Asianet Suvarna News Asianet Suvarna News

ರಾಹುಲ್ ಗಾಂಧಿಗೆ ಖರ್ಗೆ, ಸಿದ್ದು ಪಾಠ ಹೇಳಲಿ: ಕೆ.ಎಸ್.ಈಶ್ವರಪ್ಪ ವ್ಯಂಗ್ಯ

ಕನಿಷ್ಠ ಜ್ಞಾನ ಇಲ್ಲದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯದ ಮುಖ್ಯಮಂತ್ರಿ ತರಗತಿ ತೆಗೆದುಕೊಳ್ಳುವುದು ಒಳಿತು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

Ex DCM KS Eshwarappa Slams On Congress Party At Shivamogga gvd
Author
First Published Feb 14, 2024, 11:59 PM IST

ಶಿವಮೊಗ್ಗ (ಫೆ.14): ಕನಿಷ್ಠ ಜ್ಞಾನ ಇಲ್ಲದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯದ ಮುಖ್ಯಮಂತ್ರಿ ತರಗತಿ ತೆಗೆದುಕೊಳ್ಳುವುದು ಒಳಿತು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಓಬಿಸಿ ವರ್ಗಕ್ಕೆ ಸೇರಿದವರಲ್ಲ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. ಹೇಳಿಕೆಯನ್ನು ಗಮನಿಸಿದರೆ ರಾಹುಲ್ ಗಾಂಧಿಗೆ ಎಷ್ಟರಮಟ್ಟಿಗೆ ಜ್ಞಾನ ಇದೆ ಎಂದು ಪರೀಕ್ಷೆ ಮಾಡುವ ಸ್ಥಿತಿ ಎದುರಾಗಿದೆ. ಇದು ನಿಜಕ್ಕೂ ದುರಂತವೇ ಸರಿ ಎಂದರು.

ಎಲ್‌ಕೆಜಿ ಮಕ್ಕಳಿಗೆ ಯಾವುದೇ ಒಂದು ವಿಚಾರ ಗೊತ್ತಿಲ್ಲದೆ ಹೋದರೆ ಶಿಕ್ಷಕರ ಬಳಿ ಹೋಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ರಾಹುಲ್ ಗಾಂಧಿಗೆ ಎಲ್ ಕೆ ಜಿ ಮಕ್ಕಳಿಗಿಂತ ಕಡಿಮೆ ಮೆದುಳು ಹೊಂದಿರುವಂತಿದೆ. ಹೀಗಾಗಿ ಕಡಿಮೆ ಮೆದುಳು ಇರುವ ವಿದ್ಯಾರ್ಥಿ ಯಾರು ಎಂದರೆ ಅದು ರಾಹುಲ್ ಗಾಂಧಿ ಎನ್ನುವಂತಾಗಿದೆ ಎಂದು ಲೇವಡಿ ಮಾಡಿದರು. ನರೇಂದ್ರ ಮೋದಿ ಅವರ ಜಾತಿ ಓಬಿಸಿ ಅಲ್ಲ ಎಂದು ಹೇಳಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂರಿಸಿಕೊಂಡು ಪಾಠ ಮಾಡಲಿ ಎಂದು ಸಲಹೆ ನೀಡಿದರು.

ದೇಶದ ವಿಚಾರವಾಗಿ ನೂರು ನೋಟಿಸ್ ಬಂದರೂ ತಲೆಕೆಡಿಸಿಕೊಳ್ಳಲ್ಲ: ಕೆ.ಎಸ್.ಈಶ್ವರಪ್ಪ ಕಿಡಿ

ಪ್ರಧಾನಿ ನರೇಂದ್ರ ಮೋದಿಯವರು ಒಬಿಸಿ ಜಾತಿಯವರ ಎಂದು ಯಾರೂ ಕೇಳಿಲ್ಲ. ಯಾವ ಜಾತಿಯವರು ಎಂದು ಯಾರು ನೋಡಿಲ್ಲ. ಇಡೀ ಪ್ರಪಂಚದ ನಾಯಕ ಯಾರು ಎಂದರೆ ಅದು ನರೇಂದ್ರ ಮೋದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ತೀರ ಬಾಲಿಷ ತನದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನರೇಂದ್ರ ಮೋದಿಯವರು ಹಿಂದುಳಿದ ವರ್ಗದವರಿಗೆ ದಲಿತರಿಗೆ ಏನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೊತ್ತಿರಬಹುದು. 28 ಹಿಂದುಳಿದ ವರ್ಗ ದವರು ಹಾಗೂ 10 ಮಂದಿ ಎಸ್ಸಿ /ಎಸ್ಟಿ ಸೇರಿದಂತೆ 38 ಮಂದಿಯನ್ನು ಜೋಡಿಸಿ ಮಂತ್ರಿ ಮಂಡಲ ಮಾಡಿದವರು ಯಾರು ಎಂದರೆ ಅದು ನರೇಂದ್ರ ಮೋದಿ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಅವರ ಕುರಿತಾಗಿ ಹೇಳಿಕೆ ನೀಡುವಾಗ ಯೋಚಿಸಬೇಕು ಎಂದರು.

1994ರಲ್ಲಿ ಗುಜರಾತ್ ನಲ್ಲಿ ಕಾಂಗ್ರೆಸ್ ಸರ್ಕಾರ ನರೇಂದ್ರ ಮೋದಿ ಅವರ ಜಾತಿಯನ್ನು ಹಿಂದುಳಿದ ವರ್ಗಕ್ಕೆ ಸೇರಿಸಿತ್ತು. ಈ ಮಾಹಿತಿ ಇಲ್ಲದ ಅಜ್ಞಾನಿ ರಾಹುಲ್ ಗಾಂಧಿ ನರೇಂದ್ರ ಮೋದಿಯವರು ಹಿಂದುಳಿದ ವರ್ಗಕ್ಕೆ ಸೇರಿಲ್ಲ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಇಡೀ ವಿಶ್ವದ ಜನರ ಮನಸ್ಸನ್ನು ಗೆದ್ದಿರುವ ನಾಯಕ. ಅಂತಹ ರಾಷ್ಟ್ರೀಯ ನಾಯಕನಿಗೆ ಅಪಮಾನ ಆಗುವಂತಹ ಮಾತನ್ನು ರಾಹುಲ್ ಗಾಂಧಿ ಆಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರದ್ರೋಹಿ ಹೇಳಿಕೆ: ಈಶ್ವರಪ್ಪನವರ ಮಾತಿಗೆ ಅಪಾರ್ಥ ಕಲ್ಪಿಸಲಾಗುತ್ತಿದೆ: ಬಿ.ಎಸ್‌.ಯಡಿಯೂರಪ್ಪ

ರಾಹುಲ್ ಗಾಂಧಿ ಹೇಳಿರುವ ಕಾರಣಕ್ಕೆ ಈಗ ನಾವು ಕೂಡ ರಾಹುಲ್ ಗಾಂಧಿ ಜಾತಿ ಯಾವುದು ಎಂದು ಪ್ರಶ್ನೆ ಮಾಡಬೇಕಾಗಿದೆ. ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿ, ತಂದೆ ರಾಜೀವ್ ಗಾಂಧಿ, ಅವರ ಅಜ್ಜಿ ಇಂದಿರಾಗಾಂಧಿ. ಆದರೆ ಅಜ್ಜ ಫಿರೋಜ್ ಖಾನ್. ಹಾಗಾಗಿ ಸಾರ್ವಜನಿಕರೇ ರಾಹುಲ್ ಗಾಂಧಿ ಜಾತಿ ಬಗ್ಗೆ ಚರ್ಚೆ ಮಾಡುತ್ತಾರೆ. ಮಿಶ್ರತಳಿ, ಬೆರಕೆನಾ ಇದನ್ನು ನಾನು ಹೇಳುತ್ತಿಲ್ಲ ಸಾರ್ವಜನಿಕರು ಹೇಳುತ್ತಿದ್ದಾರೆ. ನಿಮ್ಮ ಜಾತಿ ಯಾವುದು ಎಂದು ದೇಶದ ಜನಕ್ಕೆ ನೀವು ಹೇಳಬೇಕು. ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು ಎಂದರು. ದೇಶದ ಪ್ರಧಾನಿಯನ್ನು ಅಪಮಾನಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೇಶದ ಜನರ ಮುಂದೆ ಕ್ಷಮೆ ಕೇಳಬೇಕು. ಇಲ್ಲವೇ ರಾಹುಲ್ ಗಾಂಧಿಯವರನ್ನು ಪಕ್ಷದಿಂದ ಕಿತ್ತು ಬಿಸಾಕಬೇಕು ಎಂದು ಒತ್ತಾಯಿಸಿದರು.

Follow Us:
Download App:
  • android
  • ios