ರಾಜ್ಯದಲ್ಲಿ ಇನ್ನೊಬ್ಬ ಯಡಿಯೂರಪ್ಪ ಹುಟ್ಟಲು ಸಾಧ್ಯವಿಲ್ಲ: ಎಂ.ಪಿ.ರೇಣುಕಾಚಾರ್ಯ
ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿ ಹಲವು ನಾಯಕರನ್ನು ಬಿಜೆಪಿಯ ಕೆಲವರು ಪಕ್ಷವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಕಡೆಗಣಿಸಿದ್ದು ನಮ್ಮ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಚನ್ನಗಿರಿ (ಸೆ.12): ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿ ಹಲವು ನಾಯಕರನ್ನು ಬಿಜೆಪಿಯ ಕೆಲವರು ಪಕ್ಷವನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಕಡೆಗಣಿಸಿದ್ದು ನಮ್ಮ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಯಡಿಯೂರಪ್ಪ ಯಾವತ್ತೂ ಕೀಳು ರಾಜಕಾರಣ ಮಾಡಿದವರಲ್ಲ. ರಾಜ್ಯದಲ್ಲಿ ಇನ್ನೊಬ್ಬ ಯಡಿಯೂರಪ್ಪ ಹುಟ್ಟಲು ಸಾಧ್ಯವಿಲ್ಲ. ರಾಜ್ಯದ ರಾಜಕಾರಣಕ್ಕೆ ಯಡಿಯೂರಪ್ಪ ಅವಶ್ಯಕತೆ ಇದೆ ಎಂದರು.
ಮಾಡಾಳು ಪ್ರಗತಿ ಸಹಿಸದೇ ಕೆಲವರಿಂದ ಪಿತೂರಿ: ಮಾಜಿ ಶಾಸಕ ವಿರೂಪಾಕ್ಷಪ್ಪ ಚನ್ನಗಿರಿ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಅನೇಕ ಅಭಿವೃದ್ಧಿ ಕಾರ್ಯಗಳ ಮಾಡಿದ್ದಾರೆ. ಅವರ ಪ್ರಗತಿ ಸಹಿಸದ ಕೆಲವರು ಪಿತೂರಿ ಮಾಡಿದ್ದಾರೆ ಸತ್ಯ ಸಂಗತಿ ಏನೆಂದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಸೋಮವಾರ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿನ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಿವಾಸಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜಕಾರಣ ಮಾಡುವ ಉದ್ದೇಶದಿಂದ ನಾನು ವಿರೂಪಾಕ್ಷಪ್ಪನವರ ಭೇಟಿ ಮಾಡಿಲ್ಲ.
ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ ಪ್ರಕಾಶ್ ರಾಜ್!
ವಿರೂಪಾಕ್ಷಪ್ಪನವರ ಕಷ್ಟದ ದಿನಗಳಲ್ಲಿಯೂ ಅವರ ಜೊತೆಗಿದ್ದೆ. ಈಗಲೂ ಜೊತೆಗಿದ್ದೇನೆ. ಮುಂದೆಯೂ ಜೊತೆಗಿರುವೆ ಎಂದು ಹೇಳಿದರು. ವಿರೂಪಾಕ್ಷಪ್ಪ ಪುತ್ರ ಮಾಡಾಳು ಮಲ್ಲಿಕಾರ್ಜುನ್ ಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲ. ರಾಜಕಾರಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆ ಮಾಡಿದ್ದರು. ಮಾಡಾಳು ಮಲ್ಲಿಕಾರ್ಜುನ್ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರೆ ಗೆಲ್ಲುತ್ತಿದ್ದರು ಎಂದು ಹೇಳಿದರು.
ಪಕ್ಷಕ್ಕೆ ಜಿಲ್ಲಾಧ್ಯಕ್ಷರ ಕೊಡುಗೆ ಏನು?: ಮಾಜಿ ಶಾಸಕ ಗುರುಸಿದ್ದನಗೌಡರ ಮೂವರು ಮಕ್ಕಳ ಪಕ್ಷದಿಂದ ಉಚ್ಚಾಟಿಸಲಾಗಿದ್ದು, ಬಿಜೆಪಿಯವರು ನನಗೆ ನೋಟಿಸ್ ನೀಡಿದ್ದಾರೆ. ಅದಕ್ಕೆ ಹೆದರುವವನು ನಾನಲ್ಲ. ಬಿಜೆಪಿ ಜಿಲ್ಲಾಧ್ಯಕ್ಷರನ್ನು ಪಕ್ಷದ ಎಲ್ಲಾ ಶಾಸಕರು ಸೇರಿ ಮಾಡಿದ್ದೇವೆ. ಆದರೆ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳದೆ ಬೇರೆ ಕೆಲಸ ಮಾಡುತ್ತಿದ್ದಾರೆ. ಪಕ್ಷಕ್ಕೆ ಅವರ ಕೊಡುಗೆ ಏನು ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.
ಮಾತಾಡಿಸಲು ಬಂದಿರುವೆ: ಮಾಜಿ ಶಾಸಕ ಗುರುಸಿದ್ದನಗೌಡ ಮಾತನಾಡಿ, ನಾನು ಮಾಡಾಳು ಕುಟುಂಬದ ಹಿತೈಷಿಯಾಗಿದ್ದು ನಾವು ಪಕ್ಷದಲ್ಲಿ ಒಂದು ಕಾಲದಲ್ಲಿ ಶಕ್ತಿಯಾಗಿದ್ದವರು. ಸಾರ್ವಜನಿಕ ಜೀವನದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರನ್ನು ಮಾತನಾಡಿಸಲು ಮನೆಗೆ ಬಂದಿರುವೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ದಾವಣಗೆರೆ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್ ಇದ್ದರು.
ಗೊಡ್ಡು ಬೆದರಿಕೆಗಳಿಗೆ ಹೆದರಲ್ಲ: ನನ್ನ ಮೇಲೆ ಪಕ್ಷ ಏನೇ ತೀರ್ಮಾನ ತೆಗೆದುಕೊಂಡರು ಅದಕ್ಕೆ ನಾನು ಬದ್ಧನಾಗಿದ್ದು, ನಾನು ಬಿಜೆಪಿ ಶಿಸ್ತಿನ ಸಿಪಾಯಿ. ನನಗೆ ಯಾವ ಕೋರ್ ಕಮಿಟಿಯಿಂದ ನೋಟಿಸ್ ಬಂದಿಲ್ಲ. ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವವನು ನಾನಲ್ಲ. ಈ ಬಾರಿ ಲೋಕಸಭಾ ಚುನಾವಣೆಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದೇನೆ.
ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನೋಡೋದು ತಪ್ಪು: ಯದುವೀರ್ ಒಡೆಯರ್
ಬಿಜೆಪಿ ಸಂಘಟಿಸುವ ಕೆಲಸ ಜಿಲ್ಲಾಧ್ಯಕ್ಷರು ಮಾಡಲಿ: ಜಿಲ್ಲಾಧ್ಯಕ್ಷ ಎಂದರೆ ಸುಪ್ರೀಮ್ ಅಲ್ಲ. ಜಿಲ್ಲೆಯಲ್ಲಿ ಯಾವಾಗ ಪ್ರವಾಸ ಮಾಡಿದ್ದಾರೆ. ಕೇಂದ್ರ ಸರ್ಕಾರದ ಅಭಿವೃದ್ಧಿಗಳ ಪ್ರತಿ ಮನೆ-ಮನೆಗಳಿಗೆ ತಲುಪಿಸುವ ಕೆಲಸ ನಾವು ಮಾಡಿದ್ದೇವೆ. ನನ್ನ ಕ್ಷೇತ್ರದ ಮತದಾರರು ನನ್ನ ಬಗ್ಗೆ ತೀರ್ಮಾನ ಮಾಡುತ್ತಾರೆ. ನನ್ನ ವಿರುದ್ಧ ಮಾತನಾಡುವವರ ನಿರ್ಲಕ್ಷಿಸುತ್ತೇನೆ. ನನ್ನ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದು ಬೇಡ. ಪಕ್ಷ ಸಂಘಟನೆ ಮಾಡುವ ಕೆಲಸ ಜಿಲ್ಲಾಧ್ಯಕ್ಷರು ಮಾಡಲಿ ಎಂದು ಎಂ.ಪಿ.ರೇಣುಕಾಚಾರ್ಯ ತಿರುಗೇಟು ನೀಡಿದರು.