ಕಾಂಗ್ರೆಸ್‌ನ ಗ್ಯಾರಂಟಿಯೀಗ ಗಳಗಂಟಿ: ಮಾಜಿ ಸಿಎಂ ಬೊಮ್ಮಾಯಿ ಕಿಡಿ

ಕಾಂಗ್ರೆಸ್‌ನವರು ಚುನಾವಣೆಗೂ ಮೊದಲು ಅಕ್ಕಿ ಫ್ರೀ, ಕರೆಂಟ್‌ ಫ್ರೀ, ನನಗೂ ಫ್ರೀ, ನಿಮಗೂ ಫ್ರೀ ಎಂದಿದ್ದರು. ಈಗ ಇದಕ್ಕೆ ಕಂಡೀಷನ್‌ ಇದೆ ಎನ್ನುತ್ತಾರೆ. ಈಗ ಅವರ ಬಣ್ಣ ಬಯಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. 

EX CM Basavaraj Bommai Slams On Congress Over Guarantee Scheme gvd

ಶಿಗ್ಗಾಂವಿ (ಹಾವೇರಿ) (ಮೇ.26): ಕಾಂಗ್ರೆಸ್‌ನವರು ಚುನಾವಣೆಗೂ ಮೊದಲು ಅಕ್ಕಿ ಫ್ರೀ, ಕರೆಂಟ್‌ ಫ್ರೀ, ನನಗೂ ಫ್ರೀ, ನಿಮಗೂ ಫ್ರೀ ಎಂದಿದ್ದರು. ಈಗ ಇದಕ್ಕೆ ಕಂಡೀಷನ್‌ ಇದೆ ಎನ್ನುತ್ತಾರೆ. ಈಗ ಅವರ ಬಣ್ಣ ಬಯಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ತವರು ಕ್ಷೇತ್ರ ಹಾವೇರಿಯ ಶಿಗ್ಗಾಂವಿ ಪಟ್ಟಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಮತದಾರರಿಗೆ ಕೃತಜ್ಞತಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಕಾಂಗ್ರೆಸ್‌ನ ಭರವಸೆಗಳು ಮೇ 10ರ ವರೆಗೂ ಗ್ಯಾರಂಟಿ, ಆಮೇಲೆ ಗಳಗಂಟಿ’ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಈಗ ಶುರುವಾಗಿದೆ. 

ಈಗ ಗ್ಯಾರಂಟಿಗಳಿಗೆ ಕಂಡೀಷನ್‌ ಇದೆ ಎನ್ನುತ್ತಿದ್ದಾರೆ. ಇನ್ನು ಸ್ವಲ್ಪ ದಿನ ಕಳೆಯಲಿ, ಮಹಿಳೆಯರು ಕಾರ್ಡ್‌ ಹಿಡಿದುಕೊಂಡು ರಸ್ತೆಗೆ ಬರುತ್ತಾರೆ. ಆಗ ಕಾಂಗ್ರೆಸ್‌ನವರಿಗೆ ನಿಜಸ್ಥಿತಿಯ ಅರಿವಾಗುತ್ತದೆ. ಕಾರ್ಡ್‌ಗಳಿಗೆ ದುಡ್ಡು ಕೊಡಲು ಹಣ ಹೊಂದಿಸಲು ಹೋಗಿ ಅಭಿವೃದ್ಧಿ ಕೆಲಸವನ್ನೇ ನಿಲ್ಲಿಸುತ್ತಾರೆ ಎಂದು ಆರೋಪಿಸಿದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆ ನಡೆಯಿತು. ಆ ಸಭೆಯಲ್ಲಿ ಕಾಂಗ್ರೆಸ್‌ ನೀಡಿದ್ದ ಎಲ್ಲ ಗ್ಯಾರಂಟಿಗಳಿಗೆ ಆದೇಶ ಮಾಡುತ್ತೇವೆ ಎಂದಿದ್ದರು. ಜನರಿಗೆ ಏನಾದರೂ ಒಳ್ಳೆಯದನ್ನು ಮಾಡಲಿ ಎಂದು ನಾನೂ ಖುಷಿಪಟ್ಟಿದ್ದೆ. ಆದರೆ, ಸಂಪುಟ ಸಭೆ ಬಳಿಕ ಪತ್ರಕರ್ತರು ಪ್ರಶ್ನೆ ಕೇಳಿದಾಗ ತಡಬಡಿಸಿದರು. 

ಜೂ.1ರಿಂದ ವಿದ್ಯುತ್‌ ಬಿಲ್‌ ಕಟ್ಟಬೇಡಿ: ಸಂಸದ ಪ್ರತಾಪ್‌ ಸಿಂಹ

ಹಿಂದಿನ ಇತಿಹಾಸ ಹೇಳಿ ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಹಳೆಯದೆಲ್ಲ ಬೇಡ, ಗ್ಯಾರಂಟಿಗಳನ್ನು ಯಾವಾಗ ಜಾರಿಗೊಳಿಸುತ್ತೀರಿ ಎಂದು ಪತ್ರಕರ್ತರು ಖಡಕ್‌ ಆಗಿ ಕೇಳಿದಾಗ, ಮುಂದಿನ ಸಂಪುಟ ಸಭೆಯಲ್ಲಿ ಎಂದಿದ್ದಾರೆ. ಈಗ ಇವರು ಮುಖ್ಯಮಂತ್ರಿ ಆಗುವುದಕ್ಕೆ, ಮಂತ್ರಿ ಆಗುವುದಕ್ಕೇ ಬಡಿದಾಡುತ್ತಿದ್ದಾರೆ ಎಂದು ಟೀಕಿಸಿದರು. ಹೊಸದಾಗಿ ಮದುವೆಯಾದ ಸೊಸೆ ಕೈಯಲ್ಲಿ ಕೀಲಿ ಇರುವುದಿಲ್ಲ ಎಂಬ ಗಾದೆಮಾತಿದೆ. ಆದರಿಲ್ಲಿ, ಸೊಸೆ ಕೈಯಲ್ಲಿ ಕೀಲಿನೂ ಇಲ್ಲ, ಜವಾಬ್ದಾರಿನೂ ಇಲ್ಲ. ಇವರ ಸಂಪುಟದ ಸಚಿವರಿಗೆ ಯಾರಿಗೂ ಖಾತೆಯನ್ನೇ ಕೊಟ್ಟಿಲ್ಲ. ಮಂತ್ರಿ ಮಾಡಿ ಅವರಿಗೆ ಖಾತೆ ನೀಡದೇ ಸುಮ್ಮನೆ ಕೂರಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ನದು ರಿವರ್ಸ್‌ ಗೇರ್‌ ಸರ್ಕಾರ: ಇದಕ್ಕೂ ಮೊದಲು ಹುಬ್ಬಳ್ಳಿಯಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ಗ್ಯಾರಂಟಿಯಲ್ಲೂ ರಿವರ್ಸ್‌ ಹೋಗುತ್ತಿದ್ದಾರೆ. ನಾವು ಮಾಡಿದ ಜನಪರ ಕಾನೂನು, ಅಭಿವೃದ್ಧಿ ವಿಚಾರದಲ್ಲೂ ರಿವರ್ಸ್‌ ಹೋಗುತ್ತಿದ್ದಾರೆ. ನೂತನ ಸರ್ಕಾರ ಇಷ್ಟುಬೇಗ ಸೇಡಿನ ಕ್ರಮ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್‌ ಯಾವಾಗಲೂ ತುಷ್ಟೀಕರಣ ರಾಜಕಾರಣ ಮಾಡುತ್ತದೆ ಎನ್ನುವುದು ಗೊತ್ತಿರುವ ವಿಚಾರ. ಅವರಿಗೆ ಈಗ ಅಧಿಕಾರ ಇದೆ. ಏನೇನು ಮಾಡುತ್ತಾರೋ ನೋಡೋಣ. ಆದರೆ, ಸಾರ್ವತ್ರಿಕವಾಗಿ ಜನ ಸಮುದಾಯಕ್ಕೆ ಅನ್ಯಾಯ ಮಾಡಿದರೆ ನಾವು ಕಾನೂನಾತ್ಮಕವಾಗಿ, ರಾಜಕೀಯವಾಗಿ ಹೋರಾಟ ಮಾಡುತ್ತೇವೆ. 

ಬಿಬಿಎಂಪಿ ಚುನಾವಣೆಗೆ ಕಾರ್ಯಕರ್ತರು ತಂಡವಾಗಿ ಕೆಲಸ ಮಾಡಿ: ಎಚ್‌.ಡಿ.ಕುಮಾರಸ್ವಾಮಿ

ನಾವು ಮಂಜೂರು ಮಾಡಿರುವ ಕೆಲಸಗಳು ಬಡವರಿಗಾಗಿ ಇರುವಂಥದ್ದು. ಶ್ರೀಸಾಮಾನ್ಯರ ಒಳಿತಿಗಾಗಿ ಮಾಡಿದ ಕೆಲಸಗಳನ್ನು ನಿಲ್ಲಿಸಲು ಸಾಧ್ಯವೇ?. ಆಡಳಿತ ಪಕ್ಷದ ಶಾಸಕರು ಮಾತ್ರ ತೆರಿಗೆ ಕಟ್ಟಲ್ಲ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ತೆರಿಗೆ ಕಟ್ಟುತ್ತಾನೆ. ಅಧಿಕಾರ ಬಂದಾಗ ಸ್ವೇಚ್ಛಾಚಾರದಿಂದ ಎಲ್ಲವನ್ನೂ ಬದಲಾವಣೆ ಮಾಡುತ್ತೇವೆ ಎನ್ನುವುದು ದುರಹಂಕಾರದ ಮಾತು. ಮುಖ್ಯಮಂತ್ರಿ ಆದವರು ಈ ರಾಜ್ಯದ ಮಾಲೀಕರಲ್ಲ. ಕೊಟ್ಟಿರುವ ಜವಾಬ್ದಾರಿಯನ್ನು ರಾಜ್ಯದ ಜನರ ಒಳಿತಿಗಾಗಿ ಬಳಸಬೇಕು ಎಂದು ಎಚ್ಚರಿಕೆ ನೀಡಿದರು.

Latest Videos
Follow Us:
Download App:
  • android
  • ios