ರಾಜ್ಯದ ಜನತೆಯ ಆರ್ಶೀವಾದದಿಂದ 12 ವರ್ಷಗಳ ನಂತರ ಮತ್ತೆ ವಿಧಾನಸೌಧಕ್ಕೆ ಹೆಜ್ಜೆ ಇಡುತ್ತಿದ್ದು, ಜನರ ಒಳಿತಿಗಾಗಿ ಕೆಲಸ ಮಾಡುತ್ತೇವೆ ಎಂದು ನೂತನ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬೆಂಗಳೂರು (ಮೇ.23): ರಾಜ್ಯದ ಜನತೆಯ ಆರ್ಶೀವಾದದಿಂದ 12 ವರ್ಷಗಳ ನಂತರ ಮತ್ತೆ ವಿಧಾನಸೌಧಕ್ಕೆ ಹೆಜ್ಜೆ ಇಡುತ್ತಿದ್ದು, ಜನರ ಒಳಿತಿಗಾಗಿ ಕೆಲಸ ಮಾಡುತ್ತೇವೆ ಎಂದು ನೂತನ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಲ್ಯಾಣ ರಾಜ್ಯ ಪ್ರಗತಿಪರ ಪಕ್ಷ ರಚನೆ ಮಾಡಿ ಇಡೀ ಉತ್ತರ ಕರ್ನಾಟಕ ಭಾಗದ ಪೈಕಿ ಹಲವು ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ನನ್ನನ್ನು ಸ್ವಾಗತಿಸಿದರು. ಆದರೆ, ನಾನೊಬ್ಬನೇ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದೇನೆ. ಮುಂದಿನ 2028ರ ವಿಧಾನಸಭೆಯಲ್ಲಿ ಬಹುಮತ ಪಡೆದು ಪಕ್ಷದ ಸದಸ್ಯರ ಜತೆ ವಿಧಾನಸೌಧಕ್ಕೆ ಹೆಜ್ಜೆ ಇಡುತ್ತೇನೆ.
ಈ ನಿಟ್ಟಿನಲ್ಲಿ ಪಕ್ಷವನ್ನು ಬೂತ್‌ಮಟ್ಟದಿಂದ ಬಲಗೊಳಿಸುತ್ತೇವೆ ಎಂದು ತಿಳಿಸಿದರು. ಜನಪರವಾಗಿ ತೆಗೆದುಕೊಳ್ಳುವ ತೀರ್ಮಾನಕ್ಕೆ ನನ್ನ ಬೆಂಬಲ ಇರುತ್ತದೆ. ಸದನದಲ್ಲಿ ಜನಪರ ಮಸೂದೆ ಮಂಡಿಸಿದರೂ ಸಹ ಬೆಂಬಲ ಖಂಡಿತ ಇರಲಿದೆ. ಪ್ರಸ್ತುತ ಯಾರ ಜತೆಯೂ ಜೋಡಿಸುವ ಪರಿಸ್ಥಿತಿ ಉದ್ಭವವಾಗಿಲ್ಲ. ಈ ಹಿಂದೆ ಮಾಧ್ಯಮದವರು ಮೈತ್ರಿ ಸರ್ಕಾರ ಬಂದರೆ ಯಾರಿಗೆ ಬೆಂಬಲ ಎಂದು ಕೇಳಿದ ಪ್ರಶ್ನೆಗೆ, ಬಹುಮತ ಬರುವ ಪಕ್ಷಕ್ಕೆ ನೀಡುವುದಾಗಿ ತಿಳಿಸಿದ್ದೆ. ಕಾಂಗ್ರೆಸ್ ಪಕ್ಷವಾದರೂ ನೀಡುತ್ತೇನೆ ಎಂದಿದ್ದೆ ಎಂದರು. ಇದೇ ವೇಳೆ ಮಾಜಿ ಸಚಿವ ಬಿ.ಶ್ರೀರಾಮುಲು ಸೋಲಿನ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜನರ ತೀರ್ಪಿಗೆ ತಲೆಬಾಗಬೇಕು ಎಂದಷ್ಟೇ ಹೇಳಿದರು.
ಸರ್ಕಾರ ಪಿಎಸ್‌ಐ ಹಗರಣ ತನಿಖೆ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್
ಬಿಜೆಪಿ ನೆಲಕಚ್ಚಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಾರಣ: ರಾಜ್ಯದಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಲು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಾರಣ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ಗಂಗಾವತಿ ನಗರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಚೇರಿಯಲ್ಲಿ ಬಳ್ಳಾರಿ ವಿಧಾನ ಸಭಾ ಕ್ಷೇತ್ರದ ಬೂತ್ ಮಟ್ಟದ ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರ ಆತ್ಮಾವಲೋಕನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಕ್ಷ ಸ್ಥಾಪನೆಗೂ ಮುಂಚೆ ಗಾಲಿ ಜನಾರ್ದನ ರೆಡ್ಡಿ ನನ್ನನ್ನು ಪಕ್ಷಕ್ಕೆ ಬರಮಾಡಿಕೊಳ್ಳಿ ಎಂದು ಬಿಜೆಪಿ ಮುಖಂಡರುಗಳ ಮನೆ ಬಾಗಿಲಿಗೆ ಹೋಗಿಲ್ಲ. ಅಮಿತ್ ಷಾ, ನರೇಂದ್ರ ಮೋದಿಯವರ ಬಳಿಯೂ ಹೋಗಿಲ್ಲ. ಎಷ್ಟೋ ಬಾರಿ ಅಮಿತ್ ಷಾ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರು ನಾನು ಅವರಿಗೆ ಸಿಕ್ಕಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ಪಕ್ಷವನ್ನು ನಾನೇ ದೂರ ಇಟ್ಟೆಎಂದು ಜನಾರ್ದನ ರೆಡ್ಡಿ ಮಾರ್ಮಿಕವಾಗಿ ನುಡಿದರು. ಬಳ್ಳಾರಿ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಲಕ್ಷ್ಮೇ ಅರುಣಾ ಅವರು ಎರಡನೇ ಸ್ಥಾನಕ್ಕೆ ಬಂದಿದ್ದಾರೆ.
ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ನಿಗಾ: ಶಾಸಕ ವಿಜಯೇಂದ್ರ ಭರವಸೆ
ಕೇವಲ ನೂರು ದಿನಗಳಲ್ಲಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಕ್ಷೇತ್ರದ ಹೆಚ್ಚಿನ ಜನರ ಮನಸ್ಸು ಮುಟ್ಟುವಲ್ಲಿ ಯಶಸ್ವಿ ಯಾಗಿದ್ದಾರೆ ಎಂದರು. ಇದಕ್ಕೂ ಮುಂಚೆ ಬಳ್ಳಾರಿ ವಿಧಾನ ಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಲಕ್ಷ್ಮೀ ಅರುಣಾ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡಿದ ತೀರ್ಪಿಗೆ ತಲೆ ಬಾಗುತ್ತೇನೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಹೇಮಲತಾ, ಶ್ರೀನಿವಾಸ ರೆಡ್ಡಿ, ಹಂಪಿ ರಮಣ, ತಿಲಕ, ವೆಂಕಟರಮಣ, ಸಂಜಯ ಬೆಟಗೇರಿ, ಶರವಣ ಸೇರಿದಂತೆ ಪ್ರಮುಖರು ಮೇಲೆ ಉಪಸ್ಥಿತರಿದ್ದರು.
