ಪಂಚರತ್ನ ಯೋಜನೆಗಳನ್ನು ಹೊರತುಪಡಿಸಿ ವರ್ಷಕ್ಕೆ ಐದು ಉಚಿತ ಸಿಲಿಂಡರ್‌ ನೀಡುವ ಘೋಷಣೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದೀಗ ಮತ್ತೊಂದು ಯೋಜನೆಯನ್ನು ಪ್ರಕಟಿಸಿದ್ದಾರೆ. 

ಬೆಂಗಳೂರು (ಏ.09): ಪಂಚರತ್ನ ಯೋಜನೆಗಳನ್ನು ಹೊರತುಪಡಿಸಿ ವರ್ಷಕ್ಕೆ ಐದು ಉಚಿತ ಸಿಲಿಂಡರ್‌ ನೀಡುವ ಘೋಷಣೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಇದೀಗ ಮತ್ತೊಂದು ಯೋಜನೆಯನ್ನು ಪ್ರಕಟಿಸಿದ್ದಾರೆ. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಎಲೆಕ್ಟ್ರಿಕ್‌ ಮೊಪೆಡ್‌ ದ್ವಿಚಕ್ರ ವಾಹನ ನೀಡುವುದಾಗಿ ಘೋಷಿಸಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಚೇನಹಳ್ಳಿ, ಶ್ರೀನಿವಾಸಪುರ ಸೇರಿದಂತೆ ವಿವಿಧೆಡೆ ಪಂಚರತ್ನ ರಥಯಾತ್ರೆ ನಡೆಯಿತು. ಈ ವೇಳೆ ಪಕ್ಷದ ಅಭ್ಯರ್ಥಿ ಜವರಾಯಿಗೌಡ ಪರ ಮತಯಾಚಿಸಿದರು. ಆಗ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಡವರ ಹೆಣ್ಣುಮಕ್ಕಳ ಕಣ್ಣೀರಿಗೆ ಶಾಶ್ವತ ಪರಿಹಾರ ನೀಡಬೇಕಿದೆ. ಕೇಂದ್ರದ ದುರಾಡಳಿತದ ಸಿಲಿಂಡರ್‌ಗಳ ಬೆಲೆ ಗಗನಕ್ಕೇರಿದೆ. ನಾವು ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಐದು ಸಿಲಿಂಡರ್‌ ಉಚಿತವಾಗಿ ನೀಡುತ್ತೇವೆ. ಅಲ್ಲದೇ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಎಲೆಕ್ಟ್ರಿಕ್‌ ಮೊಪೆಡ್‌ ನೀಡಲಾಗುವುದು’ ಎಂದರು.

ದತ್ತ ಯಾರೆಂದೇ ನನಗೆ ಗೊತ್ತಿಲ್ಲ: ಎಚ್ಡಿಕೆ ವ್ಯಂಗ್ಯ

ಪಂಚರತ್ನ ಪ್ರಾಮಾಣಿಕ ಜಾರಿ: ‘ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಏಕಾಂಗಿಯಾಗಿ ಹೋರಾಟ ನನ್ನದಾಗಿದೆ. ಪಂಚರತ್ನ ಕಾರ್ಯಕ್ರಮಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮತದಾರರು ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಬೇರೆ ಪಕ್ಷಗಳ ಆಮಿಷಗಳಿಗೆ ಬಲಿಯಾಗಬೇಡಿ. ಅವರು ಕೊಡುತ್ತಿರುವ ಕುಕ್ಕರ್‌ ಬ್ಲಾಸ್ಟ್‌ ಆಗುತ್ತಿದೆ. ನಕಲಿ ಕುಕ್ಕರ್‌ ಹಾವಳಿಯಿಂದ ದೂರ ಇರಬೇಕು’ ಎಂದು ಕರೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ರೈತರು, ಕೆಎಂಎಫ್‌ಗೆ ಅಮುಲ್‌ನಿಂದ ಖೆಡ್ಡಾ: ‘ರಾಜ್ಯದ ಬಿಜೆಪಿ ಸರ್ಕಾರ ಗುಜರಾತ್‌ ಹಾಲು ಮಹಾಮಂಡಳಿ ಅಮುಲ್‌ಗೆ ಬೆಂಗಳೂರಿನ ಕೋರಮಂಗಲದಲ್ಲಿ ಅತಿ ಕಡಿಮೆ ದರಕ್ಕೆ ಬೆಲೆ ಬಾಳುವ ಆರು ಎಕರೆಯಷ್ಟುಜಮೀನು ನೀಡಿದೆ. ಇಷ್ಟುಔದಾರ್ಯ ತೋರಿದ ಕರ್ನಾಟಕ ಹಾಲು ಉತ್ಪಾದಕರು ಮತ್ತು ಕೆಎಂಎಫ್‌ಗೆ ದೊಡ್ಡ ಖೆಡ್ಡಾ ತೋಡಲು ಅಮುಲ್‌ ಹೊರಟಿದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕನ್ನಡಿಗರಾದ ನಾವು ತಕ್ಷಣ ಎಚ್ಚೆತ್ತು ನಂದಿನಿಯನ್ನೇ ಅವಲಂಬಿಸಿರುವ ರಾಜ್ಯದ ರೈತರ ಹಿತವನ್ನು ಆದ್ಯತೆಯಲ್ಲಿ ರಕ್ಷಿಸಿ ಉಳಿಸಿಕೊಳ್ಳಬೇಕು. 

ನಮ್ಮ ಜನತೆ, ಗ್ರಾಹಕರು ನಂದಿನಿ ಉತ್ಪನ್ನವನ್ನಷ್ಟೇ ಆದ್ಯತೆಯ ಮೇರೆಗೆ ಬಳಸಿ ರಾಜ್ಯದ ರೈತರ ಬದುಕನ್ನು ಕಾಪಾಡಬೇಕು. ಇಲ್ಲಿನ ಡಬಲ್‌ ಎಂಜಿನ್‌ ಬಿಜೆಪಿ ಸರ್ಕಾರ. ಈಗಲಾದರೂ ಎಚ್ಚೆತ್ತು ತಕ್ಷಣ ರಾಜ್ಯದಲ್ಲಿ ಅಮುಲ್‌ನ ಪ್ಯಾಕೆಟ್‌ ಹಾಲಿನ ಮಾರಾಟಕ್ಕೆ ತಡೆವೊಡ್ಡಬೇಕು. ಕೇಂದ್ರದ ಒತ್ತಾಸೆಯಿಂದ ಅಮುಲ್‌ ಕದ್ದುಮುಚ್ಚಿ ಹಿಂಬಾಗಿಲ ಮೂಲಕ ಬರುತ್ತಿದೆ. ಕೆಎಂಎಫ್‌ ಮತ್ತು ರೈತರ ಕುತ್ತಿಗೆಗೆ ಕುಣಿಕೆ ಬಿಗಿಯುತ್ತಿರುವ ಅಮುಲ್‌ ವಿರುದ್ಧ ಕನ್ನಡಿಗರು ಸಿಡಿದೇಳಬೇಕು ಎಂದು ಹೇಳಿದರು. ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲಿಯೇ ಅಡ್ಡಿ ಮಾಡಬೇಕೆನ್ನುವುದು ಅಮುಲ್‌ ದುರಾಲೋಚನೆ. ‘ಒಂದು ದೇಶ, ಒಂದು ಅಮುಲ್‌, ಒಂದೇಹಾಲು, ಒಂದೇ ಗುಜರಾತ್‌’ ಎನ್ನುವುದು ಕೇಂದ್ರ ಸರ್ಕಾರದ ಅಧಿಕೃತ ನೀತಿಯಂತಿದೆ ಎಂದರು.

ಏ.9 ಅಥವಾ 10ಕ್ಕೆ ಜೆಡಿ​ಎಸ್‌ ಅಂತಿಮ ಪಟ್ಟಿ ಬಿಡು​ಗಡೆ: ಎಚ್‌.ಡಿ.ಕುಮಾ​ರ​ಸ್ವಾಮಿ

ಎಚ್‌ಡಿಕೆ ಹೇಳಿದ್ದೇನು?
- ಬಡ ಹೆಣ್ಣುಮಕ್ಕಳ ಕಣ್ಣೀರಿಗೆ ಶಾಶ್ವತ ಪರಿಹಾರ ನೀಡಬೇಕು
- ಕೇಂದ್ರದ ದುರಾಡಳಿತದಿಂದ ಸಿಲಿಂಡರ್‌ಗಳ ಬೆಲೆ ಗಗನಕ್ಕೇರಿದೆ
- 2 ರಾಷ್ಟ್ರೀಯ ಪಕ್ಷಗಳ ವಿರುದ್ಧ ಏಕಾಂಗಿ ಹೋರಾಟ ನಡೆಸುತ್ತಿರುವೆ
- ಜೆಡಿಎಸ್‌ ಗೆದ್ದರೆ ಪಂಚರತ್ನ ಯೋಜನೆಗಳ ಜಾರಿಗೆ ಶತಪ್ರಯತ್ನ