ವಿದೇಶಗಳಿಗೆ ಹೋಗಿ ಭಾರತ ಸರ್ಕಾರ, ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ಟೀಕಿಸುವ ತಮ್ಮ ನಡೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಮುಂದುವರೆಸಿದ್ದಾರೆ.
ಬೋಸ್ಟನ್/ನವದೆಹಲಿ (ಏ.22): ವಿದೇಶಗಳಿಗೆ ಹೋಗಿ ಭಾರತ ಸರ್ಕಾರ, ಭಾರತದ ಸಾಂವಿಧಾನಿಕ ಸಂಸ್ಥೆಗಳನ್ನು ಟೀಕಿಸುವ ತಮ್ಮ ನಡೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಮುಂದುವರೆಸಿದ್ದಾರೆ. ಸದ್ಯ ಅಮೆರಿಕ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ, ‘ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ. ಚುನಾವಣಾ ಆಯೋಗ ತನ್ನ ವ್ಯವಸ್ಥೆಯಲ್ಲಿ ರಾಜಿ ಮಾಡಿಕೊಂಡಿದೆ’ ಎಂದು ಆರೋಪಿಸಿದ್ದಾರೆ. ಇದು ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದ್ದು, ರಾಹುಲ್‌ರನ್ನು ‘ದೇಶದ್ರೋಹಿ’ ಎಂದು ಟೀಕಿಸಿದೆ.
ಭಾನುವಾರದಿಂದ ಅಮೆರಿಕ ಪ್ರವಾಸ ಆರಂಭಿಸಿದ ರಾಹುಲ್ ಬೋಸ್ಟನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿ, ‘ಮಹಾರಾಷ್ಟ್ರ ಚುನಾವಣೆಯಲ್ಲಿ, ರಾಜ್ಯದಲ್ಲಿರುವ ವಯಸ್ಕರ ಸಂಖ್ಯೆಗಿಂತ ಅಧಿಕ ಮತಗಳು ಚಲಾವಣೆಯಾಗಿದ್ದವು. ಚುನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ ಸಂಜೆ 5:30ರಿಂದ 7:30ರ ವರೆಗಿನ ಕೇವಲ 2 ತಾಸಿನ ಅವಧಿಯಲ್ಲಿ 65 ಲಕ್ಷ ಮತಗಳು ಚಲಾವಣೆಯಾಗಿದ್ದವು. ಒಬ್ಬ ಮತದಾರನಿಗೆ ಮತ ಹಾಕಲು ಅಂದಾಜು 3 ನಿಮಿಷಗಳಾದರೂ ಬೇಕು. ಹೀಗೆ ಲೆಕ್ಕ ಹಾಕಿದರೆ, ಮರುದಿನ ನಸುಕಿನ 2 ಗಂಟೆಯವರೆಗೂ ಮತದಾನಕ್ಕೆ ಜನರು ಸರದಿಯಲ್ಲಿ ಇರಬೇಕಿತ್ತು. ಆದರೆ ಹಾಗಾಗಿಲ್ಲ. ಕೇವಲ 2 ತಾಸಿನಲ್ಲಿ 65 ಲಕ್ಷ ಜನ ಮತ ಚಲಾಯಿಸಿದ್ದಾರೆ ಎಂದು ಆಯೋಗ ಹೇಳಿದೆ’ ಎಂದರು.
ಡೈನಿಂಗ್ ಟೇಬಲ್‌ನಲ್ಲಿ ಕೂತು ಮೀನಿನೂಟ ಮಾಡುವಾಗ ಡಿಜಿಪಿಗೆ ಚಾಕು ಹಾಕಿದ್ದ ಪತ್ನಿ!
‘ಹೀಗಾಗಿ ನಾವು ಸಂದೇಹ ಬಗೆಹರಿಸಿಕೊಳ್ಳಲು ಮತದಾನ ಪ್ರಕ್ರಿಯೆ ವಿಡಿಯೋ ಕೇಳಿದೆವು. ಆಯೋಗ ಅದನ್ನು ಕೊಡಲು ನಿರಾಕರಿಸಿದ್ದಲ್ಲದೆ, ಅದನ್ನು ಕೇಳಲು ಅವಕಾಶವೇ ಇರದಂತೆ ಕಾನೂನನ್ನೇ ಬದಲಿಸಿತು. ಈ ವ್ಯವಸ್ಥೆಯಲ್ಲಿ ಸಮಸ್ಯೆ ಇರುವುದು ಸ್ಪಷ್ಟ. ಚುನಾವಣಾ ಆಯೋಗ ಅದರೊಂದಿಗೆ (ಬಿಜೆಪಿ ಜತೆ) ರಾಜಿ ಮಾಡಿಕೊಳ್ಳುತ್ತಿದೆ. ಇದನ್ನು ನಾನು ಅನೇಕ ಬಾರಿ ಹೇಳಿದ್ದೇನೆ’ ಎಂದು ರಾಹುಲ್ ಆಪಾದಿಸಿದರು. ರಾಹುಲ್ ಅಮೆರಿಕದ ಬ್ರೌನ್ ವಿವಿ ಹಾಗೂ ಇನ್ನೂ ಕೆಲವು ಕಡೆ ಏ.21ರ ತಡರಾತ್ರಿ ಹಾಗೂ 22ನೇ ತಾರೀಖಿನಂದು ಮಾತನಾಡಲಿದ್ದಾರೆ. ವಿದೇಶದಲ್ಲಿ ದೇಶ ಮತ್ತು ಆಂತರಿಕ ವಿಷಯಗಳನ್ನು ಬಹಿರಂಗವಾಗಿ ಟೀಕಿಸಿ, ರಾಹುಲ್ ಈ ಹಿಂದೆಯೂ ಹಲವು ಬಾರಿ ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಾಹುಲ್ ದ್ರೋಹಿ-ಬಿಜೆಪಿ ಕಿಡಿ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಮಾಡಿದ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ, ‘ವಿದೇಶಿ ನೆಲದಲ್ಲಿ ಭಾರತೀಯ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವವನ್ನು ಅವಮಾನಿಸಿದ ನೀವು (ರಾಹುಲ್) ಒಬ್ಬ ದೇಶದ್ರೋಹಿ’ ಎಂದು ಕಿಡಿಕಾರಿದ್ದಾರೆ. ‘ನೀವು ಮತ್ತು ನಿಮ್ಮ ತಾಯಿ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೇಶದ ದುಡ್ಡನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ಅದರ ವಿರುದ್ಧ ಜಾರಿ ನಿರ್ದೇಶನಾಲಯ ತೆಗೆದುಕೊಂಡ ಕ್ರಮದಿಂದ ಕೋಪಗೊಂಡು ಹೀಗೆಲ್ಲಾ ಮಾತನಾಡುತ್ತಿದ್ದೀರಿ. ಆದರೂ ನೀವಿಬ್ಬರು ಬಚಾವಾಗಲು ಸಾಧ್ಯವಿಲ್ಲ’ ಎಂದು ಕಿಡಿಕಾರಿದ್ದಾರೆ.
ಜನಿವಾರ ತೆಗೆಸಿದ ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ ಸಿದ್ದರಾಮಯ್ಯ
ರಾಹುಲ್ ಹೇಳಿದ್ದು ನಿಜ- ಕಾಂಗ್ರೆಸ್: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಹೊರಿಸಿರುವ ಆರೋಪವನ್ನು ಕಾಂಗ್ರೆಸ್ ಪಕ್ಷ ಸಮರ್ಥಿಸಿಕೊಂಡಿದೆ. ‘ಸಂವಿಧಾನದೊಂದಿಗೆ ಆಟವಾಡಿದಾಗ ಮಾತ್ರ ರಾಷ್ಟ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಆದರೆ ರಾಹುಲ್ ಅವರು ಸಾರ್ವಜನಿಕ ವಲಯದಲ್ಲಿರುವ ವಿಷಯವನ್ನೇ ಮಾತನಾಡಿದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಸದೆ ಕುಮಾರಿ ಸೆಲ್ಜಾ ಹೇಳಿದ್ದಾರೆ. ‘ವಿದೇಶಗಳಲ್ಲಿ ಭಾರತದ ಆಂತರಿಕ ರಾಜಕೀಯದ ಬಗ್ಗೆ ಮೊದಲು ಮಾತನಾಡಿ ವಿಪಕ್ಷಕ್ಕೆ ಅವಮಾನ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ’ ಎಂದು ತಿರುಗೇಟು ನೀಡಿದ್ದಾರೆ.
