ಡಿ.ಕೆ.ಸುರೇಶ್‌ಗೆ ಮತ ಹಾಕದಿದ್ರೆ ನೀರು ಕೊಡಲ್ಲ: ಡಿ.ಕೆ.ಶಿವಕುಮಾರ್
ನಗರದ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆದರಿಕೆ ರೂಪದಲ್ಲಿ ಹೇಳಿದ್ದಾರೆ ಎನ್ನಲಾದ ವೀಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ಬಿಡುಗಡೆ ಮಾಡಿದೆ.
ಬೆಂಗಳೂರು (ಏ.18): ನಮಗೆ (ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್‌ಗೆ) ಮತ ನೀಡದೆ ಹೋದರೆ ಸಿಎ ನಿವೇಶನ ಹಾಗೂ ಕಾವೇರಿ ನೀರು ಪೂರೈಸುವಂತೆ ನನ್ನನ್ನು ಕೇಳಬೇಡಿ ಎಂದು ನಗರದ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೆದರಿಕೆ ರೂಪದಲ್ಲಿ ಹೇಳಿದ್ದಾರೆ ಎನ್ನಲಾದ ವೀಡಿಯೋವನ್ನು ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ಬಿಡುಗಡೆ ಮಾಡಿದೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ‘ಕೊತ್ವಾಲ್ ಬದ್ರರ್ಸ್‌ಗಳ’ ಗೂಂಡಾಗಿರಿ ದಿನೇ ದಿನೆ ಹೆಚ್ಚಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ. ಇದೇ ವಿಷಯವನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೂ ಪ್ರಸ್ತಾಪಿಸಿ ಹರಿಹಾಯ್ದಿದ್ದಾರೆ. ‘ನಿನ್ನೆ ರೈತರ ಹೊಲ ಸುಟ್ಟು ರೈತನಿಗೆ ಗನ್ ಪಾಯಿಂಟ್ ಇಟ್ಟು ವಾತಾವರಣವನ್ನು ಭಯಭೀತಗೊಳಿಸಿದ್ದರು.
ಇಂದು ಅಪಾರ್ಟ್‌ಮೆಂಟ್ ನಿವಾಸಿಗಳ ಸಭೆಯಲ್ಲಿ ಡಿ.ಕೆ. ಸುರೇಶ್‌ಗೆ ಮತ ಹಾಕಿಲ್ಲವೆಂದರೆ ನಿಮಗೆ ನೀರು ಕೊಡುವುದಿಲ್ಲ. ಹಕ್ಕುಪತ್ರ ನೀಡುವುದಿಲ್ಲ ಎಂದು ನೇರವಾಗಿಯೇ ಡಿ.ಕೆ. ಶಿವಕುಮಾರ್ ಅವರೇ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಗೊಡ್ಡು ಬೆದರಿಕೆಗಳೀಗೆ ಜನತೆ ಏ.26ರಂದು ಅಂತಿಮ ಮೊಳೆ ಹೊಡೆಯುವುದು ಖಚಿತ-ನಿಶ್ವಿತ-ಖಂಡಿತ’ ಎಂದು ಪೋಸ್ಟ್‌ನಲ್ಲಿ ಬಿಜೆಪಿ ಕಿಡಿಕಾರಿದೆ. ಬಿಜೆಪಿ ತನ್ನ ಪೋಸ್ಟ್‌ನಲ್ಲಿ ಯಾವ ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಉದ್ದೇಶಿಸಿ ಡಿ.ಕೆ. ಶಿವಕುಮಾರ್ ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ಹೇಳಿಲ್ಲ. ಆದರೆ, ವಿಡಿಯೋವನ್ನು ವೀಕ್ಷಿಸಿದರೆ, ಆರ್.ಆರ್. ನಗರದ ವ್ಯಾಪ್ತಿಗೆ ಬರುವ ಅಪಾರ್ಟ್‌ಮೆಂಟ್‌ವೊಂದರ ನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.
ದೇವೇಗೌಡರಿಗಿಂತ ಎಚ್.ಡಿ.ಕುಮಾರಸ್ವಾಮಿ ದೊಡ್ಡವರಾ?: ಸಚಿವ ಚಲುವರಾಯಸ್ವಾಮಿ
ವೀಡಿಯೋದಲ್ಲಿ ಡಿಸಿಎಂ ಹೇಳಿರುವುದೇನು?: ‘ನೇರವಾಗಿ ಹೇಳುವುದೇನೆಂದರೆ ನಾನು ‘ಬಿಸಿನೆಸ್ ಡೀಲ್’ಗಾಗಿ ಬಂದಿದ್ದೇನೆ. ಅಪಾರ್ಟ್‌ಮೆಂಟ್‌ನಲ್ಲಿ 2,510 ಮನೆಗಳಿದ್ದು, 6,424 ಮತದಾರರು ಇದ್ದಾರೆ. ಈ ಅಪಾರ್ಟ್‌ಮೆಂರ್ಟ್ ಭಾಗವಾಗಿ ಸಿಎ ನಿವೇಶನ ನೀಡಬೇಕು ಹಾಗೂ ಕಾವೇರಿ ನೀರು ಒದಗಿಸಬೇಕು ಎಂಬುದು ನಿಮ್ಮ ಪ್ರಮುಖ ಬೇಡಿಕೆಗಳಾಗಿವೆ. ಇತರೆ ಬೇಡಿಕೆಗಳು ಸಣ್ಣ ವಿಚಾರಗಳಾಗಿವೆ. ಎರಡು ಪ್ರಮುಖ ಬೇಡಿಕೆಗಳನ್ನು ಪೂರೈಸಿದರೆ ನೀವು ನನಗೆ ಏನು ಮಾಡುತ್ತೀರಿ? ಎಂಬುದು ಸಿಂಪಲ್ ವಿಚಾರ. ನಿಮ್ಮ ಮತದಾನದ ಕೇಂದ್ರ ಆರ್.ಆರ್.ನಗರ ಶಾಲೆಯಲ್ಲಿದೆ. ಮತದಾನದ ಕೇಂದ್ರದ ಎಲ್ಲಾ ಬೂತ್‌ಗಳನ್ನು ಎಣಿಸಲಾಗುವುದು. ಎರಡು-ಮೂರು ಬೂತ್‌ಗಳಲ್ಲಿ ನಿಮ್ಮೆಲ್ಲರ ಮತಗಳು ಇರುತ್ತವೆ. ನಿಮ್ಮಲ್ಲಿ ಸುಮಾರು 250 ಮಂದಿ ಇಲ್ಲಿನವರಾಗಿರುತ್ತಾರೆ. ಉಳಿದವರು ಹೊರಗಿನವರಾಗಿರುತ್ತಾರೆ’ ಎಂದು ಹೇಳಿದ್ದಾರೆ.
‘ನಿಮಗೆ ಮೈದಾನಕ್ಕೆ ಸಿಎ ನಿವೇಶನ ಬೇಕಾಗಿದೆ. ಆ ಮೈದಾನದಲ್ಲಿ ನೀವಲ್ಲ, ನಿಮ್ಮ ಮಕ್ಕಳು ಆಟವಾಡುತ್ತಾರೆ. ಈ ಕುರಿತಂತೆ ಹೈಕೋರ್ಟ್‌ನಲ್ಲಿ ಪಿಐಎಲ್ ಇದೆ. ಕೋರ್ಟ್ ತೀರ್ಪಿನ ಪ್ರತಿ ಸಹ ಇನ್ನೂ ನಿಮಗೆ ಕೊಟ್ಟಿಲ್ಲ. ಇಲ್ಲಿಗೆ ಬರುವ ಮುಂಚೆ ನಿಮ್ಮ ಸಮಸ್ಯೆಗಳಿಗೆ ಏನು ಮಾಡಬೇಕು ಎಂಬ ಬಗ್ಗೆ ರಾಜ್ಯ ನಗರಾಭಿವೃದ್ಧಿ ಇಲಾಖೆ ಆಯುಕ್ತರೊಂದಿಗೆ ನಾನು ಮಾತನಾಡಿದೆ. ಎಲ್ಲಿ ಮನಸ್ಸಿರುತ್ತದೆಯೋ; ಅಲ್ಲಿ ಮಾರ್ಗವಿರುತ್ತದೆ. ನಾನು ಶೇರಿಂಗ್ ಮತ್ತು ಕೇರಿಂಗ್‌ನಲ್ಲಿ ನಂಬಿಕೆ ಇಟ್ಟಿದ್ದೇನೆ. ನೀವು ನನ್ನಲ್ಲಿ ವಿಶ್ವಾಸ ಇಟ್ಟರೆ, ನಾನು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇನೆ. ಹಿಂದೆ ನೀವು ನಮ್ಮ ಅಭ್ಯರ್ಥಿಗೆ ಮತ ನೀಡಿಲ್ಲ. ಅದನ್ನು ನಾನು ನೋಡಿದ್ದೇನೆ’ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ, ಬಿಜೆಪಿ ಪರ ವ್ಯಾಪಕ ಅಲೆ: ಬಿಜೆಪಿ ಅಭ್ಯರ್ಥಿ ಶ್ರೀರಾಮುಲು
‘ನಾನು ಉಪ ಮುಖ್ಯಮಂತ್ರಿ. ಬಿಡಿಎ, ನಗರ ಪಾಲಿಕೆ, ಜಲಮಂಡಳಿ, ಜಲಸಂಪನ್ಮೂಲ ಇಲಾಖೆಗೆ ಮತ್ತು ಬೆಂಗಳೂರು ನಗರಕ್ಕೆ ನಾನು ಸಚಿವ. ಎಲ್ಲಾ ಕಡೆ ನಾನು ಇದ್ದೇನೆ. ಎಲ್ಲವೂ ನಿಮ್ಮ ಕೈ ಹಾಗೂ ಜೇಬಿನಲ್ಲಿಯೇ ಇದೆ. ನಿಮ್ಮ ಮನೆಗೆ ಬರುವ ಉಪ ಮುಖ್ಯಮಂತ್ರಿ ಮತ್ತೆ ನಿಮಗೆ ಸಿಗುವುದಿಲ್ಲ. ನೀವು ನನ್ನ ಮನೆಗೆ ಬಂದಿಲ್ಲ. ನಾನೇ ನಿಮ್ಮ ಮನೆಗೆ ಬಂದಿದ್ದೇನೆ. ನೀವು ಹೇಗೆ ನನ್ನನ್ನು ಬಳಸಿಕೊಳ್ಳಬೇಕು ಎಂಬುದು ನಿಮಗೆ ಬಿಟ್ಟಿರುವುದು. ನಿನ್ನೇ ಏನು ಸಂಭವಿಸಿದೆ ಎನ್ನುವುದು ಇತಿಹಾಸ. ನಾಳೆ ಎನ್ನುವುದು ಬಿಡಿ. ಇವತ್ತು ಏನು ಎನ್ನುವುದು ನಿಮ್ಮ ಕೈಯಲ್ಲಿದೆ. ನಮಗೆ ಮತ ನೀಡುವುದಾಗಿ ನೀವು ಭರವಸೆ ನೀಡಿ. ನಮಗೆ ಮತ ನೀಡಿ. ಎರಡು-ಮೂರು ತಿಂಗಳಲ್ಲಿ ಸಿಎ ನಿವೇಶನ ನಿಮ್ಮ ಕೈಗೆ ನೀಡಲಾಗುತ್ತದೆ. ಇಲ್ಲವಾದರೆ ನನನ್ನು ಏನೂ ಕೇಳಬೇಡಿ. ನಾನೆಲ್ಲಿಯೂ ಓಡಿ ಹೋಗುವುದಿಲ್ಲ. ಇದು ನನ್ನ ಕ್ಷೇತ್ರ ಹಾಗೂ ನನ್ನ ಸಹೋದರನ ಕ್ಷೇತ್ರ’ ಎಂದಿದ್ದಾರೆ.