ದತ್ತ ಯಾರೆಂದೇ ನನಗೆ ಗೊತ್ತಿಲ್ಲ: ಎಚ್ಡಿಕೆ ವ್ಯಂಗ್ಯ
ವೈಎಸ್‌ವಿ ದತ್ತ ಯಾರೆಂದೇ ನನಗೆ ಗೊತ್ತಿಲ್ಲ. ಅವರು ತುಂಬಾ ದೊಡ್ಡವರು. ಅವರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅವರ ಬಗ್ಗೆ ನಾನೇಕೆ ಚರ್ಚೆ ಮಾಡಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದತ್ತ ಅವರ ಕಾಲೆಳೆದಿದ್ದಾರೆ.
ಕಡೂರು (ಏ.08): ವೈಎಸ್‌ವಿ ದತ್ತ ಯಾರೆಂದೇ ನನಗೆ ಗೊತ್ತಿಲ್ಲ. ಅವರು ತುಂಬಾ ದೊಡ್ಡವರು. ಅವರ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಅವರ ಬಗ್ಗೆ ನಾನೇಕೆ ಚರ್ಚೆ ಮಾಡಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದತ್ತ ಅವರ ಕಾಲೆಳೆದಿದ್ದಾರೆ. ಪಟ್ಟಣದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಜೆಡಿಎಸ್‌ಗೆ ಗುಡ್ ಬೈ ಹೇಳಿ, ಕಾಂಗ್ರೆಸ್‌ಗೆ ತೆರಳಿರುವ ಮಾಜಿ ಶಾಸಕ ವೈಎಸ್‌ವಿ ದತ್ತ ವಿರುದ್ಧ ಟೀಕಾಪ್ರಹಾರ ನಡೆಸಿದರು. ನನ್ನದು ಸಣ್ಣ ಪಕ್ಷ. ನನ್ನ ಪಕ್ಷಕ್ಕೆ ಅವರೇಕೆ ಬರುತ್ತಾರೆ?. ಅವರು ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಲು ಹೊರಟವರು. ನನ್ನ ಪಕ್ಷದಲ್ಲಿ ಅವರಿಗೆ ಏನು ಸಿಗುತ್ತೆ ಎಂದು ಟೀಕಿಸಿದರು.
ನನ್ನ ಹಳೆಯ, ಹಿಂದಿನ ಸ್ನೇಹಿತರು, ನನ್ನ ಮೇಲೆ ಬಹಳಷ್ಟು ಆರೋಪಗಳನ್ನು ಮಾಡಿದ್ದಾರೆ. ಸಮಾಜದ ಕುರಿತು ಚರ್ಚೆ ಮಾಡುವ ಸಂದರ್ಭದಲ್ಲಿ ಅದು ಬೇಡ, ಇದು ಬೇಡ ಎನ್ನುವ ಮುಖಂಡರು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು. ನಮ್ಮ ಪಕ್ಷಕ್ಕೆ ಅವರು ದೋಖಾ ಮಾಡಿ ಹೋಗಿದ್ದಾರೆ. ಹಾಗಿದ್ದರೂ ಕೂಡ ಕಡೂರು ವಿಧಾನಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುತ್ತೇವೆ. ನಾವು ಅವರಿಗೆ ಏನು ಅನ್ಯಾಯ ಮಾಡಿದ್ದೀವಿ ಹೇಳಲಿ. ನಮಗಿಂತ ಹೆಚ್ಚಾಗಿ 40 ವರ್ಷಗಳಿಂದ ದೇವೇಗೌಡರಿಗೆ ಅವರು ಮಾನಸ ಪುತ್ರರಾಗಿದ್ದರು. ನಾನು ಬಿಜೆಪಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದೇನೆಂದು ಆರೋಪಿಸಿದ್ದಾರೆ.
ನಾನು ಸ್ಪರ್ಧೆ ಮಾಡಲ್ಲ, ಪುತ್ರನಿಗೆ ಟಿಕೆಟ್ ಕೊಡಿ: ಸಚಿವ ಎಂಟಿಬಿ ನಾಗರಾಜ್
2006ರಲ್ಲಿ ನಾನು ಮುಖ್ಯಮಂತ್ರಿ ಆದರೆ ಸಂದರ್ಭದಲ್ಲಿ ದೇವೇಗೌಡರು ಅವರನ್ನು ಎಂಎಲ್ಸಿ ಮಾಡಿದ್ದರು. ಶಾಸಕರಾದ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದರು. ಅವರಿಗೆ ಬೇರೆ ಪಕ್ಷದವರು ಮಾತನಾಡಲೂ ಬಿಡುತ್ತಿರಲಿಲ್ಲ. ಏಕಾಂಗಿ ಹೋರಾಟ ಮಾಡುವ ನನಗೆ ಅವರ ಸಲಹೆ ಬೇಡ. ರಾಜ್ಯದಲ್ಲಿ ಏಕಾಂಗಿ ಹೋರಾಟ ಮಾಡುವ ಶಕ್ತಿಯನ್ನು ಈ ನಾಡಿನ ಆರೂವರೆ ಕೋಟಿ ಜನರು ನೀಡಿದ್ದಾರೆ. ಪ್ರೀತಿ,ವಿಶ್ವಾಸ ಎಲ್ಲಿವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಹೋರಾಟ ಮಾಡುತ್ತೇನೆ. ಇನ್ನೊಬ್ಬರ ಮೇಲೆ ಡಿಪೆಂಡ್ ಆಗುವುದಿಲ್ಲ ಎಂದರು.
ಜಾತಿಯ ಆಧಾರದ ಮೇಲೆ ಚುನಾವಣೆ: ಇತ್ತೀಚಿನ ದಿನಗಳಲ್ಲಿ ರಾಜಕಾರಣ ಜಾತ್ಯತೀತವಾದದ್ದು ಎಂದು ಹೇಳಿಕೊಂಡರೂ ಕೂಡ ಚುನಾವಣೆಗಳು ಜಾತಿಯ ಆಧಾರದ ಮೇಲೆ ನಡೆಯುತ್ತಿವೆ. ಗೆಲುವಿನ ಬಗ್ಗೆ ಮಾತ್ರ ಗಮನ ಹರಿಸುತ್ತಿರುವುದು ದುರಂತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಶುಕ್ರವಾರ ಕಡೂರು ಪಟ್ಟಣದ ಎಪಿಎಂಸಿ ಮೈದಾನದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯ ರ್ಥಿ ಆಯ್ಕೆ ಗೊಂದಲ ಬಗೆಹರಿದಿದೆ. ನಮ್ಮ ಪಕ್ಷದ ಅಭ್ಯರ್ಥಿಯಾಗಿ ಸಿ.ಎಂ.ಧನಂಜಯ ಅವರನ್ನು ಘೋಷಿಸಲಾಗಿದೆ. 2013ರಲ್ಲಿ ಕಡೂರಲ್ಲಿ ಜನರು ಜೆಡಿಎಸ್‌ಗೆ ಅಚ್ಚರಿಯ ಫಲಿತಾಂಶ ನೀಡಿದ್ದರು ಎಂದರು.
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಜಾತಿಯ ಮಾನದಂಡದಲ್ಲಿಯೇ ಚುನಾವಣೆಗಳು ನಡೆಯುತ್ತಿವೆ. ಆದರೆ, ದೇವೇಗೌಡರು ಜಾತಿ ಹೆಸರಲ್ಲಿ ರಾಜಕಾರಣ ಮಾಡಲಿಲ್ಲ, ಬದಲಾಗಿ ಎಲ್ಲರಿಗೂ ಅವಕಾಶ ಸಿಗುವಂತೆ ಮೀಸಲಾತಿ ಇಲ್ಲದೆ 1983ರಲ್ಲಿ ಹಾಸನದಲ್ಲಿ ದಲಿತ ವ್ಯಕ್ತಿಯನ್ನು ಮತ್ತು 1987ರಲ್ಲಿ ಕಡೂರಿನ ಕೆ.ಎಂ.ಕೃಷ್ಣಮೂರ್ತಿ ಅವರನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದು ದೇವೇಗೌಡರು ಎಂದರು. ನಾನು ಕೂಡ ರೈತನ ಮಗ, ಆಸ್ತಿ ಸಂಪಾದನೆ ಮಾಡಿಲ್ಲ. ರಾಜ್ಯದ ಲಕ್ಷಾಂತರ ಜನರ ಪ್ರೀತಿ ಸಂಪಾದನೆ ಮಾಡಿದ್ದೇನೆ.
ದೇವೇಗೌಡರೇ ನಮಗೆ ಸ್ಟಾರ್ ಪ್ರಚಾರಕರು: ನಿಖಿಲ್ ಕುಮಾರಸ್ವಾಮಿ
ರಾಜ್ಯದ 6006 ಗ್ರಾಮ ಪಂಚಾಯತಿಗಳಲ್ಲಿ ಕನ್ನಡ ಮತ್ತು ಇಂಗ್ಲೀಷ್ ಶಾಲೆಗಳನ್ನು ಆರಂಭಿಸಿ, ಕಡು ಬಡವರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ಸಿಗುವಂತೆ ಮಾಡುತ್ತೇನೆ. ಉನ್ನತ ಆಸ್ಪತ್ರೆಗಳಲ್ಲಿ ದಿನದ 24 ಗಂಟೆ ನಿಮ್ಮ ಹಳ್ಳಿಯಲ್ಲಿ ವೈದ್ಯರು ಚಿಕಿತ್ಸೆ ನೀಡುವ ಯೋಜನೆ ಜಾರಿ, ಯುವಸಮೂಹಕ್ಕೆ ಉದ್ಯೋಗ ನಮ್ಮ ಉದ್ದೇಶಗಳು ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.