ಬಿಜೆಪಿಯಲ್ಲಿ ಕಳ್ಳ ಸಾಗಾಣಿಕೆದಾರರಿಗೆ ಟಿಕೆಟ್: ಎಚ್.ಡಿ.‌ಕುಮಾರಸ್ವಾಮಿ

ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬಲಗೊಳಿಸಲು ಸರ್ವ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ. 

Former CM HD Kumaraswamy Campaigned heavily in Sirsi and Kumta gvd

ಭರತ್‌ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಏ.13): ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬಲಗೊಳಿಸಲು ಸರ್ವ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ. ನಿನ್ನೆ ಹಳಿಯಾಳ ವಿಧಾನಸಭಾ ಕ್ಷೇತ್ರದ ಜೊಯಿಡಾ, ದಾಂಡೇಲಿಯಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ರೆ, ಇಂದು ಶಿರಸಿ ಹಾಗೂ ಕುಮಟಾ ಕ್ಷೇತ್ರದಲ್ಲಿ‌ ಪ್ರಚಾರ ಕಾರ್ಯ ನಡೆಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲು ಜಿಲ್ಲೆಗಳನ್ನು ತಯಾರುಗೊಳಿಸುತ್ತಿದ್ದಾರೆ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ. ಹೌದು, ಮಾಜಿ ಮುಖ್ಯಮಂತ್ರಿ ಎಚ್.ಡಿ.‌ಕುಮಾರಸ್ವಾಮಿ ನಿನ್ನೆ ಹಾಗೂ ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದ್ದಾರೆ. 

ನಿನ್ನೆ ಹಳಿಯಾಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಘೋಟ್ನೇಕರ್ ಪರವಾಗಿ ಜೊಯಿಡಾ ಹಾಗೂ ದಾಂಡೇಲಿಯಲ್ಲಿ ಎಚ್.ಡಿ.‌ಕುಮಾರಸ್ವಾಮಿ ಪ್ರಚಾರ ನಡೆಸಿದ್ರೆ, ಇಂದು ಬೆಳಗ್ಗೆ ಶಿರಸಿ ಶ್ರೀ ಮಾರಿಕಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಿರಸಿ ಕ್ಷೇತ್ರದ ಅಭ್ಯರ್ಥಿ ಉಪೇಂದ್ರ ಪೈ ಪರವಾಗಿ ಪ್ರಚಾರಕ್ಕೆ ಇಳಿದಿದ್ದರು. ಸಾವಿರಾರು ಕಾರ್ಯಕರ್ತರ ಜತೆ ಶಿರಸಿ ನಗರದಾದ್ಯಂತ ಮೆರವಣಿಗೆ ನಡೆಸಿದ್ದು, ಈ ವೇಳೆ ಸುಮಾರು 300 ಪೈನಾಪಲ್ ಹೊಂದಿರುವ ಮಾಲೆಯನ್ನು ಕ್ರೇನ್ ಮೂಲಕ ಕುಮಾರಸ್ವಾಮಿ ಹಾಗೂ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಅವರಿಗೆ ಅರ್ಪಿಸಲಾಯಿತು. 

Chamarajanagar: ಕಾಂಗ್ರೆಸ್‌ಗೆ ಸ್ಟಾರ್‌ಗಳ ಅನಿವಾರ್ಯತೆ ಇಲ್ಲ: ಎಸ್‌.ನಾರಾಯಣ್‌

ಇನ್ನು ಹೆಲಿಕಾಪ್ಟರ್‌ನಲ್ಲಿ ಇಳಿಯುತ್ತಿದ್ದಂತೇ ಮಾಧ್ಯಮದ ಜತೆ ಮಾತನಾಡಿದ ಮಾಜಿ ಸಿಎಂ ಎಚ್‌ಡಿಕೆ, ಬಿಜೆಪಿಯಲ್ಲಿ ಕಳ್ಳ ಸಾಗಾಣಿಕೆದಾರರಿಗೆ ಟಿಕೆಟ್ ಕೊಟ್ಟಿದ್ದಾರೆ. ವೇದಿಕೆಯ ಮೇಲೆ ಅವರು ಏನು ಹೇಳ್ತಾರೆ ಅದಕ್ಕೂ ಕಾರ್ಯರೂಪಕ್ಕೆ ತರುವುದಕ್ಕೂ ವ್ಯತ್ಯಾಸ ಇರೋದು ಮೊದಲಿಂದ್ಲೂ ನೋಡ್ತಿದ್ದೇವೆ. ಅದಕ್ಕೆ ಆಶ್ಚರ್ಯ ಪಡುವಂತದ್ದು ಏನಿಲ್ಲ,‌ ಅವರ ಜತೆಯಲ್ಲಿ ಇರೋರೇ ಈಗ ಕಾಳಸಂತೆಕೋರರು, ಬೆಟ್ಟಿಂಗ್ ದಂಧೆ ನಡೆಸೋರನ್ನೇ ಇಟ್ಟುಕೊಂಡಿದ್ದಾರೆ. ಕೆಲವರು ಜನತಾ ಪರಿವಾರದಲ್ಲಿದ್ದು ಬಿಜೆಪಿಗೆ ಹೋದಂತವರು ಇದ್ದಾರೆ.‌ ಅವರಿಗೆ ಈಗ ಸತ್ಯಾಂಶ ತಿಳಿದುಬಂದಿದೆ. ಅಂತವರು ಜನತಾ ಪರಿವಾರದಿಂದ್ಲೇ ಬೆಳೆದವರು, ಅವರು ಬಂದ್ರೆ ಆಹ್ವಾನಿಸುತ್ತೇವೆ. 

2004ರಲ್ಲಿ ಬಹಳಷ್ಟು ಜನರು ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹೋಗಿದ್ರು. ಅಂತವರಿಗೆ ಇಂದು ಟಿಕೆಟ್ ವಿಚಾರದಲ್ಲಿ ಮೋಸವಾಗಿದೆ, ಅವರು ಮತ್ತೆ ಜನತಾ ಪರಿವಾರಕ್ಕೆ ಬರಲು ತಯಾರಾಗಿದ್ದಾರೆ.‌ಅಂತವರು ಈಗಾಗಲೇ ಚರ್ಚೆ ಮಾಡುತ್ತಿದ್ದು, ಇನ್ನೆರಡು ದಿನಗಳಲ್ಲಿ ಯಾರ್ಯಾರು ಬರುತ್ತಾರೆಂದು ಗೊತ್ತಾಗುತ್ತದೆ. ಮಂಡ್ಯದಲ್ಲಿ 4 ಅಭ್ಯರ್ಥಿಗಳು ಜನತಾ ದಳದ ಪ್ರಾಡಕ್ಟ್ ಆದವರನ್ನೇ ತೆಗೆದುಕೊಳ್ಳಲಾಗಿದೆ. ಜನರು ಮುಂದೆ ಏನು ನಿರ್ಧಾರ ಮಾಡ್ತಾರೆಂದು ನೋಡೋಣ ಎಂದು ಕುಮಾರಸ್ವಾಮಿ ಹೇಳಿದರು. ಮತ ಪ್ರಚಾರದ ಅಂಗವಾಗಿ ಶಿರಸಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾವೇಶವನ್ನು ಉದ್ಘಾಟಿಸಿ, ಪಂಚರತ್ನ ಯೋಜನೆಗಳ ಮೂಲಕ ಹಲವು ಆಶ್ವಾಸನೆಗಳನ್ನು ನೀಡಿದ ಅವರು, ಜೆಡಿಎಸ್ ಸರಕಾರ ರಚನೆಗೆ ಉಪೇಂದ್ರ ಪೈ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. 

ಈ ವೇಳೆ ಶಿರಸಿ ಅಭ್ಯರ್ಥಿ ಉಪೇಂದ್ರ ಪೈ ಕೂಡಾ ಕೊರೊನಾ‌ ಹಾಗೂ ಇತರ ಸಮಯಗಳಲ್ಲಿ ತಾನು ಜನರಿಗೆ ನೀಡಿದ ಸ್ಪಂದನೆ ಹಾಗೂ ಜೆಡಿಎಸ್ ಸರಕಾರ ರಚನೆಯಾದಲ್ಲಿ ಜನರಿಗೆ ದೊರೆಯಲಿರುವ ಸೌಲಭ್ಯಗಳ ಬಗ್ಗೆ ಆಶ್ವಾಸನೆ ನೀಡಿದರು. ಬಳಿಕ ಕುಮಟಾದತ್ತ ತೆರಳಿದ ಎಚ್.ಡಿ.ಕುಮಾರಸ್ವಾಮಿ,‌ ಮೆರವಣಿಗೆ ಮೂಲಕ ಕುಮಟಾ ಅಭ್ಯರ್ಥಿ ಸೂರಜ್ ನಾಯ್ಕ್ ಸೋನಿ ಪರವಾಗಿ ಪ್ರಚಾರ ನಡೆಸಿದರು. ಈ ವೇಳೆ ಭಟ್ಕಳ ಕ್ಷೇತ್ರಕ್ಕೆ ಹೈಕೋರ್ಟ್ ನ್ಯಾಯವಾದಿ ನಾಗೇಂದ್ರ ನಾಯ್ಕ್ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಹಾಕುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ. 

ಬಿಜೆಪಿಯಿಂದ ಟಿಕೆಟ್ ದೊರೆತ ಸಂತೋಷದ ಹೊತ್ತಲ್ಲೇ ಭಟ್ಕಳ ಶಾಸಕ ಸುನೀಲ್ ನಾಯ್ಕ್‌ಗೆ ಪಿತೃ ವಿಯೋಗ!

ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಎರಡನೇ ಬಾರಿ ಕುಮಾರಸ್ವಾಮಿ‌ ಪ್ರಚಾರ ನಡೆಸಿರುವುದು ಕ್ಷೇತ್ರಗಳಲ್ಲಿ ಹೊಸ ಸಂಚಲನ ಮೂಡಿಸಿದ್ದು, ಇವುಗಳು ಜೆಡಿಎಸ್ ಪರವಾಗಿ ಮತಗಳಾಗಿ ಪರಿವರ್ತಿತವಾಗುತ್ತಿವೆ. ಎಚ್‌ಡಿಕೆ ಭೇಟಿ ಹಾಗೂ ಪ್ರಚಾರದಿಂದ ಜಿಲ್ಲೆಯ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ತಿರುಗಿ ನೋಡುವಂತಾದದ್ದಂತೂ ಸತ್ಯ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios