Asianet Suvarna News Asianet Suvarna News

ಡಿಕೆಶಿಗೆ ಜೈಲು ಶಿಕ್ಷೆಯ ಭಯ: ಕನಕಪುರದಲ್ಲಿ ನಾಮಪತ್ರ ಸಲ್ಲಿಸಿದ ಡಿ.ಕೆ. ಸುರೇಶ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅವರ ನಾಮಪತ್ರ ಅನೂರ್ಜಿತ ಆಗುವ ಭಯದಿಂದ ಕನಕಪುರದಲ್ಲಿ ಸಂಸದ ಡಿ.ಕೆ.ಸುರೇಶ್‌ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

DK Sivakumar fears imprisonment DK Suresh filed nomination in Kanakapur sat
Author
First Published Apr 20, 2023, 2:44 PM IST

ರಾಮನಗರ (ಏ.20): ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಈಗಾಗಲೇ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ, ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಹಿನ್ನೆಲೆಯಲ್ಲಿ ಸಿಬಿಐ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಹೋಗಿರುವ ಹಿನ್ನೆಲೆಯಲ್ಲಿ ಅವರ ಅರ್ಜಿ ಅನೂರ್ಜಿತ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಸಹೋದರ ಸಂಸದ ಡಿ.ಕೆ. ಸುರೇಶ್‌ ಕೂಡ ಇಂದು ಕನಕಪುರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಐಟಿ, ಇಡಿ, ಸಿಬಿಐ ಕೇಸಲ್ಲಿ ಜೈಲಿಗೆ ಕಳಿಸುವ ಕುತಂತ್ರ:
ಕನಕಪುರದಲ್ಲಿ ಪ್ರತಿ ಮನೆಯಲ್ಲಿ ಡಿಕೆ ಶಿವಕುಮಾರ್‌ ಇದ್ದಾರೆ. ನಾವಿಬ್ಬರೂ ನಿರಂತರವಾಗಿ ಮಾಡ್ಕೊಂಡು ಬಂದಿದ್ದೇವೆ. ಆದರೆ, ಬಿಜೆಪಿ ನಾಯಕರು ಇಡಿ, ಐಟಿ ಮತ್ತು ಸಿಬಿಐ ಇಲಾಖೆಯಲ್ಲಿ ಸದಾ ಹಸ್ತಕ್ಷೇಪ ಮಾಡಿಕೊಂಡು ಬಂದು ಕೆಲವು ತಂತ್ರಗಾರಿಕೆ ಮಾಡುತ್ತಿದ್ದಾರೆ. ಕಳೆದ 4 ವರ್ಷಗಳಿಂದ ವಿನಾಕಾರಣ ನಮ್ಮ ಮೇಲೆ ಕೇಸ್ ದಾಖಲಿಸಿ ಕಿರುಕುಳ ಕೊಡುತ್ತಿದ್ದು, ಜೈಲಿಗೆ ಕಳಿಸುತ್ತಿದ್ದಾರೆ.  ಹೀಗಾಗಿ ನಾನು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ.  ನಮಗೆ ಯಾವುದೇ ಆತಂಕ ಇಲ್ಲ, ಮತದಾರರು ಕಾಪಾಡುತ್ತಾರೆ. 
- ಸಂಸದ ಡಿ.ಕೆ. ಸುರೇಶ್ 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಗೆ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆ ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಡಿಕೆ ಶಿವಕುಮಾರ್ 2013ರಿಂದ 2018ರ ವರೆಗೆ ಅಕ್ರಮ ಆಸ್ತಿಗಳಿಕೆ ಸಂಬಂಧ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಇದರಿಂದ ಡಿಕೆ ಶಿವಕುಮಾರ್ ಅವರು ಸಲ್ಲಿಕೆ ಮಾಡಿರುವ ನಾಮಪತ್ರ ಅನೂರ್ಜಿತ ಆಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಈಗ ಡಿ.ಕೆ. ಸುರೇಶ್‌ ಅವರು ಕನಕಪುರದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಣ್ಣನ ಅರ್ಜಿ ಅನೂರ್ಜಿತ ಆದರೂ, ತಮ್ಮ ಗೆದ್ದರೆ ವಿಧಾನಸಭೆಗೆ ಬರಲಿದ್ದಾರೆ.

ಕೊನೇ ಕ್ಷಣದಲ್ಲಿ ಮುಳುಬಾಗಿಲು ಅಭ್ಯರ್ಥಿ ಬದಲು: ಕಾಂಗ್ರೆಸ್‌ 224 ಅಭ್ಯರ್ಥಿಗಳು ಪಟ್ಟಿ ನೋಡಿ

ಈ ಪ್ರಕರಣವನ್ನು ರದ್ದು ಕೋರಿ ಡಿಕೆ ಶಿವಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಈ ಮಧ್ಯೆ ಮಧ್ಯಂತರ ತಡೆಯನ್ನು ರದ್ದು ಮಾಡುವಂತೆ ಸಿಬಿಐ ಅರ್ಜಿ ಸಲ್ಲಿಸಿತ್ತು. ಸಿಬಿಐ ಅರ್ಜಿಯನ್ನು ಹೈಕೋರ್ಟ್ ಕೈಗೆತ್ತಿಕೊಳ್ಳದ ಹಿನ್ನೆಲೆ ತನಿಖೆಗೆ ನೀಡಿರುವ ಮಧ್ಯಂತರ ತಡೆ ಆದೇಶವನ್ನು ರದ್ದು ಮಾಡುವಂತೆ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ.  ಡಿಕೆ ಶಿವಕುಮಾರ್ 2013 ರಿಂದ 2018ರ ವರೆಗೆ ಸುಮಾರು 75 ಕೋಟಿ ರೂಪಾಯಿ ಅಕ್ರಮ ಆಸ್ತಿಗಳಿಕೆ ಮಾಡಿದ್ದಾರೆ ಎಂದು ಎಫ್ಐಆರ್‌ನಲ್ಲಿ ಸಿಬಿಐ ಉಲ್ಲೇಖಿಸಿತ್ತು. 

ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆ:  ಕಳೆದ ಎರಡು ವರ್ಷಗಳಿಂದ ಸಿಬಿಐ ನಡೆಸಿರುವ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ತನಿಖೆಗೆ ತಡೆ ನೀಡಿರುವುದು ಸುಪ್ರೀಂಕೋರ್ಟ್‌ನ ನಿಯಮಗಳಿಗೆ ವಿರುದ್ಧ ಎಂದು ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಾಗಿದ್ದು ಮುಂದಿನ ವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆಗೆ ತಡೆ ಸಿಕ್ಕಿದ್ದರಿಂದ ಚುನಾವಣೆ ಹೊತ್ತಲ್ಲಿ ಡಿ.ಕೆ.ಶಿವಕುಮಾರ್‌ಗೆ ದೊಡ್ಡ ರಿಲೀಫ್ ಸಿಕ್ಕಿತ್ತು. 

ಬೇಸಿಗೆ ರಜೆ ಮುಕ್ತಾಯದ ನಂತರ ಆದೇಶ ಪ್ರಕಟ?:  ಆದರೆ ಈ ಮಧ್ಯೆ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ಡಿ.ಕೆ.ಶಿವಕುಮಾರ್‌ಗೆ ಶಾಕ್ ಕೊಡಲು ಮುಂದಾಗಿದೆ.  2019ರಲ್ಲಿ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ಕ್ರಮವನ್ನೂ ಡಿ.ಕೆ.ಶಿವಕುಮಾರ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಅರ್ಜಿ ಸಂಬಂಧ ವಾದ-ಪ್ರತಿವಾದ ಆಲಿಸಿರುವ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಹೈಕೋರ್ಟ್ನ ಬೇಸಿಗೆ ಕಾಲದ ರಜೆ ಮುಕ್ತಾಯವಾದ ನಂತರ ಈ ಆದೇಶ ಹೊರಬೀಳುವ ಸಾಧ್ಯತೆಯಿದೆ.

ಕಾಂಗ್ರೆಸ್‌ನ ಕೊನೆಯ ಐವರ ಪಟ್ಟಿ ಬಿಡುಗಡೆ : ಮಂಗಳೂರಿಗೆ ಇನಾಯತ್‌ ಅಲಿಗೆ ಟಿಕೆಟ್

ವಾಮಮಾರ್ಗದಿಂದ ಡಿಕೆಶಿ  ಮಣಿಸಲು ಬಿಜೆಪಿ ಪ್ಲಾನ್:  ಕನಕಪುರದಿಂದ ಸ್ಪರ್ಧೆ ಮಾಡೊದಕ್ಕೆ ಹೈಕಮಾಂಡ್ ಸೂಚನೆ ನೀಡಿತ್ತು. ಕೆಲವೊಂದು ಕುತಂತ್ರಗಳು ನಡೀತಿದೆ ಎಂದು ಗೊತ್ತಾಗ್ತಿದೆ. ಮುಂಜಾಗ್ರತಾ ಕ್ರಮವಾಗಿ ನಾಮ ಪಾತ್ರ ಸಲ್ಲಿಕೆ ಮಾಡಿದ್ದೇನೆ. ಡಿಕೆ ಶಿವಕುಮಾರ್ ಅವರ ಮೇಲೆ ಸಾಕಷ್ಟು ಕಣ್ಣುಗಳು ಬಿದ್ದಿವೆ. ವಾಮಮಾರ್ಗದಿಂದ ಡಿಕೆಶಿಯನ್ನು ಮಣಿಸಲು ಬಿಜೆಪಿ ಪ್ಲಾನ್ ಮಾಡಿದೆ. ಡಿಕೆಶಿಯನ್ನು ಬಂಧಿಸುವುದು, ನೋಟಿಸ್ ನಿಡೋದು ನಿವೆಲ್ಲಾ ನೋಡಿದ್ದೀರಿ. ನಾಲ್ಕು ದಿನದ ಹಿಂದೆ ಕೂಡ ಚೆನೈ ಇಂದ ಐಟಿ ಅವರು ನೋಟಿಸ್ ನೀಡಿದ್ದರು. ಖುದ್ದು ನೀವೆ ಹಾಜರಾಗಬೇಕು ಎಂದು ಹೇಳಿದ್ದಾರೆ. ಚುನಾವಣೆ ಆದ್ಮಲೇ ನಾವು ಬರ್ತೇವೆ ಎಂದು ಹೇಳಿದ್ದೇವೆ ಎಂದು ಡಿ.ಕೆ. ಸುರೇಶ್‌ ಹೇಳಿದರು. 

ನಾಮಪತ್ರ ರಿಜೆಕ್ಟ್‌ ಮಾಡಿಸ್ತಾರೆ ಎನ್ನುವ ಅನುಮಾನ:  ನಮ್ಮ ಮೇಲಿನ ಕೇಸ್ ಗಳ ಮೇಲೆ ಎಲ್ಲಾ ಕಡೆ ತಡೆಯಾಜ್ಞೆಗಳು ಇದೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಡಿಕೆಶಿಯನ್ನು ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿ ಅವರು ಮೊದಲೇ ಹೇಳಿದ್ದಾರೆ. ಟಿಕೆಟ್ ಘೋಷಣೆ ಮಾಡುವ ವೇಳೆ ಡಿಕೆಶಿಗೆ ಟಕ್ಕರ್ ಕೊಡ್ತೀನಿ ಅಂತಾ ಹೇಳಿದ್ದಾರೆ. ನಾವು ಕೂಡ ಮುಂಜಾಗ್ರತಾ ಕ್ರಮವಾಗಿ ರೆಡಿಯಾಗಿದ್ದೇವೆ. ಬಿಜೆಪಿ ಅವರು ಏನು ಮಾಡಿದ್ರೂ ಸಹ ಏನು ಆಗೊಲ್ಲ. ಅವರು ನಾಮ ಪತ್ರ ರಿಜೆಕ್ಟ್ ಮಾಡಿಸ್ತಾರೆ ಅನ್ನೊ ಅನುಮಾನ ಇದೆ ಎಂದು ಸಂಸದ ಡಿ.ಕೆ. ಸುರೇಶ್‌ ಮಾಹಿತಿ ನೀಡಿದರು. 

Follow Us:
Download App:
  • android
  • ios