Asianet Suvarna News Asianet Suvarna News

ಡಿಕೆಶಿ ಸವಾಲು ಒಪ್ಪಿದ್ದೇನೆ, ಚರ್ಚೆಗೆ ರೆಡಿ: ಎಚ್‌ಡಿಕೆ ಪ್ರತಿಸವಾಲು

‘ನನ್ನ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿ ಬಹಿರಂಗ ಚರ್ಚೆಗೆ ಬರುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಕಿರುವ ಸವಾಲನ್ನು ಸ್ವೀಕರಿಸಿದ್ದೇನೆ. ವಿಧಾನ ಸಭೆಯಲ್ಲಿಯೇ ಚರ್ಚೆ ಮಾಡಲು ಸಿದ್ಧನಿದ್ದೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಸವಾಲು ಹಾಕಿದ್ದಾರೆ.
 

Ex CM HD Kumaraswamy Slams On DCM DK Shivakumar gvd
Author
First Published Oct 27, 2023, 3:00 AM IST

ಬೆಂಗಳೂರು (ಅ.27): ‘ನನ್ನ ವಿರುದ್ಧ ವೈಯಕ್ತಿಕ ವಾಗ್ದಾಳಿ ನಡೆಸಿ ಬಹಿರಂಗ ಚರ್ಚೆಗೆ ಬರುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಕಿರುವ ಸವಾಲನ್ನು ಸ್ವೀಕರಿಸಿದ್ದೇನೆ. ವಿಧಾನ ಸಭೆಯಲ್ಲಿಯೇ ಚರ್ಚೆ ಮಾಡಲು ಸಿದ್ಧನಿದ್ದೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತಿಸವಾಲು ಹಾಕಿದ್ದಾರೆ. ಗುರುವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪಲಾಯನ ಮಾಡಲ್ಲ. ನನ್ನ ಬಳಿಯೂ ಸಾಕಷ್ಟು ಸರಕು ಇದೆ. ಬಹಿರಂಗ ಚರ್ಚೆಗೆ ಸಿದ್ಧ. ಹೆಚ್ಚು ಟಿಆರ್‌ಪಿ ಇರುವ ಚಾನಲ್‌ನಲ್ಲಿ ಬಹಿರಂಗ ಚರ್ಚೆಗೆ ಬನ್ನಿ ಎಂದು ಡಿ.ಕೆ.ಶಿವಕುಮಾರ್ ನನಗೆ ಬಹಿರಂಗ ಸವಾಲು ಹಾಕಿದ್ದಾರೆ. 

ರಾಮನಗರ ಜಿಲ್ಲೆಯ ಅಭಿವೃದ್ಧಿಯನ್ನು ಯಾರು ಮಾಡಿದರು ಎಂಬ ವಿಷಯವೂ ಸೇರಿದಂತೆ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬೆಂಗಳೂರು ಸುತ್ತ ಇರುವ ಭೂಮಿಗಳನ್ನು ಯಾರು ಕೊಳ್ಳೆ ಹೊಡೆಯಲು ಹೊರಟಿದ್ದಾರೆ ಎಂಬ ಬಗ್ಗೆಯೂ ಬಹಿರಂಗ ಚರ್ಚೆ ಸದನದಲ್ಲಿಯೇ ನಡೆಯಲಿ. ದಾಖಲೆ ಸಮೇತ ಚರ್ಚೆ ಮಾಡಲು ಸಿದ್ಧನಿದ್ದೇನೆ ಎಂದು ಹೇಳಿದರು. ವಿಜಯದಶಮಿ ಆಸುಪಾಸಿನಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ವೈಯಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭೆಯಲ್ಲಿಯೇ ಚರ್ಚೆಗೆ ನಾನು ಸಿದ್ಧನಿದ್ದು, ಚರ್ಚೆಗೆ ಬರಲಿ. ನಾನು ಸಹ ಸವಾಲನ್ನು ಸ್ವೀಕಾರ ಮಾಡುತ್ತೇನೆ. 

ನನಗೆ 61 ಮುಂದೆ 100 ಆದರು ನನ್ನ ಅಮ್ಮನೇ ನನ್ನ ದೇವರು: ಹುಲಿ ಉಗುರು ಸಂಕಟ ಬಿಚ್ಚಿಟ್ಟ ನಟ ಜಗ್ಗೇಶ್!

ನನ್ನ ಬಳಿಯೂ ಸಾಕಷ್ಟು ಸರಕು ಇದೆ. ನಾನು ಬಿಡದಿಯಲ್ಲಿ ಖರೀದಿ ಮಾಡಿರುವ 44 ಎಕರೆ ಜಾಗ ರಾಜಕೀಯಕ್ಕೆ ಬರುವ ಮುನ್ನ ಖರೀದಿಸಿದ್ದಾಗಿದೆ. ಮಾಲ್ ಆರಂಭ ಮಾಡಿ ಬಿಸಿನೆಸ್ ಪ್ಯಾಶನ್ ಅಂತ ನಾನು ಹಣ ಸಂಪಾದನೆ ಮಾಡಿಲ್ಲ ಎಂದು ತಿರುಗೇಟು ನೀಡಿದರು. ಕನಕಪುರ ಯಾರಿಂದ ಹೇಗೆ ಅಭಿವೃದ್ಧಿ ಹೊಂದಿದೆ ಎಂಬ ಚರ್ಚೆಗೂ ನಾನು ಸಿದ್ಧನಿದ್ದೇನೆ. ಅವರ ಯಾವುದೇ ಸವಾಲಿಗೂ ನಾನು ರೆಡಿ. ವಿಧಾನಸೌಧದಲ್ಲಿ ಚರ್ಚೆ ಮಾಡೋಕೆ ನಾನು ಸಿದ್ದ. ಸಮಯ, ಸ್ಥಳ ಎಲ್ಲಾ ಡಿ.ಕೆ.ಶಿವಕುಮಾರ್ ನಿಗದಿ ಮಾಡಲಿ, ನಾನು ಚರ್ಚೆಗೆ ಬರುತ್ತೇನೆ ಎಂದು ಸವಾಲು ಹಾಕಿದರು.

ಕನಕಪುರ ಸೇರಿ ರಾಮನಗರ ಜಿಲ್ಲೆಯ ಭೂಮಿಯನ್ನು ಲೂಟಿ ಮಾಡಲು ಬೆಂಗಳೂರು ದಕ್ಷಿಣ ಜಿಲ್ಲೆ ಎನ್ನುತ್ತಿದ್ದಾರೆ. ಯಾರಿಗೆ ದಕ್ಷಿಣೆಯಾಗಿ ಕೊಡಲು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ ಅವರು, ಶಾಂತಿನಗರ ಹೌಸಿಂಗ್ ಸೊಸೈಟಿ ಅಸಲಿ ನಕಲಿ ಮಾಡಿದ್ದು ಯಾರು? ಡಿ.ಕೆ.ಶಿವಕುಮಾರ್‌ ಯಾರನ್ನು ಬೇಕಾದರೂ ಕೊಂಡುಕೊಳ್ಳುತ್ತಾರೆ. ಬ್ರ್ಯಾಂಡ್ ಬೆಂಗಳೂರು ಎನ್ನುವವರು ಕೆರೆ-ಕಟ್ಟೆ ನುಂಗಿ ಹಾಕಿದ್ದಾರೆ. ಯಾವ ಯಾವ ಕೆರೆ ನುಂಗಿದ್ದೀರಾ ಎನ್ನುವ ಬಗ್ಗೆ ಪಟ್ಟಿ ಬೇಕಾ? ಯಾವ ಮುಖ ಇಟ್ಟುಕೊಂಡು ಕೆಂಪೇಗೌಡರ ಹೆಸರು ಹೇಳುತ್ತಾರೆ? ಈಗ ಕನಕಪುರ, ರಾಮನಗರದ ಕೆರೆಗಳನ್ನು ಮುಗಿಸಲು ಹೊರಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿಗೆ ರಾಮನಗರವನ್ನು ಸೇರಿಸಿದರೆ ರೈತರ ಕೃಷಿಭೂಮಿಗೆ ಸಂಚಕಾರ: ಅಶ್ವತ್ಥ ನಾರಾಯಣ

1,400 ಕೋಟಿ ರು. ಸಂಪಾದನೆ ಹೇಗೆ: ಡಿ.ಕೆ.ಶಿವಕುಮಾರ್ 1,400 ಕೋಟಿ ರುಪಾಯಿ ಹೇಗೆ ಸಂಪಾದನೆ ಮಾಡಿದ್ದಾರೆ ಎಂಬುದನ್ನು ಹೇಳಬೇಕು. ನನಗೆ ಹೇಳುವುದು ಬೇಡ, ಕನಕಪುರದ ಜನತೆಗಾದರೂ ಹೇಳಬೇಕು. ದೊಡ್ಡ ಆಲದಹಳ್ಳಿಯಲ್ಲಿ ಹೇಗೆ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬುದು ಗೊತ್ತಿದೆ. ಎಂಟು ಬಾರಿ ಶಾಸಕರಾಗಿ 1,400 ಕೋಟಿ ರುಪಾಯಿ ಹೇಗೆ ಸಂಪಾದನೆ ಮಾಡಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಆರ್‌.ಮಂಜುನಾಥ್‌, ವಕೀಲ ಎ.ಪಿ.ರಂಗನಾಥ್‌ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios