ಬೆಂಗಳೂರು (ನ.05):  ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 30-40 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೊರೋನಾ ಭೀತಿಯಿಂದಾಗಿ ವಲಸೆ ಕಾರ್ಮಿಕರು ಸ್ವಗ್ರಾಮಕ್ಕೆ ತೆರಳಿದ್ದು, ಶೇ.60ರಷ್ಟುಮಂದಿ ವಾಪಸ್‌ ಬೆಂಗಳೂರಿಗೆ ಬಂದಿಲ್ಲ. ಆರ್‌.ಆರ್‌.ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಸ್ಥಳೀಯ ನಾಯಕರೆಲ್ಲಾ ಬಿಜೆಪಿ ಬಂದಿರುವುದರಿಂದ ಮುನಿರತ್ನ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ. ಕಾಂಗ್ರೆಸ್‌ ಓಟ್‌ ಬ್ಯಾಂಕ್‌ ಎಂದು ನಂಬಿದ್ದವರು ಮತ ಹಾಕಿಲ್ಲ. ಬಿಜೆಪಿಯ ಕಾರ್ಯಕರ್ತರು, ಪಕ್ಷದ ಪಾರಂಪರಿಕ ಮತದಾರರೆಲ್ಲಾ ಬಂದು ಮತದಾನ ಮಾಡಿದ್ದಾರೆ. ಹೀಗಾಗಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಚಿತ ವಿತರಣೆ: ಸೆಟ್‌ಟಾಪ್‌ ಬಾಕ್ಸ್‌ ಆನ್‌ ಮಾಡಿದರೆ ಮುನಿರತ್ನ ಫೋಟೋ..! .

ದಿವಂಗತ ಡಿ.ಕೆ.ರವಿ ಅವರ ತಾಯಿ ನೀಡಿದ್ದಾರೆ ಎನ್ನಲಾದ ಹೇಳಿಕೆಯಿಂದ ಮತದಾರರ ಮೇಲೆ ಪರಿಣಾಮ ಬೀರುವುದಿಲ್ಲ. ಡಿ.ಕೆ.ಸಹೋದರರು ಮಾಡಿರುವ ಗಿಮಿಕ್‌ ಅದು. ಮಾಧ್ಯಮಗಳ ಮುಂದೆ ಹೇಳಬೇಕಾಗಿತ್ತು. 

ಆದರೆ ಮಾಧ್ಯಮಗಳ ಮುಂದೆ ಹೇಳಿಲ್ಲ. ವಿಡಿಯೋ ಹೇಳಿಕೆಯನ್ನು ನಂಬಲು ಕಷ್ಟ. ಅದರೂ ಅವರ ಸಂಸಾರ ಸರಿಹೋಗಲಿ, ಅತ್ತೆ-ಸೊಸೆ ಒಂದಾಗುವುದನ್ನು ನಾವು ಬಯಸುತ್ತೇವೆ ಮತ್ತು ಇದರಿಂದ ನಮಗೂ ಸಂತೋಷ ಎಂದರು.

ಶಿರಾ ಕ್ಷೇತ್ರಕ್ಕೂ ಆರ್‌.ಆರ್‌.ನಗರ ಕ್ಷೇತ್ರಕ್ಕೂ ಹೋಲಿಕೆ ಮಾಡಲು ಆಗುವುದಿಲ್ಲ. ಎರಡು ಕ್ಷೇತ್ರಗಳು ವಿಭಿನ್ನವಾಗಿವೆ. ಎರಡೂ ಕ್ಷೇತ್ರದಲ್ಲಿಯೂ ಬಿಜೆಪಿ ಜಯಗಳಿಸಲಿದೆ ಎಂದು ಇದೇ ವೇಳೆ ಹೇಳಿದರು.