ಒಂದೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಅವರು ಮುಖ್ಯಮಂತ್ರಿ ಆಗಬೇಕು ಅನ್ನುವುದು ನಮ್ಮ ಆಸೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು.
ರಾಮನಗರ (ನ.03): ಒಂದೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು. ಅವರು ಮುಖ್ಯಮಂತ್ರಿ ಆಗಬೇಕು ಅನ್ನುವುದು ನಮ್ಮ ಆಸೆ ಎಂದು ಶಾಸಕ ಇಕ್ಬಾಲ್ ಹುಸೇನ್ ಪ್ರತಿಕ್ರಿಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಸಂಘಟನೆ ಮಾಡಿದ್ದಾರೆ. ಶಕ್ತಿ ಮೀರಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.
ಹಾಗಾಗಿ ಡಿ.ಕೆ.ಶಿವಕುಮಾರ್ ಗೆ ಅವಕಾಶ ಸಿಗಲೇಬೇಕು. ರಾಜ್ಯದ ಜನತೆ ಕೂಡಾ ಅದನ್ನೇ ಬಯಸಿದ್ದಾರೆ ಎಂದರು. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡುವವರು ಕೆಲಸಕ್ಕೆ ಬಾರದವರು ಎಂಬ ಸಿದ್ದರಾಮಯ್ಯರವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಇಲ್ಲಿ ಕೆಲಸಕ್ಕೆ ಬಾರದವರು ಯಾರೂ ಇಲ್ಲ. ಎಲ್ಲರೂ ಕೆಲಸಕ್ಕೆ ಬರುವವರೆ. ಅವರನ್ನು ಶಾಸಕ ಅಂತ ಕರೆಯುತ್ತಾರೆ. ಅವರ ಬಗ್ಗೆ ಕೀಳಾಗಿ ಮಾತನಾಡಬಾರದು ಎಂದು ಹೇಳಿದರು.
ಮೌಢ್ಯದಲ್ಲಿ ನನಗೆ ನಂಬಿಕೆ ಇಲ್ಲ, ಜನರ ಆಶೀರ್ವಾದದಲ್ಲಿ ನಂಬಿಕೆ: ಸಿದ್ದರಾಮಯ್ಯ
ಡಿಕೆಶಿ ಮಾಜಿ ಆಗಲ್ಲ, ಸಿಎಂ ಆಗ್ತಾರೆ: ಡಿ.ಕೆ.ಶಿವಕುಮಾರ ಮಾಜಿ ಮಂತ್ರಿ ಆಗುವುದಿಲ್ಲ. ಮುಖ್ಯಮಂತ್ರಿಯೇ ಆಗುತ್ತಾರೆ ಎಂದು ಚನ್ನಗಿರಿ ಶಾಸಕ ಶಿವಗಂಗಾ ವಿ.ಬಸವರಾಜ ಬಿಜೆಪಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮಾಜಿ ಆಗುವುದಕ್ಕೆ ಹೇಗೆ ಸಾಧ್ಯ? ರಮೇಶ ಜಾರಕಿಹೊಳಿ ಹೇಳಿದಂತೆ ಡಿಕೆಶಿ ಮಾಜಿ ಮಂತ್ರಿ ಆಗುವುದಿಲ್ಲ. ಬದಲಾಗಿ ನಾನು ಹೇಳಿದಂತೆ ಮುಖ್ಯಮಂತ್ರಿಯೇ ಆಗುತ್ತಾರೆ ಎಂದರು.
ಹಿಂದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಅಷ್ಟೇ ಅಲ್ಲ, ಆಗಿನ ಸಮ್ಮಿಶ್ರ ಸರ್ಕಾರವನ್ನೂ ಕೆಡವಿದ್ದರು. ಈಗ ಅಂತಹದ್ದೆಲ್ಲಾ ಆಗಲ್ಲ. ನಡೆಯುವುದೂ ಇಲ್ಲ. ನಾವೆಲ್ಲಾ 136 ಜನ ಕಾಂಗ್ರೆಸ್ ಶಾಸಕರೂ ಒಟ್ಟಾಗಿಯೇ ಇದ್ದೇವೆ ಎಂದು ತಿಳಿಸಿದರು. ಸಚಿವ ಸತೀಶ ಜಾರಕಿಹೊಳಿ ದುಬೈಗೆ ನನ್ನನ್ನು ಕರೆದರೆ, ನಾನೂ ಹೋಗುತ್ತೇನೆ. ನಮ್ಮ ನಾಯಕರು ಎಲ್ಲಿಗೆ ಕರೆಯುತ್ತಾರೋ, ಅಲ್ಲಿಗೆ ಹೋಗಿ ಬರುತ್ತೇನೆ. ಪ್ರವಾಸ ಹೋಗುವುದರಲ್ಲಿ ತಪ್ಪೇನಿದೆ? ನಮ್ಮ ಪಕ್ಷದ ಮಂತ್ರಿಗಳ ಕರೆದರೆ ತಪ್ಪೇನಿದೆ? ನಮ್ಮಲ್ಲಿ ಯಾವುದೇ ಬಣ, ಗುಂಪುಗಳೂ ಇಲ್ಲ. ನಮ್ಮಲ್ಲಿ ಹಿರಿಯರು, ಕಿರಿಯರು ಅಂತೆಲ್ಲಾ ಬೇಧಭಾವ ಇಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್ ಸರ್ಕಾರ: ಸಿದ್ದರಾಮಯ್ಯ ಖಡಕ್ ಹೇಳಿಕೆ
ಬೇಳೂರು ಹೇಳಿಕೆಗೆ ಬೆಂಬಲ: ಸಂಪುಟ ಪುನಾರಚನೆಯಾಗಬೇಕು, 20 ತಿಂಗಳು ಎಲ್ಲರಿಗೂ ಸಚಿವ ಸ್ಥಾನ 20 ತಿಂಗಳಂತೆ ಹಂಚಿಕೆಯಾಗಬೇಕೆಂಬ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಈ ಮಾತು ನೂರಕ್ಕೆ ನೂರರಷ್ಟು ಸರಿ ಇದೆ. ಅಧಿಕಾರವು ನಿಂತ ನೀರಾಗಬಾರದು. ಎಲ್ಲರಿಗೂ ಅವಕಾಶ, ಅಧಿಕಾರ ಸಿಗಬೇಕೆಂಬುದು ತಮ್ಮ ಉದ್ದೇಶವೂ ಆಗಿದೆ. ಈ ನಿಟ್ಟಿನಲ್ಲಿ ಸಚಿವ ಸ್ಥಾನದ ಹಂಚಿಕೆಯಾಗಬೇಕೆಂಬ ಬೇಳೂರು ಗೋಪಾಲಕೃಷ್ಣರ ಹೇಳಿಕೆಗೆ ನನ್ನ ಸಹಮತವೂ ಇದೆ ಎಂದು ಸ್ಪಷ್ಟಪಡಿಸಿದರು.
