ಯಾವುದೇ ಜವಾಬ್ದಾರಿಯಾದರೂ ಒಕ್ಕಲಿಗರು ಸಮರ್ಥವಾಗಿ ನಿಬಾಯಿಸುವರು: ಶಾಸಕ ಟಿ.ಡಿ.ರಾಜೇಗೌಡ
ಯಾವುದೇ ಜವಾಬ್ದಾರಿ ನೀಡಿದರೂ ಒಕ್ಕಲಿಗ ಸಮುದಾಯದವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಲಕ್ಷ್ಮೀ ಕಾಂತ ಕಾಂಪ್ಲೆಕ್ಸ್ ಅವರಣದಲ್ಲಿ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ನರಸಿಂಹರಾಜಪುರ (ಜು.01): ಯಾವುದೇ ಜವಾಬ್ದಾರಿ ನೀಡಿದರೂ ಒಕ್ಕಲಿಗ ಸಮುದಾಯದವರು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಲಕ್ಷ್ಮೀ ಕಾಂತ ಕಾಂಪ್ಲೆಕ್ಸ್ ಅವರಣದಲ್ಲಿ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಬೆಂಗಳೂರಿಗೆ ಪ್ರಪಂಚದಲ್ಲೇ ದೊಡ್ಡ ಮಟ್ಟದ ಹೆಸರು ಬರಲು ಬೆಂಗಳೂರು ನಿರ್ಮಾಣ ಮಾಡಿದ ಕೆಂಪೇಗೌಡ ಕಾರಣರಾಗಿದ್ದಾರೆ. ವಿಧಾನ ಸೌಧ, ಸುವರ್ಣ ಸೌಧ ಹಾಗೂ ವಿಕಾಸ ಸೌಧ ನಿರ್ಮಾಣದಲ್ಲೂ ಒಕ್ಕಲಿಗರೇ ನೇತೃತ್ವ ವಹಿಸಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ರೈತರಿಗೆ ಹೆಚ್ಚು ಒತ್ತು ನೀಡಿ ನಬಾರ್ಡ್ ಯೋಜನೆಯಡಿ ಸಾಲ ನೀಡುವ ವ್ಯವಸ್ಥೆ ಮಾಡಿದ್ದರು.
ಒಕ್ಕಲಿಗರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಜ್ಯ, ರಾಷ್ಟಮಟ್ಟದಲ್ಲೂ ಒಕ್ಕಲಿಗರು ಹೆಸರು ಮಾಡಿದ್ದಾರೆ ಎಂದರು. 1996ರಲ್ಲಿ ಪ್ರಾರಂಭಗೊಂಡ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘ ಸಮಾಜ ಮುಖಿ ಕೆಲಸ ಮಾಡಿ ಹೆಸರು ಪಡೆದಿದೆ. ಆರೋಗ್ಯ ಶಿಬಿರ, ಸಾಂಸ್ಕೃತಿಕ, ಕ್ರೀಡೆ, ಕೃಷಿ,ಸಾಮಾಜಿಕ ಚಟುವಟಿಕೆಗಳನ್ನು ನಡೆಸಿದೆ. ಮಹಿಳೆಯರಿಗೆ ವಿದೇಶ ಪ್ರವಾಸ ಸಹ ಏರ್ಪಡಿಸಿದೆ. ಕೃಷಿಗೆ ಹೆಚ್ಚು ಒತ್ತು ನೀಡಿದೆ. ಮಲೆನಾಡ ಸಂತೆ ಎಂಬ ದೊಡ್ಡ ಕಾರ್ಯಕ್ರಮ ಮಾಡಿದ್ದು ಸಂಘಕ್ಕೆ ಹೆಸರು ತಂದಿತ್ತು. ಶಾಶ್ವತಿ ಮಹಿಳಾ ಒಕ್ಕಲಿರ ಸಂಘ ಸ್ಥಾಪನೆಯಿಂದ ಮಹಿಳೆಯರು ಒಗ್ಗೂಡಿ ತಮ್ಮ ಕಷ್ಟ, ಸುಖಗಳನ್ನು ಹಂಚಿಕೊಳ್ಳಲು ಅನುಕೂಲವಾಗಿದೆ ಎಂದರು.
ಸಂಸದ ಮುನಿಸ್ವಾಮಿ ಹೇಳಿಕೆಗೆ ಕಿಮ್ಮತ್ತಿನ ಬೆಲೆ ಇಲ್ಲ: ಶಾಸಕ ನಂಜೇಗೌಡ
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲ ಸತೀಶ್ ಮಾತನಾಡಿ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘ ಹುಟ್ಟು ಹಾಕಿ 27ವರ್ಷ ಮುಗಿದಿದೆ. 2 ವರ್ಷ ಕೊರೋನ ಬಂದಿದ್ದರಿಂದ ಚಟುವಟಿಕೆ ಸ್ಥಗಿತಗೊಂಡಿತ್ತು. ಈ ಬಾರಿ 25 ವರ್ಷದ ಆಚರಣೆ ಮಾಡುತ್ತಿದ್ದೇವೆ. 23 ಸದಸ್ಯರಿಂದ ಪ್ರಾರಂಭಗೊಂಡ ಸಂಘದಲ್ಲಿ ಈಗ ನೂರಾರು ಸದಸ್ಯರಿದ್ದಾರೆ. ನಮ್ಮ ಮಹಿಳಾ ಸಂಘಕ್ಕೆ ತಾಲೂಕು ಒಕ್ಕಲಿಗರ ಸಂಘದವರೇ ಬೆನ್ನೆಲಬಾಗಿದ್ದಾರೆ. ಸಂಘದ 10ನೇ ವರ್ಷದಲ್ಲಿ ಅದ್ದೂರಿಯಾಗಿ ಕೃಷಿ ಮೇಳ ಮಾಡಲಾಗಿತ್ತು. ಈ ವರ್ಷ 25 ವರ್ಷಗಳಲ್ಲಿ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಮಾಡಲು ಚಿಂತನೆ ಮಾಡಲಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಡಿ.ಸಿ.ದಿವಾಕರ ಮಾತನಾಡಿ, ತಾಲೂಕು ಒಕ್ಕಲಿಗರ ಸಂಘ ನಡೆಸುತ್ತಿರುವ ಶಾರದಾ ವಿದ್ಯಾ ಮಂದಿರದಲ್ಲಿ ಎಲ್ಲಾ ಜಾತಿ, ಧರ್ಮದವರಿಗೆ ಶಿಕ್ಷಣ ನೀಡುತ್ತಿದ್ದೇವೆ. ಅದೇ ರೀತಿ ಶಾಸಕರಾಗಿರುವ ರಾಜೇಗೌಡರು ಯಾವುದೇ ದ್ವೇಷ ಮಾಡದೆ ಎಲ್ಲರನ್ನು ಸಮನಾಗಿ ಕಂಡು ಬಡವರ ಪರವಾಗಿ ಅಭಿವೃದ್ದಿ ಮಾಡಿದ್ದಾರೆ ಎಂದರು. ಅತಿಥಿಯಾಗಿದ್ದ ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್ ಮಾತನಾಡಿ, 2013 ಹಾಗೂ 2018ರಲ್ಲಿ ರಾಜ್ಯ ಸರ್ಕಾರ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರು ಬೇರೆ, ಬೇರೆ ಪಕ್ಷವಾಗಿದ್ದರಿಂದ ಶೃಂಗೇರಿ ಕ್ಷೇತ್ರ ಬಡವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಕಾಲೇಜನ್ನೂ ಮಾಡಿಸಿದ್ದು ಸುಧಾಕರ್: ಸಂಸದ ಮುನಿಸ್ವಾಮಿ
ಈಗ ರಾಜ್ಯ-ಶೃಂಗೇರಿ ಕ್ಷೇತ್ರ ಒಂದೇ ಪಕ್ಷ ಅಧಿಕಾರದಲ್ಲಿದೆ.ಇದನ್ನು ಬಳಸಿಕೊಂಡು ರಾಜೇಗೌಡರು ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕಾಗಿದೆ. ಮುಖ್ಯವಾಗಿ ಕೊಪ್ಪ ಹಾಗೂ ನರಸಿಂಹರಾಜಪುರ ಮಿನಿವಿಧಾನ ಸೌಧವನ್ನು ಪೂರ್ಣಗೊಳಿಸಬೇಕಾಗಿದೆ. ನರಸಿಂಹರಾಜಪುರ ಪಟ್ಟಣದ ರಸ್ತೆ ಅಗಲೀಕರಣ ವಾಗಬೇಕು. ಜೊತೆಗೆ ಕೊಪ್ಪದಿಂದ ನರಸಿಂಹರಾಜಪುರ ಪಟ್ಟಣದವರೆಗೂ ರಸ್ತೆ ಅಗಲೀಕರಣ ಮಾಡಿ ಎರಡು ಪಟ್ಟಣ ಜೋಡಿಸಬೇಕು ಎಂದು ಸಲಹೆ ನೀಡಿದರು. ಅತಿಥಿಗಳಾಗಿ ಪುಷ್ಪ ರಾಜೇಗೌಡ, ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಲೇಖಾ ವಸಂತ್, ಖಜಾಂಚಿ ಭಾರತಿ ಚಂದ್ರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಶಾಸಕ ರಾಜೇಗೌಡ ದಂಪತಿಯನ್ನು ಅಭಿನಂದಿಸಲಾಯಿತು. ಪುಷ್ಪ ಶಾಂತಕುಮಾರ್ ಪರಿಚಯಿಸಿದರು. ಲೇಖಾ ವಸಂತ್ ಸ್ವಾಗತಿಸಿದರು. ಶೀಲಾ ಸುಂದರೇಶ್ ಕಾರ್ಯಕ್ರಮ ನಿರೂಪಿಸಿದರು.