ನನಗೆ 61 ಮುಂದೆ 100 ಆದರು ನನ್ನ ಅಮ್ಮನೇ ನನ್ನ ದೇವರು: ಹುಲಿ ಉಗುರು ಸಂಕಟ ಬಿಚ್ಚಿಟ್ಟ ನಟ ಜಗ್ಗೇಶ್!
ನನಗೆ 61. ಮುಂದೆ 100 ಆದರು ನನ್ನ ಅಮ್ಮನೇ ನನ್ನ ದೇವರು. ನಾನು ಏನೇ ಕಳೆದುಕೊಂಡರೂ ಸಂಕಟ ಪಡಲ್ಲ. ಆದರೆ, ನನ್ನ ಅಮ್ಮನ ಕಡೇ ಪ್ರೀತಿ ಕಳೆದುಕೊಂಡಿದ್ದು ಶೂನ್ಯದಂತೆ ಆಯಿತು ಎಂದು ನಟ ಜಗ್ಗೇಶ್ ಎಕ್ಸ್ (ಟ್ವಿಟರ್) ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು (ಅ.26): ವರ್ತೂರು ಸಂತೋಷ್ ಅವರು ಹುಲಿ ಉಗುರು ಪ್ರಕರಣ ಹೊರಬರುತ್ತಿದ್ದಂತೆಯೇ, ಈಗ ಹುಲಿ ಉಗುರು ಹೊಂದಿರುವ ಅನೇಕರಿಗೆ ಸಂಕಷ್ಟ ಎದುರಾಗಿದೆ. ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಬಳಿಯೂ ಹುಲಿ ಉಗುರಿನ ಲಾಕೆಟ್ ಇದೆ ಎನ್ನಲಾಗಿತ್ತು. ಈ ವಿಚಾರ ಗೊತ್ತಾದ ಕೂಡಲೇ ಅವರ ಮನೆಗೂ ಅರಣ್ಯಾಧಿಕಾರಿಗಳು ಭೇಟಿ, ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಬಗ್ಗೆ ನಟ ಜಗ್ಗೇಶ್ ಎಕ್ಸ್ (ಟ್ವಿಟರ್) ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಭಾವನಾತ್ಮಕವಾಗಿಯೂ ಎಕ್ಸ್ ಮಾಡಿದ್ದಾರೆ.
ನನಗೆ 61. ಮುಂದೆ 100 ಆದರು ನನ್ನ ಅಮ್ಮನೇ ನನ್ನ ದೇವರು. ನಾನು ಏನೇ ಕಳೆದುಕೊಂಡರೂ ಸಂಕಟ ಪಡಲ್ಲ. ಆದರೆ, ನನ್ನ ಅಮ್ಮನ ಕಡೇ ಪ್ರೀತಿ ಕಳೆದುಕೊಂಡಿದ್ದು ಶೂನ್ಯದಂತೆ ಆಯಿತು. ತಂದೆ ತಾಯಿ ಹೃದಯದಲ್ಲಿ ಇರಿಸಿಕೊಂಡ ನನಗೆ ತಂದೆ ತಾಯಿ ಅನಾಥಾಶ್ರಮಕ್ಕೆ ಅಟ್ಟುವ ಈ ಕಾಲದ ಕಾಲಜ್ಞಾನಿಗಳಿಗೆ ಪ್ರೀತಿ ಅರಿವಾಗದು. ದೇವರಿದ್ದಾನೆ ಉತ್ತರಿಸಲು. ಕಾಲ ಬರುತ್ತದೆ ನಿಮಗೂ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಂದು ಎಕ್ಸ್ (ಟ್ವೀಟ್) ಮಾಡಿ, ‘ಹೋರಾಡುವ ಸಹೋದರ ಸಹೋದರಿಯರೆ, ಖಂಡಿತ ನಿಮ್ಮ ಅವಶ್ಯಕತೆ ಸಮಾಜಕ್ಕೆ ಇದೆ. ಸಮಾಜದಲ್ಲಿ ಅನೇಕ ಕಾಡುಪ್ರಾಣಿ ರೂಪದ ಜನ ಹೆಚ್ಚಿದ್ದಾರೆ. ಅಂಥ ಕೊಳಕರ ಬೆತ್ತಲುಮಾಡಿ. ಭಾಷೆ, ಭ್ರಷ್ಟಾಚಾರ ಪಾಪಕೃತ್ಯ ನೋಡಿದರು ಮೌನಮುನಿಗಳು. ಅದೇ ಕಲಾವಿದರ ವಿಷಯ ಬಂದರೆ ಆರ್ಭಟವೇಕೆ? ಇದು ನಿಮ್ಮನ್ನು ರಂಜಿಸಿದಕ್ಕೆ ನೀಡುವ ಉಡುಗೊರೆಯೇ? ಆದರು ನಿಮಗೆ ಶುಭಕೋರುವೆ ಎಂದು ಬರೆದುಕೊಂಡಿದ್ದಾರೆ ಜಗ್ಗೇಶ್.
ತಲೆ ತಗ್ಗಿಸುವ ಯಾವ ಕೆಲಸ ಮಾಡಿಲ್ಲಾ, ಅಮ್ಮ ನೀಡಿದ ಹಳೆಯ ಲಾಕೆಟ್ ಎಂದಿದ್ದೇನೆ: ಪಾಚ್ಕೊಳಿ ಎಂದ ನಟ ಜಗ್ಗೇಶ್!
ಹೈಕೋರ್ಟ್ ಮೆಟ್ಟಿಲೇರಿದ ಜಗ್ಗೇಶ್: ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಹುಲಿ ಉಗುರು ಧರಿಸಿದವರ ವಿರುದ್ಧ, ಅರಣ್ಯಾಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ. ನಿನ್ನೆಯಷ್ಟೇ ದರ್ಶನ್, ನಿಖಿಲ್ ಕುಮಾರ್, ಜಗ್ಗೇಶ್ ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದ್ದರು. ಜೊತೆಗೆ ಅವರ ನಿವಾಸಕ್ಕೂ ಅಧಿಕಾರಿಗಳು ತೆರಳಿ ದಾಳಿ ಮಾಡಿದ್ದರು. ಇದನ್ನು ಪ್ರಶ್ನಿಸಿ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.
ನಿನ್ನೆ (ಬುಧವಾರ) ಅರಣ್ಯಾಧಿಕಾರಿಗಳ ದಾಳಿ ಕಾನೂನು ಬಾಹಿರ. ಅರಣ್ಯಾಧಿಕಾರಿಗಳ ಕ್ರಮ ಸರಿ ಇಲ್ಲ ಎಂದು ಹೈಕೋರ್ಟಿಗೆ ಜಗ್ಗೇಶ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರಣ್ಯಾಧಿಕಾರಿಗಳ ನಡೆ ಕಾನೂನು ಬಾಹಿರ ಎಂದು ಘೋಷಿಸಲು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಅರಣ್ಯಾಧಿಕಾರಿಗಳು ಕೊಟ್ಟಿರುವ ನೋಟೀಸ್ ಅನ್ನು ರದ್ದು ಪಡಿಸಲು ನಟ ಜಗ್ಗೇಶ್ ಮನವಿ ಸಲ್ಲಿಸಿದ್ದಾರೆ.