ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಹೈಕಮಾಂಡ್‌ ಹಿರಿಯ ಸಚಿವರು ರಾಜೀನಾಮೆ ನೀಡಬೇಕೆಂದು ತೀರ್ಮಾನ ತೆಗೆದುಕೊಂಡರೆ ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಬೆಂಗಳೂರು (ಏ.14): ಹಿರಿಯ ಶಾಸಕರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಹೈಕಮಾಂಡ್‌ ಹಿರಿಯ ಸಚಿವರು ರಾಜೀನಾಮೆ ನೀಡಬೇಕೆಂದು ತೀರ್ಮಾನ ತೆಗೆದುಕೊಂಡರೆ ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

Add Asianetnews Kannada as a Preferred SourcegooglePreferred

ಸಚಿವಾಕಾಂಕ್ಷಿ ಶಾಸಕರ ದೆಹಲಿ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ಎರಡು, ಮೂರು ಬಾರಿ ಶಾಸಕರಾಗಿರುವವರಿಗೆ ಸಚಿವ ಸ್ಥಾನ ನಿಭಾಯಿಸುವ ಸಾಮರ್ಥ್ಯ ಇರುತ್ತದೆ. ಯಾವುದೇ ಖಾತೆಯನ್ನಾಗಲಿ ನಿಭಾಯಿಸುವ ಅನುಭವ ಸಹಜವಾಗಿರುತ್ತದೆ. ಆದರೆ ಅದರ ಬಗ್ಗೆ ಸಿಎಂ ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಹೊಸಬರಿಗೆ ಅವಕಾಶ ಮಾಡಿಕೊಡಲು ಸಂಪುಟದಲ್ಲಿರುವ ಹಿರಿಯರೂ ರಾಜೀನಾಮೆ ನೀಡಬೇಕು ಎಂದಾದರೆ, ನಾನಾಗಲಿ, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌, ಎಚ್‌.ಕೆ.ಪಾಟೀಲ್‌ ಸೇರಿ ಹಿರಿಯ ಸಚಿವರು ಹೈಕಮಾಂಡ್‌ ನಿರ್ಧಾರವನ್ನು ಒಪ್ಪದೆ ಪ್ರಶ್ನೆ ಮಾಡಲು ಅವಕಾಶ ಇಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಸಚಿವ ಸ್ಥಾನದಿಂದ ನಮ್ಮನ್ನು ಬದಲಾವಣೆ ಮಾಡಿದರೆ, ಬೇಡ ಎನ್ನಲು ಸಾಧ್ಯವಿಲ್ಲ. ಅನನುಭವಿಗಳಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ ಎಂಬುದು ನಮಗೆ ಸಂಬಂಧ ಪಡದ ವಿಚಾರ ಎಂದರು.

ಗ್ಯಾಂಬ್ಲಿಂಗ್‌ ಎನ್ನುವುದು ಸರಿಯಲ್ಲ

ಹಿರಿಯ ಶಾಸಕರ ದೆಹಲಿ ಪ್ರವಾಸವನ್ನು ಗ್ಯಾಂಬ್ಲಿಂಗ್‌ ಎಂದು ಕರೆಯುವುದು ಸರಿಯಲ್ಲ. ಕೆಲವರು ಬಹಿರಂಗವಾಗಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಸಲ್ಲಿಸುತ್ತಿರಬಹುದು. ಅರ್ಹತೆ ಇದೆ ಎಂದು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಅವಕಾಶ ಸಿಕ್ಕವರಿಗೆ ಮತ್ತೆ ಸಿಗುತ್ತಿದೆ. ಹೊಸಬರಿಗೆ ಅವಕಾಶ ಬೇಕು ಎಂಬುದೂ ಸರಿ. ಪ್ರತಿ ಬಾರಿ ಸಂಪುಟ ಪುನರ್‌ ರಚನೆ ಮಾಡುವಾಗಲೂ ಕೆಲ ಹಿರಿಯರನ್ನು ಉಳಿಸಿಕೊಂಡು ಕಿರಿಯರಿಗೆ ಅವಕಾಶ ಕಲ್ಪಿಸುವುದು ಸಾಮಾನ್ಯ ಎಂದರು.