Asianet Suvarna News Asianet Suvarna News

ಮುಂಬೈನಲ್ಲಿ ಭಾರತ್‌ ಜೋಡೋ ಯಾತ್ರೆಗೆ ಅದ್ಧೂರಿ ತೆರೆ, 10 ಗ್ಯಾರಂಟಿ ಘೋಷಿಸಿದ ರಾಹುಲ್ ಗಾಂಧಿ!

ರಾಹುಲ್‌ಗಾಂಧಿ ಹಮ್ಮಿಕೊಂಡಿರುವ ಭಾರತ್‌ ಜೋಡೋ-2 ನ್ಯಾಯ ಯಾತ್ರೆಗೆ ಅದ್ಧೂರಿ ತೆರೆ ಬಿದ್ದಿದೆ. ಬಿಜೆಪಿ ಸೋಲಿಸಲು ವಿಪಕ್ಷಗಳ ನಾಯಕರು ಪಣ ತೊಟ್ಟಿದ್ದಾರೆ. ಸಮಾರೋಪ ಸಮಾರಂಭದಲ್ಲಿ 10 ಗ್ಯಾರಂಟಿಗಳ ಘೋಷಣೆಯಾಗಿದೆ.

Rahul Gandhi concluded his Bharat Jodo Nyay Yatra in mumbai and  announced ten guarantees  gow
Author
First Published Mar 18, 2024, 8:11 AM IST

ಮುಂಬೈ (ಮಾ.18): ಲೋಕಸಭಾ ಚುನಾವಣೆಗೂ ಮುನ್ನ ಪಕ್ಷಕ್ಕೆ ಜನಬೆಂಬಲ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹಮ್ಮಿಕೊಂಡಿದ್ದ ‘ಭಾರತ್‌ ಜೋಡೋ ನ್ಯಾಯ ಯಾತ್ರೆ’ ಭಾನುವಾರ ರಾತ್ರಿ ಮುಂಬೈನಲ್ಲಿ ಸಂಪನ್ನಗೊಂಡಿತು. 2024ರ ಜ.14ರಂದು ಮಣಿಪುರದಲ್ಲಿ ಆರಂಭಗೊಂಡಿದ್ದ ಯಾತ್ರೆ ನಂತರದ 63 ದಿನಗಳ ಕಾಲ ದೇಶದ ಪೂರ್ವದಿಂದ ಪಶ್ಚಿಮಕ್ಕೆ 6700 ಕಿ.ಮೀ.ನಷ್ಟು ಸಾಗಿ ಭಾನುವಾರ ಮುಂಬೈನಲ್ಲಿ ಮುಕ್ತಾಯವಾಯಿತು.

ರಾತ್ರಿ ನಡೆದ ಇಲ್ಲಿ ನಡೆದ ಬೃಹತ್‌ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ರಾಹುಲ್‌ ಗಾಂಧಿ, ಎಂ.ಕೆ.ಸ್ಟಾಲಿನ್‌, ತೇಜಸ್ವಿ ಯಾದವ್‌, ಶರದ್‌ ಪವಾರ್‌, ಉದ್ಧವ್ ಠಾಕ್ರೆ, ಮೆಹಬೂಬಾ ಮುಫ್ತಿ ಸೇರಿದಂತೆ ಇಂಡಿಯಾ ಕೂಟದ ನಾಯಕರು, ‘ಬಿಜೆಪಿ 400 ಸ್ಥಾನ ಗೆಲ್ಲುವುದು ದೇಶದ ಸಂವಿಧಾನಕ್ಕೆ ಆಪಾಯ. ಏಕೆಂದರೆ ಸಂವಿಧಾನ ತಿರುಚುವುದೇ ಆ ಪಕ್ಷದ ಉದ್ದೇಶ. ಹಾಗಾಗಿ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗೆ ಇಂಡಿಯಾ ಕೂಟವನ್ನು ಜನರು ರಕ್ಷಿಸಬೇಕು’ ಎಂದು ಒಕ್ಕೊರಲ ಮನವಿ ಮಾಡಿದರು.

ಅಮೇಠಿ, ರಾಯ್‌ಬರೇಲಿಯಿಂದ ಸ್ಪರ್ಧೆ ಇಲ್ಲ? ಗಾಂಧಿ ಕುಟುಂಬದ ಭದ್ರಕೋಟೆಯಲ್ಲಿ ಕಡಿಮೆಯಾಗುತ್ತಿದೆ ಪ್ರಭಾವ!

ಇದಕ್ಕೂ ಮುನ್ನ ಬೆಳಗ್ಗೆ ಮುಂಬೈನ ಮಹಾತ್ಮಾ ಗಾಂಧಿ ಅವರ ನಿವಾಸವಾದ ಮಣಿ ಭವನದಿಂದ ಆಗಸ್ಟ್‌ ಕ್ರಾಂತಿ ಮೈದಾನದವರೆಗೆ ‘ನ್ಯಾಯ ಸಂಕಲ್ಪ ಪಾದಯಾತ್ರೆ’ ನಡೆಸಿದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕರು ಭಾರತ್‌ ಜೋಡೋ ನ್ಯಾಯ ಯಾತ್ರೆಗೆ ಔಪಚಾರಿಕ ಮಂಗಳ ಹಾಡಿದರು.

2 ಯಶಸ್ವಿ ಯಾತ್ರೆ: ರಾಹುಲ್‌ 2022ರ ಸೆ.7ರಿಂದ 2023ರ ಜ.30ರವರೆಗೆ ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಶ್ರೀನಗರ ವರೆಗೆ 130 ದಿನಗಳ ಕಾಲ ಸುಮಾರು 4000 ಕಿ.ಮೀ. ಭಾರತ್‌ ಜೋಡೋ ಯಾತ್ರೆ ಕೈಗೊಂಡಿದ್ದರು. ಅದು ಸಂಪೂರ್ಣ ಪಾದಯಾತ್ರೆ ಆಗಿತ್ತು. ಈಗ ಪೂರ್ವದ ಮಣಿಪುರದಿಂದ ಪಶ್ಚಿಮದ ಮುಂಬೈವರೆಗೆ ‘ಭಾರತ್‌ ಜೋಡೋ ನ್ಯಾಯ ಯಾತ್ರೆ’ ಹೆಸರಲ್ಲಿ 2ನೇ ಚರಣದ ಯಾತ್ರೆ ಕೈಗೊಂಡರು. ಇದು 6700 ಕಿ.ಮೀ.ನಷ್ಟು ಸಾಗಿದ 63 ದಿನಗಳ ಯಾತ್ರೆ ಆಗಿತ್ತು. ಇದು ಮೊದಲ ಯಾತ್ರೆಯಂತೆ ಪಾದಯಾತ್ರೆ ಆಗಿರಲಿಲ್ಲ. ಬಸ್‌ ಹಾಗೂ ಕಾಲ್ನಡಿಗೆಯ ಮೂಲಕ ಸಾಗಿತ್ತು. ಈ ಯಾತ್ರೆ ಮಣಿಪುರ, ನಾಗಾಲ್ಯಾಂಡ್‌, ಅಸ್ಸಾಂ, ಅರುಣಾಚಲಪ್ರದೇಶ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್‌, ಒಡಿಶಾ, ಛತ್ತೀಸ್‌ಗಢ, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ ಮತ್ತು ಮಹಾರಾಷ್ಟ್ರಗಳಲ್ಲಿ ಸಾಗಿತ್ತು.

  • 63 ದಿನಗಳ ಕಾಲ ನಡೆದ ಭಾರತ್‌ ಜೋಡೋ ನ್ಯಾಯ ಯಾತ್ರೆ
  • 6700 ಕಿಮೀ ಮಣಿಪುರದಿಂದ ಮುಂಬೈಗೆ ಯಾತ್ರೆ ಸಾಗಿದ ದೂರ
  • 10 ಗ್ಯಾರಂಟಿಗಳನ್ನು ಯಾತ್ರೆಯ ವೇಳೆ ಘೋಷಿಸಿರುವ ರಾಹುಲ್‌
  • 130 ದಿನಗಳ ಕಾಲ ನಡೆದಿದ್ದ ಭಾರತ್‌ ಜೋಡೋ ಮೊದಲ ಯಾತ್ರೆ
  • 4000 ಕಿಮೀ ದೂರ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದ ರಾಹುಲ್‌ ಗಾಂಧಿ

ರಾಹುಲ್ ಗಾಂಧಿ ನ್ಯಾಯ ಯಾತ್ರೆ ಸಮಾರೋಪದಲ್ಲಿ ವಿಪಕ್ಷಗಳ ಶಕ್ತಿ ಪ್ರದರ್ಶನ!

ರಾಹುಲ್‌ ಘೋಷಿಸಿದ 10 ಗ್ಯಾರಂಟಿಗಳು: ಭಾರತ್‌ ಜೋಡೋ ನ್ಯಾಯ ಯಾತ್ರೆ ವೇಳೆ ರಾಹುಲ್‌ ಗಾಂಧಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಲೋಕಸಭೆ ಚುನಾವಣೆ ಪ್ರಣಾಳಿಕೆಯಾಗಿ ಅನೇಕ ಗ್ಯಾರಂಟಿಗಳನ್ನು ಘೋಷಿಸಿ ಗಮನ ಸೆಳೆದರು. ಅವುಗಳಲ್ಲಿ ಪ್ರಮುಖವಾದವು

- ಸಾಲ ಮನ್ನಾ: ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲ ಮನ್ನಾ ಮಾಡಲಾಗುವುದು.

- ರೈತ ರಕ್ಷಣಾ ಕಾಯ್ದೆ: ರೈತರ ರಕ್ಷಣೆಗೆ ಹಾಗೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ದೊರಕಲು ಕಾಯ್ದೆ ರೂಪಿಸಲಾಗುವುದು

- ಕೃಷಿಗಿಲ್ಲ ಜಿಎಸ್‌ಟಿ: ಜಿಎಸ್‌ಟಿ ವ್ಯಾಪ್ತಿಯಿಂದ ಕೃಷಿಯನ್ನು ಹೊರತರಲಾಗುವುದು

- ಬೆಳೆ ವಿಮೆ ರೈತಸ್ನೇಹಿ: ರೈತರ ಕೈಗೆಟುಕದ ಬೆಳೆ ವಿಮೆ ಯೋಜನೆಯ ಸ್ವರೂಪವನ್ನು ಬದಲಿಸಿ ರೈತ ಸ್ನೇಹಿ ಮಾಡುತ್ತೇವೆ

- ಯುವಕರಿಗೆ ಅಪ್ರೆಂಟಿಸ್‌: ಉದ್ಯೋಗದ ಹಕ್ಕು ರೂಪಿಸಿ ಅರ್ಹ ಯುವಕರಿಗೆ ವಿದ್ಯಾಭ್ಯಾಸ ಮುಗಿದ ತಕ್ಷಣ ಅಪ್ರೆಂಟಿಸ್‌ ತರಬೇತಿ, ಜತೆಗೆ 1 ಲಕ್ಷ ರು. ಅಪ್ರೆಂಟಿಸ್‌ ಶಿಪ್‌ ನೆರವು

- ಮಹಾಲಕ್ಷ್ಮೀ ಗ್ಯಾರಂಟಿ: ದೇಶದ ಎಲ್ಲಾ ಕಡು ಬಡ ಕುಟುಂಬದ ತಲಾ ಒಬ್ಬ ಮಹಿಳೆಗೆ ಪ್ರತಿ ವರ್ಷ 1 ಲಕ್ಷ ರು.ಗಳನ್ನು ನೇರ ನಗದು ವರ್ಗಾವಣೆಯಡಿ ಬ್ಯಾಂಕ್‌ ಖಾತೆಗೆ ಜಮಾ ಮಾಡುವುದು.

- ಆಧಿ ಆಬಾದಿ, ಪೂರಾ ಹಕ್‌: ಕೇಂದ್ರ ಸರ್ಕಾರದ ಎಲ್ಲಾ ಹುದ್ದೆಗಳಿಗೆ ಇನ್ನುಮುಂದೆ ಮಾಡಿಕೊಳ್ಳುವ ನೇಮಕಾತಿಯಲ್ಲಿ ಶೇ.50ರಷ್ಟನ್ನು ಮಹಿಳೆಯರಿಗೆ ಮೀಸಲು ಇರಿಸುವುದು.

- ಶಕ್ತಿ ಕಾ ಸಮ್ಮಾನ್‌: ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಬಿಸಿಯೂಟದ ನೌಕರರಿಗೆ ನೀಡುವ ಗೌರವಧನದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ದುಪ್ಪಟ್ಟುಗೊಳಿಸುವುದು.

- ಅಧಿಕಾರ ಮೈತ್ರಿ: ಎಲ್ಲಾ ಪಂಚಾಯ್ತಿಗಳಲ್ಲಿ ಒಬ್ಬ ಅರೆ ನ್ಯಾಯಾಂಗ ಅಧಿಕಾರಿಯನ್ನು ನೇಮಿಸಿ, ಮಹಿಳೆಯರಿಗೆ ಕಾನೂನಿನಡಿ ಇರುವ ಹಕ್ಕುಗಳನ್ನು ತಿಳಿದುಕೊಳ್ಳಲು ಮತ್ತು ಅವುಗಳ ಅನುಕೂಲ ಪಡೆಯಲು ನೆರವು ನೀಡುವುದು.

- ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್‌: ಕೆಲಸಕ್ಕೆ ಹೋಗುವ ಮಹಿಳೆಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಹಾಸ್ಟೆಲ್‌ ಇರುವಂತೆ ನೋಡಿಕೊಳ್ಳುವುದು ಮತ್ತು ಈಗಿರುವ ಹಾಸ್ಟೆಲ್‌ಗಳನ್ನು ದ್ವಿಗುಣಗೊಳಿಸುವುದು.

ಬಿಜೆಪಿಗೆ ಸಂವಿಧಾನ ಬದಲಿಸುವ ಧೈರ್ಯ ಇಲ್ಲ: ರಾಹುಲ್‌ ಟಾಂಗ್
ದೇಶದ ಸಂವಿಧಾನವನ್ನು ಬದಲಿಸುವ ಧೈರ್ಯ ಬಿಜೆಪಿ ನಾಯಕರಿಗೆ ಇಲ್ಲ. ಆದರೂ ಅವರು ಬರೀ ಗದ್ದಲ ಮಾಡುತ್ತಾರೆ ಎಂದು ಹೇಳುವ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಉತ್ತರ ಕನ್ನಡ ಸಂಸದ ಅನಂತ ಕುಮಾರ್‌ ಹೆಗಡೆ ಹೇಳಿಕೆ ಬಗ್ಗೆ ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ. ಅಲ್ಲದೆ ಸತ್ಯ ಹಾಗೂ ಜನರ ಬೆಂಬಲ ತಮ್ಮ ಪರವಾಗಿ ಇದೆ ಎಂದೂ ಹೇಳಿದ್ದಾರೆ.

ಮಣಿಪುರದಿಂದ ಆರಂಭವಾಗಿದ್ದ ‘ಭಾರತ್‌ ಜೋಡೋ ನ್ಯಾಯ ಯಾತ್ರೆ’ ಸಮಾರೋಪದ ಅಂಗವಾಗಿ ಮುಂಬೈನ ಮಣಿ ಭವನ (ಮುಂಬೈನ ಮಹಾತ್ಮ ಗಾಂಧಿ ನಿವಾಸ)ದಿಂದ ಆಗಸ್ಟ್‌ ಕ್ರಾಂತಿ ಮೈದಾನ (1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿ ಆರಂಭವಾದ ಸ್ಥಳ)ದವರೆಗೆ ‘ನ್ಯಾಯ ಸಂಕಲ್ಪ ಪಾದಯಾತ್ರೆ’ಯನ್ನು ರಾಹುಲ್‌ ಗಾಂಧಿ ಭಾನುವಾರ ನಡೆಸಿದರು. ಈ ವೇಳೆ ಸಂವಿಧಾನ ಬದಲಿಸುವ ಬಿಜೆಪಿ ನಾಯಕನ ಹೇಳಿಕೆಗೆ ತಿರುಗೇಟು ಕೊಟ್ಟರು.

ಇದೇ ವೇಳೆ, ಸದ್ಯ ನಡೆಯುತ್ತಿರುವುದು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಣ ಸಮರವಲ್ಲ. ಎರಡು ಅಭಿಪ್ರಾಯಗಳ ನಡುವಿನ ಯುದ್ಧ. ದೇಶವನ್ನು ಕೇಂದ್ರೀಕೃತವಾಗಿ ನಡೆಸಬೇಕು, ಒಬ್ಬನೇ ವ್ಯಕ್ತಿ ಎಲ್ಲ ಜ್ಞಾನವನ್ನೂ ಹೊಂದಬೇಕು ಎಂದು ಒಬ್ಬ ವ್ಯಕ್ತಿ ಭಾವಿಸಿದ್ದಾರೆ. ಅದಕ್ಕೆ ತದ್ವಿರುದ್ಧವಾಗಿ, ಅಧಿಕಾರ ವಿಕೇಂದ್ರೀಕರಣವಾಗಬೇಕು. ಜನರ ದನಿಯನ್ನೂ ಆಲಿಸಬೇಕು ಎಂಬುದು ನಮ್ಮ ಆಲೋಚನೆಯಾಗಿದೆ. ಒಬ್ಬ ವ್ಯಕ್ತಿ ಐಐಟಿ ಪದವಿ ಹೊಂದಿದಾಕ್ಷಣ, ಒಬ್ಬ ರೈತನಿಗಿಂತ ಹೆಚ್ಚಿನ ಜ್ಞಾನವಂತ ಎಂದು ಹೇಳಲಾಗದು ಎಂದರು.

Follow Us:
Download App:
  • android
  • ios