ ಬಳಿಗೆ ನೇರವಾಗಿ ಬನ್ನಿ, ಆದರೆ ಜನರಿಗೆ ತೊಂದರೆ ನೀಡಬೇಡಿ ಎಂದರು. ಸಭೆಯಲ್ಲಿ ತಹಸೀಲ್ದಾರ್ ಮಹೇಂದ್ರ, ತಾಪಂ ಇಒ ಶಿವಕುಮಾರ್, ತಾಪಂ ಆಡಳಿತಾಧಿಕಾರಿ ರಾಧ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಮೆಹರೀಶ್, ಪೌರಾಯುಕ್ತ ಸಿ.ಪುಟ್ಟಸ್ವಾಮಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.