ಬಿಜೆಪಿಯು ವಿ.ಸೋಮಣ್ಣ ಅವರನ್ನು ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಹಾಗೂ ಆರ್.ಅಶೋಕ್ ಅವರನ್ನು ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಎರಡೆರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಸಿರುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆಯಾಗಿದ್ದು, ಅದು ಅಷ್ಟೇನೂ ಗಂಭೀರ ಸ್ಪರ್ಧೆಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬೆಂಗಳೂರು (ಏ.13): ಬಿಜೆಪಿಯು ವಿ.ಸೋಮಣ್ಣ ಅವರನ್ನು ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಹಾಗೂ ಆರ್.ಅಶೋಕ್ ಅವರನ್ನು ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಎರಡೆರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಸಿರುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಚರ್ಚೆಯಾಗಿದ್ದು, ಅದು ಅಷ್ಟೇನೂ ಗಂಭೀರ ಸ್ಪರ್ಧೆಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಶೋಕ್ ಹಾಗೂ ಸೋಮಣ್ಣ ಅವರು ಕ್ರಮವಾಗಿ ಕನಕಪುರ ಹಾಗೂ ವರುಣದಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿಲ್ಲ. ಬದಲಾಗಿ, ತಮ್ಮ ಆಯ್ಕೆಯ ಕ್ಷೇತ್ರವಾಗಿ ಸೋಮಣ್ಣ ಚಾಮರಾಜನಗರ ಹಾಗೂ ಅಶೋಕ್ ಪದ್ಮನಾಭನಗರದಲ್ಲೂ ಸ್ಪರ್ಧಿಸುತ್ತಿದ್ದಾರೆ. ಹೀಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿರುವುದರಿಂದ ಇದು ಅಂತಹ ಗಂಭೀರ ಪೈಪೋಟಿಯಾಗುವುದಿಲ್ಲ ಎಂದೇ ಭಾವಿಸಲಾಗಿದೆ.
ಆದಾಗ್ಯೂ ಈ ಸ್ಪರ್ಧೆಯನ್ನು ಲಘುವಾಗಿ ಪರಿಗಣಿಸದಿರಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದು, ಉಭಯ ನಾಯಕರನ್ನು ತಮ್ಮ ಆಯ್ಕೆಯ ಕ್ಷೇತ್ರಗಳಲ್ಲೇ ಕಟ್ಟಿಹಾಕುವ ಸಾಧ್ಯತೆ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ದಿಸೆಯಲ್ಲಿ ಪದ್ಮನಾಭನಗರದ ಕಾಂಗ್ರೆಸ್ ನಿಯೋಗವೊಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಅಶೋಕ್ ವಿರುದ್ಧ ಡಿ.ಕೆ.ಸುರೇಶ್ ಅವರನ್ನು ಕಣಕ್ಕೆ ಇಳಿಸುವಂತೆ ಮನವಿ ಮಾಡಿದೆ. ಈ ವೇಳೆ ಶಿವಕುಮಾರ್ ಅವರೂ ಸಹ ಪರಿಶೀಲಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಬಿಜೆಪಿಯಲ್ಲಿ ಕಳ್ಳ ಸಾಗಾಣಿಕೆದಾರರಿಗೆ ಟಿಕೆಟ್: ಎಚ್.ಡಿ.ಕುಮಾರಸ್ವಾಮಿ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಪದ್ಮನಾಭನಗರದಲ್ಲಿ ದುರ್ಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ನಿಂದ ನಾಯ್ಡು ಸಮುದಾಯದವರನ್ನು ಹಾಕಿದ್ದರು. ನಾವು ಒಕ್ಕಲಿಗ ಸಮುದಾಯದವರನ್ನು ಕಣಕ್ಕಿಳಿಸಿದ್ದೆವು. ಆದರೆ ನಮ್ಮ ತಂತ್ರ ಫಲ ನೀಡಲಿಲ್ಲ. ನಾಯ್ಡು ಸಮುದಾಯದ ಅಭ್ಯರ್ಥಿ ಎರಡನೇ ಸ್ಥಾನ ಪಡೆದು ನಮ್ಮ ಅಭ್ಯರ್ಥಿ ಮೂರನೇ ಸ್ಥಾನ ಪಡೆದಿದ್ದರು. ಬೆಂಗಳೂರಿನಲ್ಲಿ ಅತಿ ಹೆಚ್ಚು ನಾಯ್ಡು ಸಮುದಾಯದ ಜನರು ಇರುವುದು ಪದ್ಮನಾಭನಗರದಲ್ಲಿ ಹೀಗಾಗಿ ಅವಕಾಶ ನೀಡಲಾಗಿದೆ ಎಂದು ಹೇಳಿದರು.
ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸುವ ಕುರಿತು, ‘ಸುರೇಶ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಡ ಇದೆ. ಆದರೆ ಪಕ್ಷ ಈಗಾಗಲೇ ರಘುನಾಥ್ ನಾಯ್ಡು ಅವರಿಗೆ ಟಿಕೆಟ್ ನೀಡಿದ್ದು, ಸದ್ಯಕ್ಕೆ ಅವರೇ ಸ್ಪರ್ಧಿಸುತ್ತಾರೆ. ಸುರೇಶ್ ಅವರ ಸ್ಪರ್ಧೆ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಹೇಳುವ ಮೂಲಕ ಆಯ್ಕೆಯನ್ನು ಮುಕ್ತವಾಗಿಟ್ಟಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳಿಗೆ ಅಳಿವು ಉಳಿವಿನ ಪ್ರಶ್ನೆ?
ಚಾಮರಾಜನಗರ ಬಗ್ಗೆ ಸಿದ್ದು ವಲಯದಲ್ಲಿ ಚರ್ಚೆ: ಇನ್ನು ಸಿದ್ದರಾಮಯ್ಯ ಆಪ್ತರ ತಂಡವು ಚಾಮರಾಜನಗರದಲ್ಲಿ ವಿ.ಸೋಮಣ್ಣ ಅವರನ್ನು ಕಟ್ಟಿಹಾಕುವ ಬಗ್ಗೆ ಗಂಭೀರ ಚರ್ಚೆ ನಡೆಸಿದೆ. ಸೋಮಣ್ಣ ಚಾಮರಾಜನಗರ ಕ್ಷೇತ್ರ ಹಾಗೂ ವರುಣ ಎರಡೂ ಕಡೆ ಸ್ಪರ್ಧಿಸಲಿದ್ದಾರೆ. ಚಾಮರಾಜನಗರದಲ್ಲಿ ಈಗಾಗಲೇ ಕಾಂಗ್ರೆಸ್‌ನ ಸಿ.ಪುಟ್ಟರಂಗಶೆಟ್ಟಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಅವರಿಗೆ ಸೋಮಣ್ಣ ಪ್ರಬಲ ಪೈಪೋಟಿಯಾಗುವ ಸಾಧ್ಯತೆಯಿದೆ. ಆದರೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿರುವುದರಿಂದ ವರುಣದಲ್ಲಿ ಅವರ ಸ್ಪರ್ಧೆ ಪರಿಣಾಮ ಬೀರುವುದಿಲ್ಲ. ಆದಾಗ್ಯೂ ಸೋಮಣ್ಣ ಅವರನ್ನು ಎರಡೂ ಕಡೆ ಕಟ್ಟಿಹಾಕಲು ಚಾಮರಾಜನಗರದಲ್ಲಿ ಬಿಜೆಪಿಯಲ್ಲಿನ ಅಸಮಾಧಾನಿತರನ್ನು ಸೆಳೆಯುವ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
