ಕರ್ನಾಟಕದಲ್ಲಿ ಕಾಂಗ್ರೆಸ್‌ ನಿಚ್ಚಳ ಬಹುಮತದೊಡನೆ ಅಧಿಕಾರಕ್ಕೆ ಬರಲಿದ್ದು, ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು. 

ಮೈಸೂರು (ಫೆ.17): ಕರ್ನಾಟಕದಲ್ಲಿ ಕಾಂಗ್ರೆಸ್‌ ನಿಚ್ಚಳ ಬಹುಮತದೊಡನೆ ಅಧಿಕಾರಕ್ಕೆ ಬರಲಿದ್ದು, ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಪತ್ರಕರ್ತರ ಸಂಘವು ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಈಗ ಮೂಲ ಕಾಂಗ್ರೆಸಿಗರು ಮತ್ತು ವಲಸಿಗ ಕಾಂಗ್ರೆಸಿಗರು ಎಂಬುದಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಈ ರೀತಿಯ ಮಾತು ಕೇಳಿಬರುತ್ತದೆಯೇ ಹೊರತು, ನಂತರ ಕಾಂಗ್ರೆಸ್‌ ಒಂದೇ ಆಗಿರುತ್ತದೆ ಎಂದರು. ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ನಾವು ಸುಮ್ಮನೆ ಯಾವುದೇ ಪಕ್ಷವನ್ನೂ ನಿರ್ಲಕ್ಷ್ಯಿಸಿ ಮಾತನಾಡಬಾರದು. 

ಈ ನಡುವೆ ಆಮ್‌ ಆದ್ಮಿ ಕೂಡ ಸೆಣಸುತ್ತಿದೆ. ನಾವು ಕಳೆದ ಬಾರಿ ಜೆಡಿಎಸ್‌ ಜೊತೆ ಸೇರಿ ಏನಾಯಿತು ಎಂಬುದು ಗೊತ್ತಿದೆ. ಈ ಬಾರಿ ಕಾಂಗ್ರೆಸ್‌ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ. ಟಿಕೆಟ್‌ ನೀಡುವಾಗ ಗೆಲ್ಲುವ ಮತ್ತು ಸಮರ್ಥ ಅಭ್ಯರ್ಥಿಗೆ ಮಾತ್ರ ಟಿಕೆಟ್‌ ನೀಡಲಾಗುತ್ತದೆ ಎಂದರು. ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ಎಂಬ ವಾದದ ಪ್ರಸ್ತಾಪ ಇಲ್ಲ. ಅಲ್ಲದೆ ಒಬ್ಬರೇ ಅಭ್ಯರ್ಥಿಗೆ ಎರಡೆರಡು ಕಡೆ ಟಿಕೆಟ್‌ ಕೊಡುವ ಕುರಿತು ಪಕ್ಷ ತೀರ್ಮಾನ ಕೈಗೊಳ್ಳುತ್ತದೆ. ಇನ್ನು ವಲಸಿಗರಿಗೆ ಅನ್ಯಾಯವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಯಾವ ನಿರ್ದಿಷ್ಟ ವಿಷಯದಲ್ಲಿ ಇಂತಹ ಸಮಸ್ಯೆ ಉಂಟಾಗಿದೆ ಎಂಬುದನ್ನು ಗಮನಿಸಬೇಕು. 

ಭಾರತದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಬಿಜೆಪಿ: ರಣದೀಪ್‌ ಸಿಂಗ್‌ ಸುರ್ಜೇವಾಲ

ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಯಾರು ಸೋಲಿಸಲು ಮುಂದಾಗಿದ್ದರೋ ಅವರ ಮಾತಿಗೆ ಎಷ್ಟುಮನ್ನಣೆ ನೀಡಲಾಗುತ್ತದೆ ಎಂದು ಅವರು ಹೇಳಿದರು. ಕಾಂಗ್ರೆಸ್‌ನಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುವ ಕುರಿತು ನಾವು ತೀರ್ಮಾನಿಸುವುದಿಲ್ಲ. ಬದಲಿಗೆ ಚುನಾವಣೆಯಲ್ಲಿ ಬಹುಮತ ಪಡೆದ ಬಳಿಕ ಹೈಕಮಾಂಡ್‌ ಭೇಟಿ ನೀಡಿ ಎಲ್ಲಾ ಶಾಸಕರ ಅಭಿಪ್ರಾಯಪಡೆದು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗುತ್ತದೆ.

ಐಟಿ ದಾಳಿ ಸರಿಯಲ್ಲ: ಬಿಬಿಸಿ ಮೇಲೆ ಐಟಿ ದಾಳಿ ನಡೆಸಿರುವುದು ಸರಿಯಲ್ಲ. ಐಟಿ, ಸಿಬಿಐ ಮುಂತಾದ ಸ್ವಾತಂತ್ರ್ಯ ಸಂಸ್ಥೆಗಳನ್ನು ರಾಜಕೀಯ ಪ್ರೇರಿತವಾಗಿ ಬಳಸಿಕೊಳ್ಳುವುದು ತರವಲ್ಲ. ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಈ ರೀತಿ ಭಯದ ವಾತಾವರಣ ಸೃಷ್ಟಿಸುವ ಕೆಲಸ ಮಾಡಬಾರದು ಎಂದರು.

ಅಹಂಕಾರ ಇಳಿಯುತ್ತದೆ: ಮುಂದಿನ ಚುನಾವಣೆಯಲ್ಲಿ ವಿಪಕ್ಷವೇ ಇರುವುದಿಲ್ಲ ಎಂಬ ಕೇಂದ್ರ ಸಚಿವ ಅಮಿತ್‌ ಶಾ ಹೇಳಿಕೆಗೆ ಮೊಯ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ಅಂಹಕಾರದ ಹೇಳಿಕೆಗಳು ಕೊನೆಗಾಣುತ್ತವೆ ಎಂದರು.

ಸುಪ್ರಿಂ ಕೋರ್ಟ್‌ ಸೂಚನೆ ಪಾಲಿಸಬೇಕು: ಕೇಂದ್ರವು ಕೋಲ್ಜಿಯಂನಲ್ಲಿ ಬದಲಾವಣೆ ತರಬೇಕು ಎಂದು ಕೊಂಡಿತ್ತು. ಇದಕ್ಕೆ ನಮ್ಮ ಸರ್ಕಾರ ಇದ್ದಾಗಲೇ ಸುಪ್ರಿಂ ಕೋರ್ಟ್‌ ಬೇಡ ಎಂದು ಹೇಳಿತ್ತು. ಮತ್ತೆ ತೀರ್ಪಿನ ಮೇಲೆ ವಿರುದ್ಧವಾಗಿ ಮಾತನಾಡುವುದು ಸರಿಯಲ್ಲ. ಸುಪ್ರಿಂ ಕೋರ್ಟ್‌ನ ಸೂಚನೆ ಪಾಲಿಸಬೇಕು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಟಿ. ರವಿಕುಮಾರ್‌, ಉಪಾಧ್ಯಕ್ಷರಾದ ಅನುರಾಗ್‌ ಬಸವರಾಜ್‌, ಧರ್ಮಾಪುರ ನಾರಾಯಣ್‌, ಖಜಾಂಚಿ ಪಿ. ರಂಗಸ್ವಾಮಿ ಇದ್ದರು.

ನಾವೆಂದೂ ಮತಗಳಿಗಾಗಿ ಆಮಿ​ಷ​ವೊಡ್ಡಲ್ಲ: ಶಾಸಕಿ ಅನಿತಾ ಕುಮಾ​ರ​ಸ್ವಾಮಿ

ಚಾಮರಾಜ ವಿಧಾವಸಭಾ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗೆ ಟಿಕೆಟ್‌ ನೀಡಲಾಗುವುದು. ಯಾರು ಎಷ್ಟೇ ಪ್ರಯತ್ನಿಸಿದರೂ ಪಕ್ಷವನ್ನು ಸೋಲಿಸಲು ಸಾಧ್ಯವಿಲ್ಲ. ಈ ಬಾರಿ ಗೊಂದಲಕ್ಕೆ ಅವಕಾಶ ಇಲ್ಲದಂತೆ ನೋಡಿಕೊಳ್ಳುತ್ತೇವೆ.
- ಎಂ. ವೀರಪ್ಪ ಮೊಯ್ಲಿ, ಮಾಜಿ ಸಿಎಂ