ವಿಜಯಪುರ ಬಿಜೆಪಿ ಅಭ್ಯರ್ಥಿ ನಾನೇ, ನನ್ನ ಆಸ್ತಿ ಇನ್ನೂ ಜಾಸ್ತಿ ಇದೆ: ಸಂಸದ ರಮೇಶ ಜಿಗಜಿಣಗಿ
ನನ್ನ ಆಸ್ತಿಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಹಲವು ಪಟ್ಟು ಜಾಸ್ತಿಯಾಗಿದೆ ಎಂದು ದೆಹಲಿ ಮೂಲದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ಅವರು ಬರೆದಿದ್ದಕ್ಕಿಂತ ನನ್ನ ಆಸ್ತಿಯ ಪ್ರಮಾಣ ಇನ್ನೂ ಹೆಚ್ಚಿದೆ.
ವಿಜಯಪುರ (ಫೆ.26): ನನ್ನ ಆಸ್ತಿಯಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿದೆ. ಹಲವು ಪಟ್ಟು ಜಾಸ್ತಿಯಾಗಿದೆ ಎಂದು ದೆಹಲಿ ಮೂಲದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಆದರೆ, ಅವರು ಬರೆದಿದ್ದಕ್ಕಿಂತ ನನ್ನ ಆಸ್ತಿಯ ಪ್ರಮಾಣ ಇನ್ನೂ ಹೆಚ್ಚಿದೆ. ಅವರು ದಡ್ಡರು ಕಡಿಮೆ ಬರೆದಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಆಸ್ತಿ 2004ರಲ್ಲಿ ₹54.80 ಲಕ್ಷ ಇತ್ತು. 2019ರಲ್ಲಿ ₹50.41ಕೋಟಿ ಆಗಿದ್ದು, ಆಸ್ತಿಯಲ್ಲಿ ಭಾರೀ ಏರಿಕೆ ಆಗಿದೆ ಎಂದು ಬರೆಯಲಾಗಿದೆ. ಮಾಧ್ಯಮದವರು ನೀವು ಬಹಳ ಕಡಿಮೆ ಬರೆದಿದ್ದೀರಿ. ನನ್ನ ಆಸ್ತಿ ಅದಕ್ಕೂ ಹೆಚ್ಚಿದೆ ಎಂದಿದ್ದಾರೆ.
ಉದಾಹರಣೆಗೆ ಹೇಳಬೇಕು ಅಂದ್ರೆ ಬಹಳ ವರ್ಷಗಳ ಹಿಂದೆ ಒಬ್ಬರು ₹3 ಸಾವಿರಕ್ಕೆ ಒಂದು ಮನೆ ತಗೊಂಡಿದ್ದರೆ ಇದೀಗ ಅದರ ಬೆಲೆ ಒಂದೂವರೆ ಕೋಟಿ ಆಗಿರುತ್ತದೆ. ಅದರಂತೆಯೇ ನನ್ನ ಆಸ್ತಿಯೂ ಹೆಚ್ಚಿಗೆ ಆಗಿದೆ. ನನಗೇನು ಇವರ ಅಜ್ಜ ಕೊಟ್ಟಿದ್ದಾನೆಯೇ ಎಂದು ಪ್ರಶ್ನಿಸಿದ್ದಾರೆ. ನಾನು ಎಲ್ಲಿಯಾದರೂ ರೋಡ್(ರಸ್ತೆ) ಕೆದರಿ(ಅಗೆದು) ರೊಕ್ಕ(ಹಣ) ಮಾಡಿದಿನಾ? ಅಥವಾ ಎಲ್ಲಿಯಾದರೂ ಲಂಚ ಕೇಳಿದಿನಾ? ಎಲ್ಲವೂ ನನ್ನ ಹಾಗೂ ನನ್ನ ಮಕ್ಕಳ ಸ್ವಂತ ದುಡಿಮೆಯಿಂದ ಗಳಿಸಿದ್ದೇವೆ. ಇದರಲ್ಲಿ ಯಾರ ಅಪ್ಪನದ್ದು ಆಸ್ತಿ ಹಂಚಿಕೆ ಇಲ್ಲ,
ಲೋಕಸಭೆ ಚುನಾವಣೆ ಪ್ರಚಾರಕ್ಕೆ ಬಿಜೆಪಿ ರೆಡಿ: ಕೇಂದ್ರ ಸಚಿವ ನಾರಾಯಣಸ್ವಾಮಿ
ನಾನು ಗಾಂಧಿ ಚೌಕ್‌ನಲ್ಲಿರುವ ಅಜ್ಜ (ಮಹಾತ್ಮಾ ಗಾಂಧಿ) ಹೇಗೆ ಅಂಗಿ ಕಳೆದು ಕುಳಿತಿದ್ದಾನೋ ನಾನು ಹಾಗೇ ಇದ್ದೇನೆ. ಬೇಕಾದವರು ಬಂದು ನೋಡಲಿ. ಗ್ರಾಮೀಣ ಪ್ರದೇಶದಲ್ಲಿದ್ದ ನನ್ನ150 ಎಕರೆ ಜಮೀನು ಇದೀಗ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಬಂದಿದೆ. ಹೀಗಾಗಿ ಆಸ್ತಿ ಮೌಲ್ಯ ಸಹಜವಾಗಿಯೇ ಹಲವು ಪಟ್ಟು ಹೆಚ್ಚಾಗಿದೆ. ನಾನೇನು ಆಸ್ತಿ ಹೆಚ್ಚು ಮಾಡಿಕೊಂಡಿಲ್ಲ. ಇರೋ ಆಸ್ತಿಯ ವ್ಯಾಲ್ಯೂವೇಷನ್ ಜಾಸ್ತಿಯಾಗಿದೆ. ಅದನ್ನೇ ಈಗ ನೀವು ಕಡಿಮೆ ಬರೆದಿದ್ದೀರಿ. ಈ ಬಾರಿ ಹೆಚ್ಚಿಗೆ ಬರೆಯಿರಿ ಎಂದು ಜಿಗಜಿಣಗಿ ಗರ್ವದಿಂದ ಹೇಳಿಕೊಂಡರು.
ಈ ಬಾರಿಯೂ ನಾನೇ ಅಭ್ಯರ್ಥಿ ಎಂದ ಸಂಸದ: ಲೋಕಸಭೆ ಚುನಾವಣೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ರಮೇಶ ಜಿಗಜಿಣಗಿ, ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ನಾನೇ ಎಂದು ಸ್ವಯಂ ಆಗಿ ಘೋಷಿಸಿಕೊಂಡಿದ್ಧಾರೆ. ನನಗೆ ಈಗಾಗಲೇ ಪಕ್ಷದಿಂದ ಸೂಚನೆಗಳು ಬಂದಿದ್ದು, ಈ ಬಾರಿಯೂ ನಾನೇ ಕ್ಷೇತ್ರದ ಅಭ್ಯರ್ಥಿ ಎಂದಿದ್ದಾರೆ. ನಾನು ವಿಜಯಪುರ ಕ್ಷೇತ್ರಕ್ಕೆ ಅಂದಾಜು ₹1ಲಕ್ಷ ಕೋಟಿ ಅನುದಾನ ತಂದಿರುವೆ. ಹೀಗಾಗಿ ಈ ಸಲವೂ ನನಗೆ ಈ ಭಾಗದ ಜನ ಓಟ್ ಹಾಕುತ್ತಾರೆ ಎನ್ನುವ ವಿಶ್ವಾಸವಿದೆ ಎಂದಿದ್ದಾರೆ.
Loksabha Elections 2024: ಶೋಭಕ್ಕ ಟಿಕೆಟ್ ಪತನ ಆಗುತ್ತೆ: ಸಚಿವ ಎಂ.ಬಿ.ಪಾಟೀಲ್ ಭವಿಷ್ಯ
ಇನ್ನು ಈ ಬಾರಿ ಬಿಜೆಪಿ -ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆ, ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್‌ನವರು ಟಿಕೆಟ್ ಕೇಳುವವರೇ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಗಜಿಣಗಿ, ಜೆಡಿಎಸ್‌ನವರು ಟಿಕೇಟ್ ಕೇಳ್ತಾರೆ. ಆದ್ರೆ ನಮ್ಮವರು ಯಾವ ಕಾಲಕ್ಕೂ ಕ್ಷೇತ್ರ ಬಿಟ್ಟು ಕೊಡಲ್ಲ. ಒಂದು ವೇಳೆ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟು ಕೊಟ್ಟರೆ ನಾನೇ ಪ್ರಚಾರ ಮಾಡ್ತೀನಿ ಎಂದು ಜಿಗಜಿಣಗಿ ಹೇಳಿದರು.