ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿರುವಾಗಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತುರ್ತು ಮುಂಬೈ ಪ್ರವಾಸ ಕೈಗೊಂಡಿದ್ದಾರೆ. ಶಾಸಕ ಎನ್.ಎ. ಹ್ಯಾರಿಸ್ ಜೊತೆಗಿನ ಈ ಪ್ರಯಾಣವನ್ನು ಖಾಸಗಿ ಎಂದು ಹೇಳಲಾಗಿದೆ.

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಅಧಿಕಾರ ಹಂಚಿಕೆ ಚರ್ಚೆಗಳು ತೀವ್ರಗೊಂಡಿರುವ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ತುರ್ತು ಮುಂಬೈ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಹೊಸ ಊಹಾಪೋಹಗಳಿಗೆ ಕಾರಣವಾಗಿದೆ. ಡಿಕೆ ಶಿವಕುಮಾರ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ಮುಂಬೈಗೆ ತೆರಳಿದ್ದು, ವಿಶೇಷ ವಿಮಾನ (ಸ್ಪೆಷಲ್ ಫ್ಲೈಟ್) ಮೂಲಕ ಬೆಂಗಳೂರು ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಸಂಜೆ 6 ಗಂಟೆಗೆ ಪ್ರಯಾಣ ಬೆಳೆಸಿದರು. ಅವರು ಮಧ್ಯರಾತ್ರಿ ವೇಳೆಗೆ ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದ ಎನ್.ಎ. ಹ್ಯಾರಿಸ್

ಮುಂಬೈ ಪ್ರವಾಸಕ್ಕೆ ಹೊರಡುವ ಮೊದಲು, ಬೆಂಗಳೂರು ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎನ್.ಎ. ಹ್ಯಾರಿಸ್ ಅವರು ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ನಂತರ ಇಬ್ಬರೂ ಒಟ್ಟಿಗೆ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಹೀಗಾಗಿ ಹ್ಯಾರಿಸ್ ಅವರ ಸಹಪ್ರಯಾಣ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿವೆ. ಇಂತಹ ಸಂದರ್ಭದಲ್ಲಿ ಡಿಸಿಎಂ ಅವರ ತುರ್ತು ಮುಂಬೈ ಭೇಟಿ ಹಲವು ರಾಜಕೀಯ ಕಥೆಗಳಿಗೆ ಕಾರಣವಾದರೂ, ಡಿಕೆಶಿ ಅವರು ಈ ಭೇಟಿಗೆ ರಾಜಕೀಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯಾವ ಸಚಿವರನ್ನೂ ನನ್ನ ಜೊತೆ ಕರೆದುಕೊಂಡು ಹೋಗಲ್ಲ: ಡಿಕೆಶಿ

ದೆಹಲಿಗೆ ಸಚಿವರನ್ನು ಕರೆದುಕೊಂಡು ಹೋಗುವ ವಿಚಾರಕ್ಕೆ ಪತ್ರಕರ್ತರು ಪ್ರಶ್ನಿಸಿದ ವೇಳೆ, ಡಿಸಿಎಂ ಡಿಕೆಶಿ ಸ್ಪಷ್ಟವಾಗಿ, No… ಯಾವುದೇ ಸಚಿವರು ನನ್ನ ಜೊತೆ ಹೋಗುವುದಿಲ್ಲ. ನಾನು ಯಾರನ್ನೂ ಕರೆದುಕೊಂಡು ಹೋಗಲ್ಲ. ಬೇರೆ ಯಾರು ಬೇಕಿದ್ರು ಹೋಗ್ಲಿ. ನಾನು ಯಾರನ್ನೂ ಕರೆದುಕೊಂಡು ಹೋಗಲ್ಲ. ಹೈಕಮಾಂಡ್ ನಿಂದ ಪೋನ್ ಬಂದಿತ್ತಾ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಲಿಲ್ಲ. ಡಿಕೆಶಿ ಪರ ನಿರ್ಮಾಲಾನಂದ ಸ್ವಾಮೀಜಿ ಬ್ಯಾಟಿಂಗ್ ವಿಚಾರವಾಗಿ ಕೇಳಿದ್ದಕ್ಕೆ I don't want to comment on that, Sorry sorry ಎಂದು ನಿರಾಕರಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಈ ಹೇಳಿಕೆಯಿಂದ ದೆಹಲಿ ಭೇಟಿಗೆ ಸಂಬಂಧಿಸಿದ ಊಹಾಪೋಹಗಳಿಗೆ ತಾತ್ಕಾಲಿಕವಾಗಿ ತೆರೆ ಬಿದ್ದರೂ, ಮುಂಬೈ ಪ್ರಯಾಣದ ಸಮಯ ಹಾಗೂ ರಾಜಕೀಯ ಚಟುವಟಿಕೆ ಎರಡೂ ಅನುಮಾನಗಳಿಗೆ ಕಾರಣವಾಗಿವೆ.