ವೈದ್ಯರು ಸ್ವಯಂ ಪ್ರೇರಿತರಾಗಿ ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು. ಆಗ ಮಾತ್ರ ಗ್ರಾಮೀಣ ಭಾಗದಲ್ಲಿಯೂ ಉತ್ತಮ ಆರೋಗ್ಯ ಸಿಗಲು ಸಾಧ್ಯವಾಗಲಿದೆ ಹಾಗೂ ‘ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಉತ್ತಮ ಸೇವೆ ಸಿಗುತ್ತದೆ’ ಎಂಬ ಜನರ ಮನೋಭಾವ ದೂರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರು (ಜು.02): ವೈದ್ಯರು ಸ್ವಯಂ ಪ್ರೇರಿತರಾಗಿ ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು. ಆಗ ಮಾತ್ರ ಗ್ರಾಮೀಣ ಭಾಗದಲ್ಲಿಯೂ ಉತ್ತಮ ಆರೋಗ್ಯ ಸಿಗಲು ಸಾಧ್ಯವಾಗಲಿದೆ ಹಾಗೂ ‘ಖಾಸಗಿ ಆಸ್ಪತ್ರೆಯಲ್ಲಿ ಮಾತ್ರ ಉತ್ತಮ ಸೇವೆ ಸಿಗುತ್ತದೆ’ ಎಂಬ ಜನರ ಮನೋಭಾವ ದೂರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನದ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
‘ಹಳ್ಳಿಗಳಿಂದ, ಬಡತನ, ಶೋಷಿತ, ಹಿಂದುಳಿದ ಕುಟುಂಬದ ಹಿನ್ನೆಲೆಯಿಂದ ಬಂದ ವೈದ್ಯರ ಪ್ರಮಾಣವೇ ಹೆಚ್ಚಿದೆ. ಆದರೂ, ಅವರು ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ವೈದ್ಯರು ಸ್ವಯಂ ಪ್ರೇರಿತವಾಗಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ಮುಂದಾಗಬೇಕು. ರಾಜ್ಯದಲ್ಲಿ 2,700 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಅಲ್ಲಿ ವೈದ್ಯರ ಕೊರತೆಯಿದೆ. ಅಲ್ಲಿಗೆ ತೆರಳಿ ಕೆಲಸ ಮಾಡಬೇಕು. ಕೊರೋನಾ ಸಮಯದಲ್ಲಿ ವೈದ್ಯರು ನೀಡಿದ ಸೇವೆ ಸದಾ ಸ್ಮರಣೀಯ’ ಎಂದರು.
ಯಾವುದೇ ಜವಾಬ್ದಾರಿಯಾದರೂ ಒಕ್ಕಲಿಗರು ಸಮರ್ಥವಾಗಿ ನಿಬಾಯಿಸುವರು: ಶಾಸಕ ಟಿ.ಡಿ.ರಾಜೇಗೌಡ
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ವೈದ್ಯರು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಅವರನ್ನು ಸಮಾಜ ಸದಾ ಸ್ಮರಿಸುತ್ತದೆ. ಸೇವಾ ಮನೋಭಾವ ಇದ್ದಾಗ ಮಾತ್ರ ಉತ್ತಮ ವೈದ್ಯರಾಗಲು ಸಾಧ್ಯ. ಆರೋಗ್ಯ ಇಲಾಖೆ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಚಿಕಿತ್ಸೆ ನೀಡುವತ್ತ ಗಮನಹರಿಸುತ್ತಿದೆ. ವೈದ್ಯರು ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಸಂಶೋಧನೆ, ಚಿಕಿತ್ಸಾ ವಿಧಾನಗಳ ಬಗ್ಗೆ ಮಾಹಿತಿ ಪಡೆಯುತ್ತಲಿರಬೇಕು. ಅದನ್ನು ರಾಜ್ಯದಲ್ಲೂ ಅಳವಡಿಸಿ ಉತ್ತಮ ಚಿಕಿತ್ಸೆ ನೀಡುವತ್ತ ಗಮನಹಿಸಬೇಕು ಎಂದು ಹೇಳಿದರು.
ಸಾಧಕ ವೈದ್ಯರಿಗೆ ಪ್ರಶಸ್ತಿ: ಕಾರ್ಯಕ್ರಮದಲ್ಲಿ ಸೇವಾ ಸಾಧನೆ ಪ್ರಶಸ್ತಿಯನ್ನು ಡಾ. ಪರಿಮಳಾ ಮರೂರು, ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ಡಾ. ಸೆಲ್ವರಾಜನ್, ಉತ್ತಮ ಹೆಚ್ಚುವರಿ ನಿರ್ದೇಶಕ ಪ್ರಶಸ್ತಿಯನ್ನು ಡಾ. ರಮೇಶ್‌ಚಂದ್ರ ರೆಡ್ಡಿ ಅವರಿಗೆ ಪ್ರದಾನ ಮಾಡಲಾಯಿತು. ಜತೆಗೆ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ 20ಕ್ಕೂ ಹೆಚ್ಚಿನ ವೈದ್ಯರು, ಅಧಿಕಾರಿಗಳಿಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಸಕರಾದ ರಿಜ್ವಾನ್ ಅರ್ಷದ್, ಪ್ರಕಾಶ್ ರಾಥೋಡ್, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್, ಆಯುಕ್ತ ರಂದೀಪ್ ಇತರರಿದ್ದರು.
ನನ್ನ ಊರಲ್ಲೂ ವೈದ್ಯರು ಇರಲ್ಲ: ‘ವೈದ್ಯರು ಹಳ್ಳಿಗಳತ್ತ ತೆರಳದ ಕಾರಣ ಗ್ರಾಮೀಣ ಭಾಗದಲ್ಲಿ ನಿರ್ಮಿಸಿರುವ ಕ್ವಾರ್ಟರ್ಸ್‌ಗಳು ಪಾಳು ಬೀಳುತ್ತಿವೆ. ನನ್ನ ಊರಾದ ಸಿದ್ದರಾಮನಹುಂಡಿಯಲ್ಲೂ ಕ್ವಾರ್ಟರ್ಸ್ ಇದ್ದು, ಅಲ್ಲಿ ವೈದ್ಯರು ಸೇರಿ ಆರೋಗ್ಯ ಸಿಬ್ಬಂದಿ ವಾಸ್ತವ್ಯ ಹೂಡುತ್ತಿಲ್ಲ. ಊರಿಗೆ ತೆರಳಿದರೆ ಜನರು, ‘ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದೀಯಾ ಈಗ. ಇಲ್ಲಿ ವೈದ್ಯರೇ ಇಲ್ಲ. ಅದನ್ನು ಸರಿಪಡಿಸು ಮೊದಲು.. ಎಂದು ಬೈಯುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಳಲು ತೋಡಿಕೊಂಡರು.
ರಾಯ್ ಮಾದರಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಬಿ.ಸಿ. ರಾಯ್ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ವೈದ್ಯ ವೃತ್ತಿ ಮುಂದುವರಿಸಿದ್ದರು. ಜನರಿಗೆ ಆರೋಗ್ಯ ಸೇವೆ ನೀಡಿದರು. ಹೀಗಾಗಿಯೇ ಅವರಿಗೆ ಭಾರತ ರತ್ನ ನೀಡಲಾಯಿತು. ಪ್ರತಿಯೊಬ್ಬ ವೈದ್ಯರಿಗೂ ಬಿ.ಸಿ.ರಾಯ್ ಮಾದರಿಯಾಗಬೇಕು. ಅವರು ಸಾಗಿದ ಹಾದಿಯಲ್ಲಿ ಸಾಗುವಂತಾಗಬೇಕು ಎಂದು ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜನ್ನೂ ಮಾಡಿಸಿದ್ದು ಸುಧಾಕರ್: ಸಂಸದ ಮುನಿಸ್ವಾಮಿ
‘ಹಣವಂತರು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವುದು ಬಹಳ ಸುಲಭ. ಆದರೆ, ಬಡವರಿಗೆ ಆರೋಗ್ಯ ಸೇವೆ ನೀಡುವುದು ಸರ್ಕಾರಿ ವೈದ್ಯರ ಜವಾಬ್ದಾರಿ. ಸಮಾಜದಲ್ಲಿ ಇರುವ ತಾರತಮ್ಯ ಇರುವ ಕಾರಣಕ್ಕಾಗಿ ಉತ್ತಮ ಆರೋಗ್ಯ, ಶಿಕ್ಷಣ ದೊರೆಯದಂತಾಗಿದೆ. ಅದನ್ನು ತೊಡೆದು ಹಾಕಲು ವೈದ್ಯರು ಕೆಲಸ ಮಾಡಬೇಕು. ಬಡವರು ಖಾಸಗಿ ಆಸ್ಪತ್ರೆಗೆ ತೆರಳುವ ಅನಿವಾರ್ಯತೆಯನ್ನು ನಿವಾರಿಸಿ, ಸರ್ಕಾರಿ ಆಸ್ಪತ್ರೆಗಳತ್ತ ಬರುವಂತೆ ಮಾಡಬೇಕು. ಸಮಾಜದಲ್ಲಿನ ಆರ್ಥಿಕ, ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಎಲ್ಲರೂ ಕೈ ಜೋಡಿಸಬೇಕು’ ಎಂದರು.
