Asianet Suvarna News Asianet Suvarna News

ಚುನಾವಣಾ ಬಾಂಡ್‌ನ ಮತ್ತಷ್ಟು ಮಾಹಿತಿ ಬಿಡುಗಡೆ, ಡಿಎಂಕೆಗೆ ಲಾಟರಿ ಕಿಂಗ್‌ 509 ಕೋಟಿ, ಜೆಡಿಎಸ್‌ ಗೆ 89 ಕೋಟಿ!

ಚುನಾವಣಾ ಬಾಂಡ್‌ನ ಮತ್ತಷ್ಟು ಮಾಹಿತಿ ಚು. ಆಯೋಗ  ಬಹಿರಂಗ ಬಿಡುಗಡೆ. 2018ರ ಬಳಿಕ ಬಿಜೆಪಿಗೆ ಒಟ್ಟು 8000 ಕೋಟಿ ರು. ಹಣ. ಒಟ್ಟು ದೇಣಿಗೆಯಲ್ಲಿ ಶೇ.50ರಷ್ಟು ಪಾಲು. 1300 ಕೋಟಿ ರು. ದೇಣಿಗೆಯಲ್ಲಿ ಡಿಎಂಕೆಗೆ 509 ಕೋಟಿ ನೀಡಿರುವ ಲಾಟರಿ ಕಿಂಗ್‌.

Electoral bonds data 2nd list Lottery King Santiago Martin DMK biggest donors gow
Author
First Published Mar 18, 2024, 8:45 AM IST

ನವದೆಹಲಿ (ಮಾ.18): ಚುನಾವಣಾ ಆಯೋಗವು ಭಾನುವಾರ ಚುನಾವಣಾ ಬಾಂಡ್‌ಗಳ ಕುರಿತ ಮತ್ತಷ್ಟು ದತ್ತಾಂಶಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಯಾವ ವ್ಯಕ್ತಿಯು ಯಾವ ಪಕ್ಷಗಳಿಗೆ ಎಷ್ಟು ಹಣ ನೀಡಿದ್ದಾನೆ ಎಂಬ ಕೆಲವು ಮಾಹಿತಿಗಳನ್ನೂ ಅದು ಸೇರಿಸಿದೆ. ಈ ಪ್ರಕಾರ, ಚುನಾವಣಾ ಬಾಂಡ್‌ಗಳ ಪ್ರಮುಖ ಖರೀದಿದಾರಾದ ‘ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್’, ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆಗೆ ಚುನಾವಣಾ ಬಾಂಡ್‌ ಮೂಲಕ 509 ಕೋಟಿ ರು. ದೇಣಿಗೆ ನೀಡಿದೆ ಎಂಬ ಅಂಶ ಬಯಲಾಗಿದೆ. ಅಲ್ಲದೆ, 6,986.5 ಕೋಟಿ ರು.ಗಳೊಂದಿಗೆ ಬಾಂಡ್‌ ಮೂಲಕ ಅತಿ ಹೆಚ್ಚು ಹಣ ಪಡೆದ ಪಕ್ಷ ಎಂಬ ಕೀರ್ತಿಗೆ ಬಿಜೆಪಿ ಭಾಜನವಾಗಿದೆ.

ಈಗ ಆಯೋಗ ಬಿಡುಗಡೆ ಮಾಡಿರುವ ದಾಖಲೆಗಳು ರಾಜಕೀಯ ಪಕ್ಷಗಳು ಆಯೋಗಕ್ಕೆ ಸಲ್ಲಿಸಿರುವ ಕೆಲವು ಬಾಂಡ್‌ ದೇಣಿಗೆದಾರರ ಮಾಹಿತಿ. ಬಾಂಡ್‌ಗಳ ದಿನಾಂಕ, ಮುಖಬೆಲೆಗಳು, ಬಾಂಡ್‌ಗಳ ಸಂಖ್ಯೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯು ಬಾಂಡ್‌ ಇಶ್ಯೂ ಮಾಡಿರುವುದು, ರಶೀದಿಯ ದಿನಾಂಕ ಮತ್ತು ಸಂದಾಯ ದಿನಾಂಕದ ದತ್ತಾಂಶ ಮಾತ್ರ ತೋರಿಸುತ್ತದೆ. ಇದು ಬಾಂಡ್‌ಗಳ ವಿಶಿಷ್ಟ ಸಂಖ್ಯೆಗಳನ್ನು ಬಹಿರಂಗಪಡಿಸಿಲ್ಲ. ಬಾಂಡ್‌ಗಳ ವಿಶಿಷ್ಟ ದತ್ತಾಂಶವನ್ನು ಎಸ್‌ಬಿಐ ಬಹಿರಂಗಪಡಿಸಿದರೆ, ಯಾರು ಯಾವ ಪಕ್ಷಗಳಿಗೆ ಎಷ್ಟು ದೇಣಿಗೆ ನೀಡಿದರು ಎಂಬ ಸಮಸ್ತ ವಿಷಯ ಬಹಿರವಾಗಲಿದೆ.

ಭಾನುವಾರ ಬಹಿರಂಗವಾದ ಕೆಲವು ದತ್ತಾಂಶಗಳು 2018ರಿಂದ 19ರ ನಡುವಿನ ಅವಧಿಯಲ್ಲಿ ನಡೆದ ದೇಣಿಗೆಯ ಮಾಹಿತಿಯನ್ನೂ ಒಳಗೊಂಡಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮುಂಬೈನಲ್ಲಿ ಭಾರತ್‌ ಜೋಡೋ ಯಾತ್ರೆಗೆ ಅದ್ಧೂರಿ ತೆರೆ, 10 ಗ್ಯಾರಂಟಿ ಘೋಷಿಸಿದ ರಾಹುಲ್ ಗಾಂಧಿ!

ಬಿಜೆಪಿ ನಂ.1: ಈ ಬಾಂಡ್‌ಗಳನ್ನು 2018 ರಲ್ಲಿ ಪರಿಚಯಿಸಿದಾಗಿನಿಂದ ಬಿಜೆಪಿಯು ಇವುಗಳ ಮೂಲಕ ಅತಿ ಗರಿಷ್ಠ 6,986.5 ಕೋಟಿ ರು. ಸ್ವೀಕರಿಸಿದೆ. ನಂತರದ ಸ್ಥಾನಲ್ಲಿರುವ ಪಶ್ಚಿಮ ಬಂಗಾಳದ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (1,397 ಕೋಟಿ ರು.), ಕಾಂಗ್ರೆಸ್ (1,334 ಕೋಟಿ ರು.) ಮತ್ತು ಬಿಆರ್‌ಎಸ್ (1,322 ಕೋಟಿ ರು). ದೇಣಿಗೆ ಸ್ವೀಕರಿಸಿವೆ. ಇವು ಟಾಪ್‌-4ರಲ್ಲಿ ಸ್ಥಾನ ಪಡೆದಿವೆ ಎಂದು ಗೊತ್ತಾಗಿದೆ.

ಒಡಿಶಾದ ಆಡಳಿತ ಪಕ್ಷ ಬಿಜೆಡಿ 944.5 ಕೋಟಿ ರೂ.ಗಳಲ್ಲಿ 5ನೇ ಅತಿ ದೊಡ್ಡ ದೇಣಿಗೆ ಸ್ವೀಕಾರ ಪಕ್ಷವಾಗಿದೆ. ನಂತರ ಡಿಎಂಕೆ 656.5 ಕೋಟಿ ರು. ಮತ್ತು ಆಂಧ್ರಪ್ರದೇಶದ ಆಡಳಿತ ಪಕ್ಷ ವೈಎಸ್ಆರ್ ಕಾಂಗ್ರೆಸ್ ಸುಮಾರು 442.8 ಕೋಟಿ ರು. ಮೌಲ್ಯದ ಬಾಂಡ್‌ಗಳನ್ನು ರಿಡೀಮ್ ಮಾಡಿವೆ.

ಟಿಡಿಪಿ 181.35 ಕೋಟಿ ರು., ಶಿವಸೇನೆ 60.4 ಕೋಟಿ ರು., ಆರ್‌ಜೆಡಿ 56 ಕೋಟಿ ರು., ಸಮಾಜವಾದಿ ಪಕ್ಷ 14.05 ಕೋಟಿ ರು. , ಅಕಾಲಿದಳ 7.26 ಕೋಟಿ ರು., ಎಐಎಡಿಎಂಕೆ 6.05 ಕೋಟಿ ರು., ನ್ಯಾಷನಲ್ ಕಾನ್ಫರೆನ್ಸ್ 50 ಲಕ್ಷ ರು. ಮೌಲ್ಯದ ಬಾಂಡ್‌ಗಳನ್ನು ರಿಡೀಮ್ ಮಾಡಿವೆ.

ಅಮೇಠಿ, ರಾಯ್‌ಬರೇಲಿಯಿಂದ ಸ್ಪರ್ಧೆ ಇಲ್ಲ? ಗಾಂಧಿ ಕುಟುಂಬದ ಭದ್ರಕೋಟೆಯಲ್ಲಿ ಕಡಿಮೆಯಾಗುತ್ತಿದೆ ಪ್ರಭಾವ!

ಲಾಟರಿ ಕಿಂಗ್‌ ಬಹುತೇಕ ಹಣ ಡಿಎಂಕೆಗೆ: ‘ಲಾಟರಿ ರಾಜ’ ಸ್ಯಾಂಟಿಯಾಗೊ ಮಾರ್ಟಿನ್ ಅವರ ಫ್ಯೂಚರ್‌ ಗೇಮಿಂಗ್, 1,368 ಕೋಟಿ ರು. ಮೌಲ್ಯದ ಚುನಾವಣಾ ಬಾಂಡ್‌ ಖರೀದಿಸಿ ಅತಿದೊಡ್ಡ ಖರೀದಿದಾರರಾಗಿ ಹೊರಹೊಮ್ಮಿದ್ದು, ಅದರಲ್ಲಿ ಸುಮಾರು ಶೇ.37 ಹಣ ಡಿಎಂಕೆಗೆ (509 ಕೋಟಿ ರು.) ಹೋಗಿದೆ. ಡಿಎಂಕೆಯ ಇತರ ಪ್ರಮುಖ ದಾನಿಗಳಲ್ಲಿ ಮೇಘಾ ಇಂಜಿನಿಯರಿಂಗ್ 105 ಕೋಟಿ ರು., ಇಂಡಿಯಾ ಸಿಮೆಂಟ್ಸ್ 14 ಕೋಟಿ ರು, ಮತ್ತು ಸನ್ ಟೀವಿ 100 ಕೋಟಿ ರು. ಇವೆ.

ಸಿಪಿಎಂ ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಸ್ವೀಕರಿಸುವುದಿಲ್ಲ ಎಂದು ಘೋಷಿಸಿದೆ, ಆದರೆ ಎಐಎಂಐಎಂ ಮತ್ತು ಬಿಎಸ್‌ಪಿ ಮಾಡಿದ ಫೈಲಿಂಗ್‌ಗಳು ಶೂನ್ಯ ರಸೀದಿಗಳನ್ನು ತೋರಿಸಿವೆ.

ಜೆಡಿಎಸ್‌ಗೆ 43 ಕೋಟಿ ರು. ಅಲ್ಲ, 89 ಕೋಟಿ ರು.: ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್ 43.5 ಕೋಟಿ ರು. ಹಣವನ್ನು ಚುನಾವಣಾ ಬಾಂಡ್‌ ಮೂಲಕ ಪಡೆದಿದೆ ಎಂದು 3 ದಿನಗಳ ಹಿಂದೆ ಗೊತ್ತಾಗಿತ್ತು. ಆದರೆ ಈಗ ದತ್ತಾಂಶ ಪರಿಷ್ಕರಣೆ ಆಗಿದ್ದು ಜೆಡಿಎಸ್ 89.75 ಕೋಟಿ ರು ಮೌಲ್ಯದ ಬಾಂಡ್‌ಗಳನ್ನು ಸ್ವೀಕರಿಸಿದೆ, ಇದರಲ್ಲಿ ಬಾಂಡ್‌ಗಳ 2ನೇ ಅತಿದೊಡ್ಡ ಖರೀದಿದಾರ ಮೇಘಾ ಇಂಜಿನಿಯರಿಂಗ್‌, ಜೆಡಿಎಸ್‌ಗೆ 50 ಕೋಟಿ ರು. ನೀಡಿದೆ. ಎಂಬಸಿ ಗ್ರೂಪ್, ಇನ್ಫೋಸಿಸ್ ಮತ್ತು ಬಯೋಕಾನ್ ತಮ್ಮ ದಾನಿಗಳಲ್ಲಿವೆ ಎಂದು ಜೆಡಿಎಸ್ ಹೇಳಿದೆ.

ಬಿಜೆಪಿ, ಕಾಂಗ್ರೆಸ್‌ ದಾನಿಗಳ ಗುರುತು ಬಹಿರಂಗ ಇಲ್ಲ!: ದಾನಿಗಳ ಗುರುತನ್ನು ಬಹಿರಂಗಪಡಿಸಿದ ಕೆಲವೇ ರಾಜಕೀಯ ಪಕ್ಷಗಳಲ್ಲಿ ಡಿಎಂಕೆ ಸೇರಿದೆ, ಆದರೆ ಬಿಜೆಪಿ, ಕಾಂಗ್ರೆಸ್, ಟಿಎಂಸಿ ಮತ್ತು ಎಎಪಿಯಂತಹ ಪ್ರಮುಖ ಪಕ್ಷಗಳು ಈ ವಿವರಗಳನ್ನು ಚುನಾವಣಾ ಆಯೋಗಕ್ಕೆ ಬಹಿರಂಗಪಡಿಸಲಿಲ್ಲ. ಹೀಗಾಗಿ ತನ್ನಲ್ಲಿದ್ದ ಮಾಹಿತಿಯನ್ನಷ್ಟೇ ಆಯೋಗ ಬಹಿರಂಗಪಡಿಸಿದೆ.

Follow Us:
Download App:
  • android
  • ios