ಬೆಂಗಳೂರು (ನ.05):  ತಮ್ಮ ಸೊಸೆ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರನ್ನು ಬೆಂಬಲಿಸುವಂತೆ ಅತ್ತೆ ಗೌರಮ್ಮ ಮನವಿ ಮಾಡಿರುವ ವಿಡಿಯೋ ಕುರಿತು ಬಿಜೆಪಿ ಅಭ್ಯರ್ಥಿ ಮುನಿರತ್ನ ಮಾಡಿರುವ ‘ಒಂದೇ ಟೇಕ್‌ನಲ್ಲಿ ಟೈಲಾಗ್‌ ಮುಗಿಸಿದ್ದಾರೆ’ ಎಂಬ ಟೀಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಅವರು ಗೌರಮ್ಮ ಅವರ ವಿಡಿಯೋ ಕುರಿತು ಒಂದೇ ಟೇಕ್‌ನಲ್ಲಿ ಡೈಲಾಗ್‌ ಮುಗಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ, ನಾವು ಹತ್ತು ಟೇಕ್‌ ತಗೊಳೋಕೆ ಸಿನಿಮಾ ಮಾಡುತ್ತಿಲ್ಲ. ಅವರ (ಮುನಿರತ್ನ ) ರೀತಿ ಕಟ್‌ ಆ್ಯಂಡ್‌ ಪೇಸ್ವ್‌ ಮಾಡುವುದಿಲ್ಲ. ಮುನಿರತ್ನ ಗೆದ್ದರೆ ಕೇವಲ ಇಂಧನ ಖಾತೆ ಯಾಕೆ, ಮುಖ್ಯಮಂತ್ರಿ ಸ್ಥಾನವನ್ನೇ ಪಡೆಯಲಿ. ಇದು ಕೇವಲ ಬಿಜೆಪಿ ಸರ್ಕಾರ ಅಲ್ಲ. ಕಾಂಗ್ರೆಸ್‌- ಬಿಜೆಪಿ ಸರ್ಕಾರವಾಗಲಿದೆ ಎಂದು ಹೇಳಿದರು.

'40 ಸಾವಿರ ಮತ ಅಂತರದಲ್ಲಿ ಬಿಜೆಪಿ ಗೆಲ್ಲುತ್ತೆ : ಅತ್ತೆ-ಸೊಸೆ ಬೇಗ ಒಂದಾಗಬೇಕು'

ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸದ ಹಾಗೂ ಜನಪರ ಕೆಲಸ ಮಾಡದೇ ಇರುವುದು ಹಾಗೂ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ವಿದ್ಯಾವಂತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದಿಲ್ಲ. ನಾವು ಯಾವ ಕಾರಣಕ್ಕೆ ಮತ ಹಾಕಬೇಕು ಅಂತಾ ಬೇಸರಗೊಂಡಿದ್ದಾರೆ. ಮತ ಹಾಕಿ ಅಂತಾ ಮುಖ್ಯಮಂತ್ರಿಗಳು ಹಾಗೂ ಇತರರು ಮನವಿ ಮಾಡಿದ್ದರು. ಆದರೆ ಅವರಿಗೆ ಮತ ಹಾಕಲು ಇಚ್ಛೆ ಇಲ್ಲದಿರುವ ಕಾರಣ ಮತಗಟ್ಟೆಗೆ ಬಂದಿಲ್ಲ ಎಂದರು.

ಏನೇ ಆಗಲಿ ಚುನಾವಣೆಯಲ್ಲಿ ಮತ ಚಲಾಯಿಸಿದ ಎಲ್ಲರಿಗೂ, ಹಗಲಿರುಳು ಶ್ರಮಿಸಿದ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಬೇರೆ ಪಕ್ಷದ ಕಾರ್ಯಕರ್ತರಿಗೂ ಧನ್ಯವಾದಗಳು. ಎರಡೂ ಕ್ಷೇತ್ರದಲ್ಲಿ ಬೇರೆ ಪಕ್ಷಗಳ ಕಾರ್ಯಕರ್ತರು ನಮಗೆ ಬೆಂಬಲ ನೀಡಿದ್ದಾರೆ. ಚುನಾವಣಾ ಆಯೋಗ ನಾವು ಕೊಟ್ಟಮಾಹಿತಿಗೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಕಾರ್ಯಪ್ರವೃತ್ತರಾಗಿದ್ದರು. ಪೊಲೀಸರ ದುರಾಡಳಿತ, ಅಧಿಕಾರಿಗಳ ದುರ್ಬಳಕೆ, ಅಕ್ರಮ ವಿಚಾರವಾಗಿ ನಾವು ಕೊಟ್ಟದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದಾರೆ. ಅದರ ಪರಿಣಾಮ ಏನಾಯ್ತು ಎಂಬುದು ಗೊತ್ತಿಲ್ಲ ಎಂದರು.