ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜನ್ನೂ ಮಾಡಿಸಿದ್ದು ಸುಧಾಕರ್: ಸಂಸದ ಮುನಿಸ್ವಾಮಿ
ಗ್ರಾಪಂ ಚುನಾವಣೆ ಗೆಲ್ಲದಿದ್ದರೂ ಅಣ್ಣಾಮಲೈ ಅವರಿಗೆ ರಾಜ್ಯದ ಚುನಾವಣಾ ಉಸ್ತುವಾರಿ ನೀಡಲಾಗಿತ್ತು ಎಂಬ ರೇಣುಕಾಚಾರ್ಯ ಟೀಕೆಗೆ ಸಂಸದ ಎಸ್.ಮುನಿಸ್ವಾಮಿ ಉತ್ತರಿಸದೆ ಜಾರಿಕೊಂಡರು.
ಕೋಲಾರ (ಜು.01): ಗ್ರಾಪಂ ಚುನಾವಣೆ ಗೆಲ್ಲದಿದ್ದರೂ ಅಣ್ಣಾಮಲೈ ಅವರಿಗೆ ರಾಜ್ಯದ ಚುನಾವಣಾ ಉಸ್ತುವಾರಿ ನೀಡಲಾಗಿತ್ತು ಎಂಬ ರೇಣುಕಾಚಾರ್ಯ ಟೀಕೆಗೆ ಸಂಸದ ಎಸ್.ಮುನಿಸ್ವಾಮಿ ಉತ್ತರಿಸದೆ ಜಾರಿಕೊಂಡರು. ನಗರದಲ್ಲಿ ಸುದ್ದಿಗಾರರೊಂದಿಗೆ ಉತ್ಸಾಹದಿಂದಲೇ ಮಾತನಾಡುತ್ತಿದ್ದ ಸಂಸದರು, ತಮ್ಮ ಪಕ್ಷದ ಮುಖಂಡ ಮಾಡಿರುವ ಟೀಕೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡದೆ ದಿಢೀರನೇ ಹೊರಟರು.
ಇದಕ್ಕೂ ಮುನ್ನ, ಮಾಜಿ ಸಚಿವ ಡಾ.ಕೆ.ಸುಧಾಕರ್ ಕೋಚಿಮುಲ್ ವಿಭಜನೆ ಮಾಡಿಸಿದರೆಂಬ ಒಂದೇ ಕಾರಣಕ್ಕೆ ದ್ವೇಷ ರಾಜಕಾರಣ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ವಿಭಜನೆಗೆ ತಡೆಯಾಜ್ಞೆ ಕೊಡುವಂತೆ ಮಾಡಿದೆ. ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜನ್ನೂ ಅವರೇ ಮಾಡಿಸಿದ್ದು ಅದಕ್ಕೂ ತಡೆ ಕೊಡಿಸಲಿ ಎಂದು ವ್ಯಂಗ್ಯವಾಡಿದರು. ಹಿಂದೆ ನಮ್ಮ ಸರ್ಕಾರ ಕೋಚಿಮುಲ್ ವಿಭಜನೆ ಮಾಡಿ ಚಿಕ್ಕಬಳ್ಳಾಪುರ ಪ್ರತ್ಯೇಕ ಒಕ್ಕೂಟ, ಮೆಗಾ ಡೇರಿ ಮಾಡುವ ಪ್ರಯತ್ನ ನಡೆಸಿತ್ತು. ಒಕ್ಕೂಟದಲ್ಲಿ ಇದ್ದ ಸಾಲ ಹೇಗೆ ತೀರಿಸುವುದು ಎಂಬ ಗೊಂದಲವಿತ್ತು.
ಕಾಂಗ್ರೆಸ್ ಗ್ಯಾರಂಟಿಗೆ ಪ್ರಧಾನಿ ಮೋದಿ ಹೊಣೆಯಲ್ಲ: ಸಂಸದ ಮುನಿಸ್ವಾಮಿ
ಒಂದು ಕಡೆ ಕೋಚಿಮುಲ್‌ಗೆ ನಷ್ಟವಾಗುತ್ತಿರುವುದರಿಂದ ರೈತರಿಂದ ಖರೀದಿಸುವ ಹಾಲಿನ ದರವನ್ನು 2 ರೂ. ಕಡಿಮೆ ಮಾಡುವುದಾಗಿ ಶಾಸಕ ನಂಜೇಗೌಡರು ಹೇಳುತ್ತಾರೆ. ಮತ್ತೊಂದೆಡೆ ಕೋಚಿಮುಲ್ ಭಾರಿ ಲಾಭದಲ್ಲಿದೆ ಎನ್ನುತ್ತಾರೆ. ಇಂತಹ ಗೊಂದಲ ಸೃಷ್ಟಿಏಕೆ ಎಂದು ಪ್ರಶ್ನಿಸಿದರು. ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನ ವಿಜಯೇಂದ್ರರಿಗೆ ನೀಡಲು ಮಂಡ್ಯದಲ್ಲಿ ಕಾರ್ಯಕರ್ತರು ರಕ್ತದಲ್ಲಿ ಹೈಕಮಾಂಡ್‌ಗೆ ಪತ್ರ ಬರೆದಿರುವ ಕುರಿತು, ನಮ್ಮ ಪಕ್ಷದಲ್ಲಿ ಪ್ರತಿ ಕಾರ್ಯಕರ್ತನಿಗೆ ಇಂತಹವರೇ ಅಧ್ಯಕ್ಷರಾಗಲಿ ಎಂದು ಹೇಳುವ ಹಕ್ಕು ಇದೆ, ಜೊತೆಗೆ ಪ್ರತಿಯೊಬ್ಬರಿಗೂ ಆಸೆ ಇರುತ್ತದೆ, ಆದರೆ, ಪಕ್ಷದ ಹೈಕಮಾಂಡ್ ಕೈಗೊಳ್ಳುವ ತೀರ್ಮಾನವೇ ಅಂತಿಮ ಎಂದರು.
ಲೂಟಿ ಮಾಡಿದ ಹಣವಿದ್ದರೆ ತಂದು ‘ಗ್ಯಾರಂಟಿ’ಗೆ ಬಳಸಿ: ಈ ಹಿಂದೆ ಕಾಂಗ್ರೆಸ್ ಅಧಿಕಾರ ನಡೆಸಿದ್ದ ಸಂದರ್ಭದಲ್ಲಿ ಲೂಟಿ ಮಾಡಿರುವ ಲಕ್ಷಾಂತರ ಕೋಟಿ ಹಣವಿದ್ದರೆ ಇಟಲಿ ಮೇಡಂ, ರಾಹುಲ್ ಬಳಿ ಹೋಗಿ ತಂದು ಜನರಿಗೆ ನೀಡಿ ಗ್ಯಾರಂಟಿ ಜಾರಿಗೆ ತರಲಿ. ಅದು ಬಿಟ್ಟು ಪ್ರಧಾನಿ ಮೋದಿ ಬಗ್ಗೆ ಏಕೆ ಆರೋಪ ಮಾಡುತ್ತೀರಿ. ಪ್ರಧಾನಿಯನ್ನು ಕೇಳಿ ಗ್ಯಾರಂಟಿ ಭರವಸೆ ಕೊಟ್ಟಿರಾ ಎಂದು ಕಾಂಗ್ರೆಸ್ ಮುಖಂಡರಿಗೆ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗ್ಯಾರಂಟಿಗಳ ಜಾರಿಗೆ ಯೋಗ್ಯತೆ ಇಲ್ಲದ ಮೇಲೆ ಏಕೆ ಘೋಷಿಸಬೇಕಿತ್ತು ಎಂದು ಪ್ರಶ್ನಿಸಿದ ಅವರು, ಜನರಿಗೆ ವಂಚನೆಯಾಗುವುದನ್ನು ತಪ್ಪಿಸಿ ಪ್ರತಿ ನಾಗರೀಕರಿಗೂ ಗ್ಯಾರಂಟಿ ತಲುಪುವಂತೆ ಮಾಡಬೇಕು ಎಂದು ತಾಕೀತು ಮಾಡಿ, ಚುನಾವಣೆಗೆ ಇಲ್ಲದ ನಿಯಮ ಈಗ ಏಕೆ ಎಂದು ಪ್ರಶ್ನಿಸಿದರು. ಕೆ.ಎಚ್.ಮುನಿಯಪ್ಪ ಕೇಂದ್ರ ಸರ್ಕಾರ ಅಕ್ಕಿ ನೀಡುತ್ತಿಲ್ಲ ಎಂದು ಟೀಕಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಕಾಂಗ್ರೆಸ್‌ನಿಂದ 27 ವರ್ಷ ಸಂಸದರಾಗಿ ಇವರು ಕೋಲಾರಕ್ಕೆ ಏನು ಮಾಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ ಎಂದರು.
ಕೇಂದ್ರ ಸರ್ಕಾರದಿಂದ ಪ್ರತಿ ಗ್ರಾಪಂಗಳಿಗೆ ಶೇ.80 ಅನುದಾನ: ಸಂಸದ ಮುನಿಸ್ವಾಮಿ
ಕಾಂಗ್ರೆಸ್ ಅನೇಕ ಸುಳ್ಳು ಗ್ಯಾರಂಟಿ ನೀಡಿದೆ. ಮಗುವಿಗೆ, ಬದುಕಿನುದ್ದಕ್ಕೂ ಅಮೃತವಾದ ಹಾಲು ನೀಡುವ ಗೋಮಾತೆ ಇಂದು ನನ್ನ ಬದುಕಿಗೆ ಗ್ಯಾರಂಟಿ ಕೇಳುವಂತಾಗಿದೆ. ಗೋಹತ್ಯಾ, ಮತಾಂತರ ನಿಷೇಧ ವಾಪಸ್ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್‌ನ ಜನವಿರೋಧಿ ಚಟುವಟಿಕೆಗಳ ವಿರುದ್ಧ ಒಗ್ಗೂಡಿ ಹೋರಾಟ ನಡೆಸುವುದಾಗಿ ತಿಳಿಸಿದರು.