ಸರ್ಕಾರ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣವನ್ನೂ ಮುಚ್ಚಿ ಹಾಕಲು ಯತ್ನಿಸುತ್ತಿದೆ. 

ಬೆಂಗಳೂರು(ಜು.22):  ಸಿದ್ದರಾಮಯ್ಯ ಹಾಗೂ ನನ್ನನ್ನು ನೆನಪಿಸಿಕೊಳ್ಳದಿದ್ದರೆ ಬಿಜೆಪಿಯವರಿಗೆ ನಿದ್ದೆ ಬರುವುದಿಲ್ಲ. ಒಡೆದು ಹೋಳಾಗಲು ಕಾಂಗ್ರೆಸ್‌ ಪಕ್ಷ ಕುಂಬಳಕಾಯಿಯೂ ಅಲ್ಲ, ಮಡಿಕೆಯೂ ಅಲ್ಲ. ಬಿಜೆಪಿಯವರು ಏನೇ ಮಾಡಿದರೂ ನಮ್ಮಲ್ಲಿ ಒಡಕು ಮೂಡಿಸಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದರು. ಇದೇ ವೇಳೆ, ಬಿಜೆಪಿಯಲ್ಲೇ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗುತ್ತಿದೆ. ಬಿಜೆಪಿ ಸರ್ಕಾರವೇ ಮೈತ್ರಿ ಸರ್ಕಾರ ಎಂಬಂತಾಗಿದೆ. ಮುಖ್ಯಮಂತ್ರಿಗಳನ್ನು ಹೊರತುಪಡಿಸಿ ಅನೇಕ ಸಚಿವರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಹೋದವರು. ಆದ್ದರಿಂದ ಅವರಲ್ಲೇ ಆತಂಕ ಮನೆ ಮಾಡಿದೆ. ಹೀಗಾಗಿಯೇ ಅವರ ರಾಷ್ಟ್ರೀಯ ನಾಯಕರು ಪದೇ, ಪದೇ ರಾಜ್ಯಕ್ಕೆ ಬಂದು ಹೋಗುತ್ತಿದ್ದಾರೆ ಎಂದು ಹೇಳಿದರು.

ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಹುಟ್ಟುಹಬ್ಬ ಕಾರ್ಯಕ್ರಮದ ನಂತರ ಕಾಂಗ್ರೆಸ್‌ ಹೋಳಾಗಲಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಮೊದಲು ಬಿಜೆಪಿಯ ಸ್ಥಿತಿ ಏನಾಗಲಿದೆ ಎಂಬುದರ ಬಗ್ಗೆ ಅವರಿಗಿರುವ ಆತಂಕ ಬಗೆಹರಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

National Herald Case: ಸೋನಿಯಾರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ, ಡಿಕೆಶಿ

ಬಿಜೆಪಿಯವರಿಗೆ ಮೊದಲಿನಿಂದಲೂ ಸಿದ್ದರಾಮಯ್ಯ ಹಾಗೂ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲ. ನಾವು ಅಂದರೆ ಅವರಿಗೆ ತುಂಬಾ ಪ್ರೀತಿ ಹೀಗಾಗಿ ಹಗಲು-ರಾತ್ರಿ ನೆನೆಯುತ್ತಾರೆ. ಅವರು ಏನೇ ಮಾಡಿದರೂ ನಮ್ಮಲ್ಲಿ ಒಡಕು ಮೂಡಿಸಲು ಸಾಧ್ಯವಿಲ್ಲ ಎಂದರು.

ಪಿಎಸ್‌ಐ ನ್ಯಾಯಾಂಗ ತನಿಖೆ ನಡೆಸಿ:

ಪಿಎಸ್‌ಐ ಹಗರಣದ ಬಗ್ಗೆ ಮಾತನಾಡಿದ ಅವರು, ತನಿಖಾಧಿಕಾರಿಗಳು ಕೇವಲ 50 ಜನರನ್ನು ಮಾತ್ರ ಬಂಧಿಸಿದ್ದಾರೆ. ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ಕೊಡಿಸಬೇಕು ಎಂಬ ನಮ್ಮ ಬೇಡಿಕೆಗೆ ಮನ್ನಣೆ ನೀಡಿಲ್ಲ. ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿದ್ದರೂ ನೀಡುತ್ತಿಲ್ಲ. ಈ ಅಕ್ರಮದಲ್ಲಿ ಮುಖ್ಯಮಂತ್ರಿಗಳು, ಸಚಿವರು ಭಾಗಿಯಾಗಿಲ್ಲ ಎಂದಾದರೆ ತನಿಖೆ ಮಾಡಲು ಭಯ ಏಕೆ? ಎಂದು ಪ್ರಶ್ನಿಸಿದರು.

ನನ್ನ ಪ್ರಕಾರ ತನಿಖೆಯೇ ಪ್ರಾಮಾಣಿಕವಾಗಿ ಆಗುತ್ತಿಲ್ಲ. ಅಧಿಕಾರಿಯೇ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಸಿದ್ಧವಾಗಿರುವಾಗ ಏಕೆ ದಾಖಲಿಸುತ್ತಿಲ್ಲ? ನಮಗೆ ಬಂದಿರುವ ಮಾಹಿತಿ ಪ್ರಕಾರ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಕೆಲವರ ಹೆಸರು ಹಾಗೂ ಹಗರಣ ಹಣದ ಪ್ರಮಾಣದ ಬಗ್ಗೆ ಪ್ರಸ್ತಾಪಿಸಿದ್ದು, ಯತ್ನಾಳ್‌ ಅವರು ಕೂಡ ಕೆಲವು ವಿಚಾರ ಹೇಳಿದ್ದಾರೆ. ಆದರೂ ಈ ವಿಚಾರವಾಗಿ ಯಾವುದೇ ತನಿಖೆ ನಡೆಯುತ್ತಿಲ್ಲ. ಇದು ಬಿಜೆಪಿ ಸರ್ಕಾರ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವುದನ್ನು ಸಾಬೀತುಪಡಿಸುತ್ತಿದೆ ಎಂದು ಕಿಡಿ ಕಾರಿದರು.

ಸಿದ್ದು ಅಹಿಂದ ಅಸ್ತ್ರ, ಡಿಕೆಶಿ ಒಕ್ಕಲಿಗ ಕಾರ್ಡ್, ನಾಯಕತ್ವದಲ್ಲಿ ಹೈಕಮಾಂಡ್ ಫುಲ್ ಕನ್‌ಫ್ಯೂಸ್..!

ಸಂತೋಷ್‌ ಕೇಸ್‌ ಮುಚ್ಚಿ ಹಾಕಲು ಯತ್ನ:

ಇನ್ನು ಸರ್ಕಾರವು ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣವನ್ನೂ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಶೇ.40 ರಷ್ಟುಕಮಿಷನ್‌ ಪ್ರಕರಣದಲ್ಲಿ ಆರೋಪಿಯಾಗಿರುವ ಕೆ.ಎಸ್‌. ಈಶ್ವರಪ್ಪ ಮಾತ್ರವಲ್ಲ, ಬೇರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬೇರೆ ಸಚಿವರನ್ನೂ ರಕ್ಷಿಸಲು ಯತ್ನಿಸುತ್ತಿದ್ದಾರೆ.

ಲಂಚ, ಮಂಚದ ಪ್ರಕರಣದಿಂದ ಹಿಡಿದು ಆಸ್ಪತ್ರೆ ಬೆಡ್‌, ಪರಿಹಾರ ಪ್ರಕರಣದವರೆಗೂ ಎಲ್ಲದರಲ್ಲೂ ಸಚಿವರನ್ನು ರಕ್ಷಿಸುವ ಪ್ರಯತ್ನ ಆಗುತ್ತಿದೆ. ಕಮಿಷನ್‌ ಬಗ್ಗೆ ನಾವು ಮಾತ್ರವಲ್ಲ ಸ್ವತಃ ಸ್ವಾಮೀಜಿಗಳು ಆರೋಪ ಮಾಡಿದ್ದಾರೆ. ಇದಕ್ಕಿಂತ ಬೇರೆ ಸಾಕ್ಷಿ ಬೇಕಾ? ಎಂದು ಪ್ರಶ್ನಿಸಿದರು.