Asianet Suvarna News Asianet Suvarna News

ಗ್ಯಾರಂಟಿಗೆ ಲಂಚ ಕೊಡಬೇಡಿ, ಯಾರಾದರೂ ಕೇಳಿದರೆ ನನಗೇ ದೂರಿ, ಒದ್ದು ಒಳಗೆ ಹಾಕುತ್ತೇವೆ: ಡಿಕೆಶಿ

‘ಕಾಂಗ್ರೆಸ್‌ ನೇತೃ​ತ್ವದ ರಾಜ್ಯ ಸರ್ಕಾರ ಜಾರಿ ಮಾಡು​ತ್ತಿ​ರುವ ಗ್ಯಾರಂಟಿ​ ಯೋಜನೆ ಜಾರಿಗೆ ಯಾರಾ​ದರೂ ಲಂಚ ಕೇಳಿ​ದರೆ ನೇರ​ವಾಗಿ ನನಗೆ ದೂರು ನೀಡಬ​ಹುದು. ಅಂತ​ಹ​ವ​ರ​ನ್ನು ಒದ್ದು ಒಳಗೆ ಹಾಕು​ತ್ತೇವೆ’ ಎಂದು ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಎಚ್ಚ​ರಿಕೆ ನೀಡಿ​ದ್ದಾರೆ.

Dont bribe the Congress Guarantee Schemes Says DCM DK Shivakumar gvd
Author
First Published Jun 4, 2023, 3:00 AM IST

ಹಾರೋ​ಹಳ್ಳಿ/ಕನ​ಕ​ಪುರ (ಜೂ.04): ‘ಕಾಂಗ್ರೆಸ್‌ ನೇತೃ​ತ್ವದ ರಾಜ್ಯ ಸರ್ಕಾರ ಜಾರಿ ಮಾಡು​ತ್ತಿ​ರುವ ಗ್ಯಾರಂಟಿ​ ಯೋಜನೆ ಜಾರಿಗೆ ಯಾರಾ​ದರೂ ಲಂಚ ಕೇಳಿ​ದರೆ ನೇರ​ವಾಗಿ ನನಗೆ ದೂರು ನೀಡಬ​ಹುದು. ಅಂತ​ಹ​ವ​ರ​ನ್ನು ಒದ್ದು ಒಳಗೆ ಹಾಕು​ತ್ತೇವೆ’ ಎಂದು ಉಪ​ಮು​ಖ್ಯ​ಮಂತ್ರಿ ಡಿ.ಕೆ.​ಶಿ​ವ​ಕು​ಮಾರ್‌ ಎಚ್ಚ​ರಿಕೆ ನೀಡಿ​ದ್ದಾರೆ. ಶನಿವಾರ ಇಡೀ ದಿನ ಸ್ವಕ್ಷೇತ್ರದಲ್ಲಿ ಕಾಲ ಕಳೆದ ಡಿಕೆಶಿ, ಕನಕಪುರ ಕ್ಷೇತ್ರವ್ಯಾಪ್ತಿಯ ಹಲವೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮತ​ದಾ​ರರು ಹಾಗೂ ಕಾಂಗ್ರೆಸ್‌ ಕಾರ್ಯ​ಕ​ರ್ತ​ರಿಗೆ ಕೃತಜ್ಞತೆ ಸಲ್ಲಿ​ಸಿದರು. ಈ ವೇಳೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ​ಗ​ಳನ್ನು ಇಡೀ ದೇಶ ಎದುರು ನೋಡು​ತ್ತಿದೆ. ಕಾಂಗ್ರೆಸ್‌ ಪಕ್ಷ ನುಡಿ​ದಂತೆ ನಡೆ​ದು ಐದು ಗ್ಯಾರಂಟಿ​ಗ​ಳನ್ನು ಈಡೇ​ರಿ​ಸಿದೆ. ಈ ಯೋಜ​ನೆ​ಗಳ ಫಲಾ​ನು​ಭ​ವಿ​ಯಾ​ಗಲು ಯಾರೂ ಲಂಚ ಕೊಡ​ಬೇ​ಕಾ​ಗಿಲ್ಲ ಎಂದ​ರು.

ಕನಕಪುರಕ್ಕೆ ಮೆಡಿಕಲ್‌ ಕಾಲೇಜು: ಕನಕಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಲು ತೀರ್ಮಾನಿಸಿದ್ದೇನೆ. ಈ ಹಿಂದೆ ಈ ಕ್ಷೇತ್ರಕ್ಕೆ ಮೆಡಿಕಲ್‌ ಕಾಲೇಜು ಮಂಜೂರಾಗಿತ್ತು. ಆದರೆ, ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ರದ್ದು ಮಾಡಿ ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ಕನ​ಕ​ಪು​ರಕ್ಕೆ ಆದ ಅನ್ಯಾಯ ಸರಿಪಡಿಸುವುದು ನನ್ನ ಮೊದಲ ಕೆಲಸ. ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಸ್ಥಾಪನೆ ಸಂಬಂಧ ಮುಖ್ಯಮಂತ್ರಿ ಬಳಿ ಪ್ರಸ್ತಾಪ ಮಾಡಿ​ದ್ದೇನೆ. ಶೀಘ್ರದಲ್ಲಿಯೇ ಕಾಮಗಾರಿ ಆರಂಭಿಸಿ ಕ್ಷೇತ್ರದ ಜನತೆಗೆ ಕೊಟ್ಟಮಾತನ್ನು ಉಳಿಸಿಕೊಳ್ಳು​ತ್ತೇನೆ ಎಂದರು. ಮುಂದಿನ ದಿನಗಳಲ್ಲಿ ಕನಕಪುರ ಹಾಗೂ ರಾಮನಗರ ಜಿಲ್ಲೆಗೆ ಪ್ರತಿ ವಾರ ಒಂದು ದಿನ ಮೀಸಲಿಡುತ್ತೇನೆ. ಇಲ್ಲಿ ಪ್ರತ್ಯೇಕ ಕಚೇರಿ ಆರಂಭಿಸುತ್ತೇನೆ ಎಂದು ಭರವಸೆ ನೀಡಿದರು.

ಹೃದಯ ರೋಗಿಗಳ ಸಂಖ್ಯೆ ಹೆಚ್ಚಳ ಆತಂಕಕಾರಿ ಬೆಳವಣಿಗೆ: ಡಾ.ಸಿ.ಎನ್‌.ಮಂಜುನಾಥ್‌

ಡಿಕೆಶಿಗೆ ತವರಲ್ಲಿ ಅದ್ದೂರಿ ಸ್ವಾಗತ: ಶನಿವಾರ ಇಡೀ ದಿನ ಸ್ವಕ್ಷೇತ್ರದಲ್ಲಿ ಕಾಲ ಕಳೆದ ಡಿಕೆಶಿಯವರು, ತಾಲೂ​ಕಿನ ಹಾರೋ​ಹಳ್ಳಿ, ಕಬ್ಬಾಳು, ಕಲ್ಲ​ಹಳ್ಳಿ, ಶಿವ​ನ​ಹಳ್ಳಿ, ಸಾತ​ನೂರು, ದೊಡ್ಡಾ​ಲ​ಹಳ್ಳಿ, ಕೋಡಿ​ಹಳ್ಳಿ ಹಾಗೂ ಕನ​ಕ​ಪುರ ನಗರ ಸೇರಿದಂತೆ ಕನಕಪುರ ಕ್ಷೇತ್ರವ್ಯಾಪ್ತಿಯ ಹಲವೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಬೆಳಗ್ಗೆ ಕಬ್ಬಾಳಿನಲ್ಲಿರುವ ಕಬ್ಬಾ​ಳಮ್ಮ ದೇಗು​ಲ​ದಲ್ಲಿ ಪೂಜೆ ಸಲ್ಲಿ​ಸಿದರು. ಈ ವೇಳೆ, ಡಿಕೆ​ಶಿಗೆ ಬೃಹತ್‌ ಕೊಬ್ಬರಿ ಹಾರ ಹಾಕಿ​, ಜನಪದ ಕಲಾತಂಡಗಳ ಮೂಲಕ ಸ್ವಾಗತ ಕೋರ​ಲಾ​ಯಿ​ತು. ಕಲ್ಲ​ಹ​ಳ್ಳಿ​ಯಲ್ಲಿ ಮಹಿ​ಳೆ​ಯರು ಪೂರ್ಣಕುಂಭದೊಂದಿಗೆ ಸ್ವಾಗ​ತಿ​ಸಿ​ದರು. ಗ್ರಾಮಸ್ಥರು ಬೃಹತ್‌ ಸೇಬಿನ ಹಾರ ಹಾಕಿ, ಬರಮಾಡಿಕೊಂಡರು. 

ಬಳಿಕ, ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರ ಚಿಕ್ಕತಿರುಪತಿ ಎಂದೇ ಖ್ಯಾತಿ ಪಡೆದಿರುವ ಕಲ್ಲಹಳ್ಳಿಯ ಶ್ರೀನಿವಾಸ ದೇವಾಲಯದಲ್ಲಿ ಅವರು ಪೂಜೆ ಸಲ್ಲಿಸಿದರು. ನಂತರ, ಕನ​ಕ​ಪು​ರ​ಲ್ಲಿನ ಸ್ವಾತಂತ್ರ್ಯ ಹೋರಾ​ಟ​ಗಾರರಾದ ಎಸ್‌.ಕ​ರಿ​ಯಪ್ಪ ಸಮಾ​ಧಿಗೆ ಪುಷ್ಪ ನಮನ ಸಲ್ಲಿ​ಸಿ​ದರು. ದೇಶ ಹಾಗೂ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಐದು ಉಚಿತ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್‌ನವರ ದು:ಖ, ದುಗುಡ ಹೆಚ್ಚಾಗಿದೆ. ಬಿಜೆಪಿ ಮತ್ತು ಜೆಡಿ​ಎಸ್‌ನವರು ಇಂತಹ ಕಾರ್ಯ​ಕ್ರ​ಮ​ಗ​ಳನ್ನು ನೀಡ​ಲಿಲ್ಲ. ಮೋದಿಯವರು ಹೇಳಿದಂತೆ ಜನರ ಖಾತೆಗೆ 15 ಲಕ್ಷ ಬರ​ಲಿಲ್ಲ, ರೈತರ ಸಾಲ​ಮನ್ನಾ ಆಗ​ಲಿಲ್ಲ. ಜನ​ರಿಗೆ ಅಚ್ಛೇ​ ದಿನ್‌ ಬರಲೇ ಇಲ್ಲ ಎಂದು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ವಿರುದ್ಧ ಕಿಡಿ​ಕಾ​ರಿ​ದ​ರು.

ಹೆಣ್ಣುಮಕ್ಕಳಿಗೆ ‘ಗೃಹಲಕ್ಷ್ಮೇ’ ಯೋಜನೆ ಮೂಲಕ ತಿಂಗಳಿಗೆ 2 ಸಾವಿರ ಕೊಡುತ್ತೇವೆ. ಆದರೆ, ಮನೆಯ ಯಜ​ಮಾನಿ ಯಾರು ಅಂತ ಕುಟುಂಬ​ದ​ವ​ರೇ ತೀರ್ಮಾನ ಮಾಡಿಕೊ​ಳ್ಳ​ಬೇಕು. ಅತ್ತೆ-ಸೊಸೆ ಯಾರೂ ಜಗಳ ಮಾಡಿ​ಕೊ​ಳ್ಳ​ಬಾ​ರದು. ಒಂದು ವೇಳೆ ಮನೆಯೊಡತಿ ಹೆಸರಲ್ಲಿ ಗಂಡಸರ ಬ್ಯಾಂಕ್‌ ಖಾತೆ ಕೊಟ್ಟರೆ ಆ ಅರ್ಜಿ ಊರ್ಜಿತವಾಗುವುದಿಲ್ಲ. ಮುಂದಿನ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಆರಂಭವಾಗ​ಲಿದೆ. ಪದವಿ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜ​ನೆ​ಯಲ್ಲಿ 3 ಸಾವಿರ ಕೊಡು​ತ್ತೇವೆ. ಜೂನ್‌ 11ರಿಂದ ಮಹಿಳೆಯರಿಗೆ ಉಚಿತ ಬಸ್‌ ಪಾಸ್‌ ಸಿಗ​ಲಿ​ದೆ. 

ಸಂಸತ್‌ ಭವನ ಉದ್ಘಾಟನೆ ಮೋದಿ ಪಟ್ಟಾಭಿಷೇಕದಂತೆ ನಡೆದಿದೆ: ಎಚ್‌.ವಿಶ್ವನಾಥ್‌ ಆರೋಪ

ಹೆಣ್ಣು ಮಕ್ಕಳು ಎಲ್ಲಿಗೆ ಬೇಕಾದರೂ ಹೋಗಿ, ಓಡಾಡಿ ಬರ​ಬ​ಹುದು. ಆದರೆ, ಕೆಎಸ್‌ಆರ್‌ಟಿಸಿ ನಡೆ​ಯ​ಬೇ​ಕಲ್ಲ. ಆದ್ದ​ರಿಂದ ಗಂಡ​ಸರು ಮಾತ್ರ ಟಿಕೆಟ್‌ ಪಡೆದು ಪ್ರಯಾಣ ಮಾಡ​ಬೇಕು ಎಂದು ಹೇಳಿ​ದ​ರು. ಈಗ ನಾನು ಮತ್ತು ಸಿದ್ದರಾಮಯ್ಯ, ಸಚಿವ ಸಂಪುಟದ ಸಚಿವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಿದೆ. ಕನಕಪುರದಲ್ಲಿ ಹಾದು ಹೋಗಿ​ರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಂಬಂಧ ನಾನು ಹಾಗೂ ಸುರೇಶ್‌ ಗುತ್ತಿಗೆದಾರರನ್ನು ಭೇಟಿ ಮಾಡಿ ಈ ಕಾಮಗಾರಿ ಮುಕ್ತಾಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ನಾನು ಕ್ಷೇತ್ರದ ಎಲ್ಲ ಜನರ ಜೇಬಿಗೆ ಹಣ ಹಾಕಲು ಸಾಧ್ಯವಿಲ್ಲ. ಆದರೆ, ನಿಮ್ಮ ಆಸ್ತಿ ಮೌಲ್ಯ ಹೆಚ್ಚಾಗುವಂತೆ ಮಾಡುತ್ತೇನೆ.

Follow Us:
Download App:
  • android
  • ios