ಬಿಎಸ್‌ವೈ ದೊಡ್ಡ ರಾಜಕಾರಣಿ, ಅವರು ಸುಳ್ಳು ಹೇಳಬಾರದು: ಮತ್ತೆ ಡಿವಿಎಸ್ ವಾಗ್ದಾಳಿ
ಚುನಾವಣೆಗೆ ಸ್ಪರ್ಧಿಸದಂತೆ ಪಕ್ಷದ ಕೇಂದ್ರ ಘಟಕದಿಂದ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂಬುದಾಗಿ ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಬಲ್ಲೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ.ಸದಾನಂದಗೌಡ ತೀಕ್ಷ್ಣವಾಗಿ ಹೇಳಿದ್ದಾರೆ.

ಬೆಂಗಳೂರು (ನ.11): ಚುನಾವಣೆಗೆ ಸ್ಪರ್ಧಿಸದಂತೆ ಪಕ್ಷದ ಕೇಂದ್ರ ಘಟಕದಿಂದ ನನಗೆ ಯಾವುದೇ ಸೂಚನೆ ಬಂದಿಲ್ಲ ಎಂಬುದಾಗಿ ನಾನು ಎಲ್ಲಿ ಬೇಕಾದರೂ ಪ್ರಮಾಣ ಮಾಡಬಲ್ಲೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ.ವಿ.ಸದಾನಂದಗೌಡ ತೀಕ್ಷ್ಣವಾಗಿ ಹೇಳಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ದೊಡ್ಡ ರಾಜಕಾರಣಿ. ಅವರು ಈ ರೀತಿಯ ಸುಳ್ಳು ಹೇಳುವಂಥದ್ದು ಒಳ್ಳೆಯದಲ್ಲ. ನನಗೆ ಯಾವುದೇ ರೀತಿಯ ಸೂಚನೆ, ಸಂದೇಶ ಪಕ್ಷದ ಕೇಂದ್ರ ಘಟಕದಿಂದ ಬಂದಿಲ್ಲ. ವರಿಷ್ಠರ ಜತೆ ಈ ಸಂಬಂಧ ಚರ್ಚೆಯನ್ನೂ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ಯಡಿಯೂರಪ್ಪ ಅವರು ಏಕಾಏಕಿಯಾಗಿ ಈ ರೀತಿ ಹೇಳಬಾರದಿತ್ತು. ಬಹುಶಃ ಅವರಿಗೆ ಹಿಂದೆ ಇದೇ ರೀತಿ ಮಾಡಿರಬಹುದು. ಸುಮ್ಮನೆ ಕುಳಿತುಕೊಳ್ಳಿ, ಇಲ್ಲದಿದ್ದರೆ ಜಾಗೃತೆ ಎಂದು ಹೇಳಿರಬಹುದು. ತಮ್ಮನ್ನು ಚುನಾವಣಾ ರಾಜಕಾರಣದಿಂದ ದೂರ ಮಾಡಿರುವುದರಿಂದ ನನಗೂ ಇದೇ ರೀತಿ ಮಾಡಿರಬಹುದು ಎಂದು ಭಾವಿಸಿ ಹೇಳಿಕೆ ನೀಡಿರಬಹುದು ಎಂದು ಟಾಂಗ್ ನೀಡಿದರು. ಯಾವುದೇ ಒತ್ತಡ ಇಲ್ಲ ಎಂದು ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ. ನಾನು ಆಂಜನೇಯನ ರೀತಿ ಎದೆ ಬಗೆದು ತೋರಿಸಲು ಆಗುವುದಿಲ್ಲ. ಸತ್ಯವನ್ನೇ ಹೇಳಿದ್ದೇನೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಅಂತ 2019ರಲ್ಲೇ ಹೇಳಿದ್ದೆ.
ರೈತರ ಹೊಸ ವಿದ್ಯುತ್ ಸಂಪರ್ಕಕ್ಕೆ ಸಬ್ಸಿಡಿ ಕಟ್: ಎಚ್‌ಡಿಕೆ ಆಕ್ರೋಶ
ಆಗ ಪಕ್ಷ ಮತ್ತು ಸಂಘ ಇದೊಂದು ಬಾರಿ ಸ್ಪರ್ಧೆ ಮಾಡಿ ಅಂತ ಹೇಳಿದ್ದರು. ಇದುವರೆಗೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ರಾಜಕೀಯ ನಿವೃತ್ತಿಯ ನಿಲುವಿನ ಬಗ್ಗೆ ನನ್ನ ಮನೆಯವರಿಗೆ ಬಿಟ್ಟು, ಬೇರೆ ಯಾರ ಬಳಿಯೂ ಚರ್ಚೆ ಮಾಡಿ ತೀರ್ಮಾನ ಮಾಡಿಲ್ಲ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕರ್ನಾಟಕದ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂಬುದಾಗಿ ನಾನು ಕೇಂದ್ರದ ನಾಯಕರಿಗೆ ಮನವಿ ಮಾಡುತ್ತೇನೆ. ನಾವು ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡಿರಬಹುದು. ಆದರೆ, ಲೋಕಸಭಾ ಚುನಾವಣೆಗೆ ದುಪ್ಪಟ್ಟು ಕೊಡುತ್ತೇವೆ ಎಂದು ತಿಳಿಸಿದರು.