ರಾಹುಲ್ ಗಾಂಧಿ ಜೋಡೋ ಎಂದ್ರೆ ಡಿಕೆಸು ಥೋಡೋ ಅಂತಾರೆ: ಮಾಜಿ ಸಚಿವ ರೇಣುಕಾಚಾರ್ಯ
‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಅಂತಾರೆ. ಇತ್ತ ಸಂಸದ ಡಿ.ಕೆ.ಸುರೇಶ್ ದೇಶ ವಿಭಜನೆ ಬಗ್ಗೆ ಮಾತನಾಡುತ್ತಾರೆ. ದೇಶ ವಿಭಜನೆ ಬಗ್ಗೆ ಮಾತನಾಡುವವರು ದೇಶದ್ರೋಹಿಗಳು. ಅಂಥವರನ್ನು ಕೊಲ್ಲಿ ಎಂಬ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರ ಮಾತು ಸರಿಯಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹಾಸನ (ಫೆ.27): ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಅಂತಾರೆ. ಇತ್ತ ಸಂಸದ ಡಿ.ಕೆ.ಸುರೇಶ್ ದೇಶ ವಿಭಜನೆ ಬಗ್ಗೆ ಮಾತನಾಡುತ್ತಾರೆ. ದೇಶ ವಿಭಜನೆ ಬಗ್ಗೆ ಮಾತನಾಡುವವರು ದೇಶದ್ರೋಹಿಗಳು. ಅಂಥವರನ್ನು ಕೊಲ್ಲಿ ಎಂಬ ಬಿಜೆಪಿಯ ಕೆ.ಎಸ್.ಈಶ್ವರಪ್ಪ ಅವರ ಮಾತು ಸರಿಯಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿ, ‘ನರೇಂದ್ರ ಮೋದಿಯವರ ಜನಪ್ರಿಯತೆ ಇನ್ನೂ ಹೆಚ್ಚಾಗಿದೆ. ಕಾಂಗ್ರೆಸ್‌ಗೆ ಬಿಜೆಪಿ, ನರೇಂದ್ರಮೋದಿ ಮೇಲೆ ಆರೋಪ ಮಾಡುವುದನ್ನು ಬಿಟ್ಟರೆ ಬೇರೆ ಏನು ಕೆಲಸ ಇಲ್ಲ.
ರಾಹುಲ್ ಗಾಂಧಿ ಭಾರತ್ ಜೊಡೋ ಯಾತ್ರೆ ಮಾಡುತ್ತಿಲ್ಲ, ಅದು ಥೋಡೋ ಯಾತ್ರೆ’ ಎಂದು ವ್ಯಂಗ್ಯವಾಡಿದರು. ‘ರಾಹುಲ್ ಗಾಂಧಿ ಅವರ ತಾತ, ಅಜ್ಜಿ ಇದ್ದಾಗ, ಭಾರತ ವಿಭಜನೆ ಆಗಿದೆ. ಚೀನಾ, ಪಾಕಿಸ್ತಾನಕ್ಕೆ ಭಾರತದ ಜಾಗ ಬಿಟ್ಟು ಕೊಟ್ಟಿದ್ದರು. ಭಾರತ ಜೋಡೋ ಅಂತಿರಾ, ಸಂಸದ ಡಿ.ಕೆ. ಸುರೇಶ್ ದೇಶ ವಿಭಜನೆ ಬಗ್ಗೆ ಮಾತಾಡುತ್ತಾರೆ. ಇದೆಲ್ಲ ಎಷ್ಟು ಸರಿ. ಕರ್ನಾಟಕಕ್ಕೆ ಏನು ಅನ್ಯಾಯವಾಗಿದೆ? ದೆಹಲಿಯಲ್ಲಿ ಪ್ರತಿಭಟನೆ ಮಾಡಿ ಕರ್ನಾಟಕದ ಗೌರವವನ್ನು ಹಾಳು ಮಾಡುತ್ತಾರೆ. ದೇಶ ವಿಭಜನೆ ಬಗ್ಗೆ ಮಾತನಾಡುವವರು ದೇಶದ್ರೊಹಿಗಳು’ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ವಿಜಯಪುರ ಬಿಜೆಪಿ ಅಭ್ಯರ್ಥಿ ನಾನೇ, ನನ್ನ ಆಸ್ತಿ ಇನ್ನೂ ಜಾಸ್ತಿ ಇದೆ: ಸಂಸದ ರಮೇಶ ಜಿಗಜಿಣಗಿ
ಕೆ.ಎಸ್.ಈಶ್ವರಪ್ಪ ದೇಶ ವಿಭಜನೆ ಬಗ್ಗೆ ಮಾತನಾಡುವವರಿಗೆ ಗುಂಡಿಕ್ಕಬೇಕು ಎಂದಿದ್ದರು. ಆ ರೀತಿ ಕಾನೂನು ಮಾಡಬೇಕು ಎಂದರು. ಆ ರೀತಿ ಮಾಡುವುದು ತಾಯಿಗೆ ದ್ರೋಹ ಮಾಡಿದಂತೆ ಅಲ್ಲವೇ. ರಾಹುಲ್ ಗಾಂಧಿ ಭಾರತದ ಗೌರವ ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಇನ್ನು ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದ್ದು, ಮುಂದೆ ನಡೆಯಲಿರುವ ಲೋಕಾಸಭೆ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ಸರ್ಕಾರ ದಿವಾಳಿಯಾಗಿದೆ, ರಾಜ್ಯ ಸರ್ಕಾರ ನೀಡಿರುವ ಯಾವುದೇ ಗ್ಯಾರಂಟಿ ಜನರಿಗೆ ಸರಿಯಾಗಿ ತಲುಪಿಲ್ಲ.
ಅನ್ನಭಾಗ್ಯ, ಶಕ್ತಿ, ಗೃಹಲಕ್ಷ್ಮಿ, ಯುವನಿಧಿ, ಉಚಿತ ವಿದ್ಯುತ್ ಯೋಜನೆಗಳು ಅರ್ಧದಷ್ಟು ಜನರಿಗೂ ತಲುಪಿಲ್ಲ. ಇದನ್ನೆಲ್ಲ ರಾಜ್ಯದ ಜನ ಗಮನಿಸುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ನರೇಂದ್ರ ಮೋದಿಯವರು ಮತ್ತೆ ಪ್ರಧಾನ ಮಂತ್ರಿ ಆಗುವುದು ಅಷ್ಟೇ ಸತ್ಯ. ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಜನಪರ, ರೈತರ ಪರ, ಎಲ್ಲಾ ವರ್ಗದವರ ಪರ ಆಡಳಿತ ನೀಡಿ ಹತ್ತು ವರ್ಷಗಳ ಕಾಲ ಯಶಸ್ವಿಯಾಗಿ ಅಧಿಕಾರ ನಡೆಸಿದ್ದಾರೆ. ದೇಶದಲ್ಲಿ ಬಿಜೆಪಿಯ ೪೦೦ ಮಂದಿ ಲೋಕಸಭಾ ಸದಸ್ಯರು ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ಧಿ ಶೂನ್ಯ ಗ್ಯಾರಂಟಿ ಕಾಂಗ್ರೆಸ್ ಸರ್ಕಾರ: ಬಿ.ವೈ.ವಿಜಯೇಂದ್ರ ಆರೋಪ
ಇಂಡಿಯಾ ಒಕ್ಕೂಟ ಛಿದ್ರ ಛಿದ್ರವಾಗುತ್ತಿದ್ದು, ಉತ್ತರ ಪ್ರದೇಶದಲ್ಲಿ ಮೈತ್ರಿಕೂಟದಲ್ಲಿ ಕಚ್ಚಾಟ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬೇರೆ ಆಯಿತು, ದೆಹಲಿಯಲ್ಲಿ ಕೇಜ್ರಿವಾಲ್ ಬಿಟ್ಟು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಒಟ್ಟಾರೆ ಇಂಡಿಯಾ ಮೈತ್ರಿಕೂಟ ವಿಭಜನೆ ಆಗುವುದು ಖಚಿತ ಎಂದರು. ಬಿಜೆಪಿ ಮುಖಂಡರಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮಿತ್ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಎಚ್.ಎನ್. ನಾಗೇಶ್, ಚನ್ನಕೇಶವ, ಶೋಭನ್ ಬಾಬು ಇದ್ದರು. ರೇಣುಕಾಚಾರ್ಯ ಅವರನ್ನು ಹಾಸನ ಜಿಲ್ಲೆಯ ಕೆಲ ಬಿಜೆಪಿ ಮುಖಂಡರು ಸನ್ಮಾನಿಸಿದರು.