ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಚಾರದಲ್ಲಿ ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ಏ.22): ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ವಿಚಾರದಲ್ಲಿ ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಪ್ಪು ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಆಗಲಿದೆ’ ಎಂದು ಭರವಸೆ ನೀಡಿದರು. ಕಳೆದ ವಾರ ರಾಜ್ಯದ ಹಲವು ನಗರಗಳ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ, ತೆಗೆದು ಕತ್ತರಿಸಿದ ಘಟನೆ ನಡೆದಿತ್ತು.

ಇದಕ್ಕೆ ರಾಜ್ಯವ್ಯಾಪಿ ಆಕ್ರೋಶ ವ್ಯಕ್ತವಾಗಿ ಆಡಳಿತ, ವಿಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಕೆಲ ಸಚಿವರು ಸಂತ್ರಸ್ತ ವಿದ್ಯಾರ್ಥಿಗಳ ಮನೆಗೆ ತೆರಳಿ ನೆರವಿನ ಭರವಸೆಯನ್ನೂ ನೀಡಿದ್ದರು. ಜೊತೆಗೆ ಬ್ರಾಹ್ಮಣ ಸಮುದಾಯ ಬೀದಿಗಿಳಿದು ಹೋರಾಟ ನಡೆಸಿತ್ತು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು. ಆದರೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದುವರೆಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಸೋಮವಾರ ಈ ಕುರಿತು ಪ್ರತಿಕ್ರಿಯಿಸಿರುವ ಅವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.

ವೇಮುಲಾ ಕಾಯ್ದೆಗೆ ಪ್ರಯತ್ನ: ಇದೇ ವೇಳೆ ರಾಹುಲ್‌ಗಾಂಧಿ ಅವರು ರೋಹಿತ್‌ ವೇಮುಲಾ ಕಾಯ್ದೆ ಮಾಡಿರುವಂತೆ ಪತ್ರ ಬರೆದಿರುವ ವಿಚಾರ ಮಾತನಾಡಿ, ಈ ಕಾಯ್ದೆಯ ಕರಡು ಸಿದ್ಧಪಡಿಸುವಂತೆ ಕಾನೂನು ಸಲಹೆಗಾರರಿಗೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಪಕ್ಷದ ವರಿಷ್ಠ ರಾಹುಲ್ ಗಾಂಧಿಯವರಿಗೆ ಪತ್ರ ಬರೆಯಲಾಗಿದ್ದು, ಈ ಕುರಿತು ಪರಿಶೀಲಿಸಿ ಕಾಯ್ದೆ ತರಲು ಪ್ರಯತ್ನ ಮಾಡುತ್ತೇವೆ. ಶಿಕ್ಷಣ ವ್ಯವಸ್ಥೆಯಲ್ಲಿ ಜಾತಿತಾರತಮ್ಯ ನಿವಾರಣೆಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಸಿಇಟಿ ವೇಳೆ ಜನಿವಾರ ತೆಗೆಸಿದ್ದು ತಪ್ಪು: ಡಿ.ಕೆ.ಶಿವಕುಮಾರ್

ಹಿಂದೂ ಸಂಘಟನೆಗಳ ಕಿಡಿ: ಘಟನೆ ಬಗ್ಗೆ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ವಿಷಯ ಗೊತ್ತಾಗುತ್ತಿದ್ದಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್‌ ಅವರು ಭಾನುವಾರ ಮಧ್ಯಾಹ್ನ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ, ಧೈರ್ಯ ತುಂಬಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುತಾಲಿಕ್‌, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಈ ಸಂಬಂಧ ವಿದ್ಯಾರ್ಥಿಗಳ ತಂದೆ-ತಾಯಿ ಬಳಿ ಕ್ಷಮೆ ಕೇಳಬೇಕು. ಹಿಂದೂ ವಿದ್ಯಾರ್ಥಿಗಳನ್ನು ಅವಮಾನಿಸುವ ಕೆಲಸ ನಡೆಯುತ್ತಿದೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗುತ್ತೇವೆ. ಹಿಜಾಬ್​, ಬುರ್ಖಾಗೆ ಅವಕಾಶ ಕೊಡುವ ಸರ್ಕಾರಕ್ಕೆ, ಆ ಧರ್ಮದ ಬಗ್ಗೆ ಮಾತನಾಡುವ ಧೈರ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.