ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹ ಹೂತಿಟ್ಟಿರುವ ಕುರಿತ ದೂರನ್ನು ರಾಜ್ಯ ಸರ್ಕಾರ ಸಣ್ಣ ಪ್ರಕರಣ ಎಂದು ಪರಿಗಣಿಸಿಲ್ಲ. ಸಾಧಕ-ಬಾಧಕ ನೋಡಿ ಹೆಚ್ಚಿನ ತನಿಖೆಗಾಗಿ ಎಸ್‌ಐಟಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು (ಜು.21): ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಮೃತದೇಹ ಹೂತಿಟ್ಟಿರುವ ಕುರಿತ ದೂರನ್ನು ರಾಜ್ಯ ಸರ್ಕಾರ ಸಣ್ಣ ಪ್ರಕರಣ ಎಂದು ಪರಿಗಣಿಸಿಲ್ಲ. ಸಾಧಕ-ಬಾಧಕ ನೋಡಿ ಹೆಚ್ಚಿನ ತನಿಖೆಗಾಗಿ ಎಸ್‌ಐಟಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಯಾವುದೇ ಒತ್ತಡಕ್ಕೂ ಮಣಿದು ಎಸ್‌ಐಟಿ ರಚಿಸಿಲ್ಲ. ಆದಷ್ಟು ಬೇಗ ವರದಿ ನೀಡಲು ಸೂಚಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸೌಜನ್ಯ ಪ್ರಕರಣ ತನಿಖೆ ಇಲ್ಲ: ಎಸ್ಐಟಿಯು ಸೌಜನ್ಯ ಸಾವಿನ ಬಗ್ಗೆಯೂ ತನಿಖೆ ನಡೆಸಲಿದೆಯೇ ಎಂಬ ಪ್ರಶ್ನೆಗೆ, ‘ಸೌಜನ್ಯ ಪ್ರಕರಣದ ವಿಚಾರ ಇಲ್ಲ. ಅಲ್ಲಿ ಈಗ ದೂರು ನೀಡಿರುವ ಪ್ರಕರಣದ ಕುರಿತು ಮಾತ್ರ ತನಿಖೆಯಾಗುತ್ತದೆ. ಈ ಬಗ್ಗೆ ಎಸ್ಐಟಿ ರಚನೆ ವೇಳೆಯೇ ನಿಬಂಧನೆಗಳನ್ನೂ ತಿಳಿಸಿದ್ದೇವೆ’ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸ್ಥಳೀಯವಾಗಿ ಪ್ರಕರಣದ ಬಗ್ಗೆ ದೂರು ನೀಡಿದ್ದರು. ಹೀಗಾಗಿ ಎಫ್‌ಐಆರ್ ದಾಖಲಿಸಿ ಪ್ರಾಥಮಿಕ ತನಿಖೆಯಾಗಲಿ. ಅಗತ್ಯಬಿದ್ದರೆ ಉನ್ನತ ಮಟ್ಟದ ತನಿಖೆ ನಡೆಸುತ್ತೇವೆ ಎಂದು ನಾನು ಮೊದಲೇ ಹೇಳಿದ್ದೆ. ಇತ್ತೀಚೆಗೆ ಸಿಎಂ, ನಾನು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಭೆ ನಡೆಸಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿದ್ದೇವೆ ಎಂದರು.
ಯಾವುದೋ ಒಂದು ಒತ್ತಡಕ್ಕೆ ಮಣಿದು ಮಾಡುವುದು ಅಲ್ಲ. ವಸ್ತುಸ್ಥಿತಿ ಪರಿಶೀಲಿಸಿದ ಬಳಿಕ ಇನ್ನೂ ಹೆಚ್ಚಿನ ರೀತಿಯಲ್ಲಿ ತನಿಖೆ ಆಗಬೇಕು ಎಂಬ ಸಾರ್ವಜನಿಕರ ಅಭಿಪ್ರಾಯ ಹಾಗೂ ಅವಶ್ಯಕತೆ ಪರಿಗಣಿಸಿ ತನಿಖೆಗೆ ನೀಡಲಾಗಿದೆ. ನೂರಾರು ಅಸ್ಥಿಪಂಜರಗಳು ಇರುವುದನ್ನು ಸರ್ಕಾರ ಸಣ್ಣದಾಗಿ ನೋಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿರಿಯ ಪೊಲೀಸ್ ಆಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಅವರು ಪ್ರತಿ ಹಂತದಲ್ಲೂ ಡಿಜಿ-ಐಜಿಗೆ ತನಿಖೆಯ ಪ್ರಗತಿ ಬಗ್ಗೆ ಮಾಹಿತಿ ನೀಡಬೇಕು. ಅಂತಿಮ ವರದಿಯನ್ನೂ ಡಿಜಿ-ಐಜಿಗೆ ಕಳುಹಿಸಬೇಕು ಎಂದು ಹೇಳಿದ್ದೇವೆ. ಇದಲ್ಲಿ ಸರ್ಕಾರ ಮುಚ್ಚಿಡುವಂತದ್ದು ಏನೂ ಇಲ್ಲ. ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
