ಧಮ್ಮಿದ್ದರೆ ನೀರು ಬಿಡದೆ ಸುಪ್ರೀಂನಲ್ಲಿ ವಾದ ಮಾಡಿ: ಡಿಕೆಶಿ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ನಿಮಗೆ ತಾಕತ್ತು, ಧಮ್ಮಿದ್ದರೆ ತಮಿಳುನಾಡಿಗೆ ನೀರು ಬಿಡದೇ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿ ರಾಜ್ಯದ ಹಿತ ಕಾಪಾಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಸೆ.17): ನಿಮಗೆ ತಾಕತ್ತು, ಧಮ್ಮಿದ್ದರೆ ತಮಿಳುನಾಡಿಗೆ ನೀರು ಬಿಡದೇ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಿ ರಾಜ್ಯದ ಹಿತ ಕಾಪಾಡಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರಕ್ಕೆ ನಿಜವಾದ ತಾಕತ್ತು, ದಮ್ಮು ಇದ್ದರೆ ನೀರು ಬಿಡುತ್ತಿರಲಿಲ್ಲ. ನೀರು ಬಿಟ್ಟು ತಾಕತ್ತು, ದಮ್ಮಿನ ಬಗ್ಗೆ ಮಾತನಾಡುತ್ತಾರೆ ಎಂದು ಹರಿಹಾಯ್ದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ರಾಜ್ಯ ಸರ್ಕಾರ ಕೊಟ್ಟ ಮಾತು ಬದಲಾಯಿಸುತ್ತಿದ್ದು, ಇದೊಂದು ಊಸರವಳ್ಳಿ ಸರ್ಕಾರ ಎಂದರು. ಆರಂಭದಲ್ಲಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅವರು ಹೇಳಿದ ಮಾರನೇ ದಿನವೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀರು ಬಿಡುತ್ತಾರೆ. ಸರ್ಕಾರ ನೀರು ಬಿಡಲು ತೀರ್ಮಾನ ಮಾಡುವುದಾದರೆ ಸರ್ವಪಕ್ಷದ ಸಭೆ ಕರೆಯುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದರು.
ರಾಜಕೀಯ ದ್ವೇಷಕ್ಕಾಗಿ ಎನ್‌ಇಪಿ ರದ್ಧತಿ: ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ವಾಗ್ದಾಳಿ
ಕಾವೇರಿ ರಕ್ಷಣಾ ಯಾತ್ರೆಗೆ ಬಿಜೆಪಿ ಚಿಂತನೆ: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಕಾವೇರಿ ಜಲಾನಯನ ಪ್ರದೇಶದ ತಾಲೂಕುಗಳಲ್ಲಿ ಕಾವೇರಿ ರಕ್ಷಣಾ ಯಾತ್ರೆ ಕೈಗೊಳ್ಳಲು ಪ್ರಮುಖ ಪ್ರತಿಪಕ್ಷ ಬಿಜೆಪಿ ತೀರ್ಮಾನಿಸಿದೆ. ಬಿಜೆಪಿ ಕಚೇರಿಯಲ್ಲಿ ನಡೆದ ಕಾವೇರಿ ಕೊಳ್ಳದ ಜಿಲ್ಲೆಗಳ ಪಕ್ಷದ ಮುಖಂಡರ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರ ಕಾವೇರಿ ಜಲಾನಯನ ಪ್ರದೇಶದ ರೈತರ ಬೆಳೆಗಳಿಗೆ ಸೂಕ್ತ ಸಮಯದಲ್ಲಿ ನೀರು ಬಿಡದೇ ಇರುವುದರಿಂದ ರೈತರ ಬೆಳೆ ಒಣಗಿದ್ದು, ಕಾವೇರಿ ಕೊಳ್ಳದ ರೈತರಿಗೆ ಪ್ರತೀ ಎಕರೆಗೆ 25 ಸಾವಿರ ರು. ಪರಿಹಾರ ಕೊಡುವಂತೆ ನಾವು ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ.
ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು ಎಂದು ಒತ್ತಾಯಿಸಿದರು. ನೀರು ಬಿಟ್ಟರೆ ಬಿಜೆಪಿಯಿಂದ ಕಾವೇರಿ ಜಲಾನಯನ ಪ್ರದೇಶಗಳ ಎಲ್ಲ ತಾಲ್ಲೂಕುಗಳಲ್ಲೂ ಕಾವೇರಿ ಜನ ಜಾಗೃತಿ ಯಾತ್ರೆ ಮಾಡಲು ನಿರ್ಧರಿಸಲಾಗಿದೆ. ಪಾದಯಾತ್ರೆ, ಸತ್ಯಾಗ್ರಹ, ಪ್ರತಿಭಟನೆ ರೂಪದಲ್ಲಿ ಹೋರಾಟ ನಡೆಸಲಾಗುವುದು. ಈ ತಿಂಗಳ 21ರಂದು ಈ ಪ್ರಕರಣ ಸುಪ್ರೀಂಕೋರ್ಟಲ್ಲಿ ವಿಚಾರಣೆಗೆ ಬರಲಿದ್ದು, ಬಳಿಕ ಹೋರಾಟದ ಮುಂದಿನ ರೂಪುರೇಷೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು. ಕಾವೇರಿ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ. ಜೂನ್ ತಿಂಗಳಲ್ಲಿಯೇ ಕಾವೇರಿ ನೀರು ನಿರ್ವಹಣೆ ಆಗಬೇಕಿತ್ತು.
ಬರೆದಿಟ್ಟುಕೊಳ್ಳಿ.. ಕಾಂಗ್ರೆಸ್‌ನ ಎಲ್ಲ ಗ್ಯಾರಂಟಿಗಳೂ ಬಿದ್ದು ಹೋಗುತ್ತವೆ: ಬೊಮ್ಮಾಯಿ ವಿಶೇಷ ಸಂದರ್ಶನ
ನಾವು 30%ರಷ್ಟು ನೀರನ್ನೂ ನಮ್ಮ ರೈತರಿಗೆ ಹಂಚಿಕೆ ಮಾಡಿಲ್ಲ. ತಮಿಳುನಾಡು ಎರಡನೇ ಬೆಳೆ ಬೆಳೆಯುತ್ತಿದೆ. ಸರ್ಕಾರ ಸಿಡಬ್ಲ್ಯೂಆರ್‌ಸಿ, ಸಿಡಬ್ಲ್ಯೂಎಂಎ ಮುಂದೆ ಸರಿಯಾಗಿ ಪ್ರತಿಪಾದಿಸಲಿಲ್ಲ. ಸರ್ಕಾರ ರಾಜ್ಯದ ಹಿತ ಬಲಿ ಕೊಟ್ಟು ತಮಿಳುನಾಡಿನ ಎರಡನೇ ಬೆಳೆಗೆ ನೀರು ಬಿಟ್ಟಿದೆ. ಇದರ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಸರಿಯಾಗಿ ಮನವರಿಕೆ ಮಾಡಿಕೊಡಲಿಲ್ಲ. ನೀರು ಬಿಟ್ಟು ನಮಗೆ ಸಮಸ್ಯೆ ಆಗಿದೆ. ರಾಜ್ಯ ಸರ್ಕಾರ ರಕ್ಷಣಾತ್ಮಕವಾಗಿ ನಡೆದುಕೊಳ್ಳುತ್ತಿದೆ. ಈ ಸರ್ಕಾರ ರಾಜ್ಯದ ನೀರಿನ ಹಕ್ಕು ರಕ್ಷಣೆ ಮಾಡಿಲ್ಲ. ನೀರಿನ ಹಕ್ಕು ರಕ್ಷಣೆ ಮಾಡುವ ಬದ್ಧತೆ, ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.