ಜನ ನಮ್ಮ ಗ್ಯಾರಂಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ (ಏ.07): ರಾಜ್ಯದ ಎರಡೂ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ‌ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ‌ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಪೆಟ್ರೋಲ್ ಸೇರಿದಂತೆ ಎಲ್.ಪಿ.ಜಿ ದರ ಹೆಚ್ಚಳ ಮಾಡಿದ್ದು ಇದರಿಂದಾಗಿ ಜನತೆ ಭ್ರಮನಿರಸನಗೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಹೀಗಾಗಿ‌ ಜನ ನಮ್ಮ ಗ್ಯಾರಂಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದರು. ಆಟೋ ಚಾಲಕರು ಗ್ಯಾಸ್ ಬಿಟ್ಟು ಪೆಟ್ರೋಲ್ ಬಳಸಿ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಇರಾನಿನಿಂದ ಎರಡು ಎಲ್.ಪಿ.ಜಿ ಹಡಗುಗಳು ಭಾರತಕ್ಕೆ ಬಂದಿರುವುದನ್ನು ಗುಜರಾತಿಗೆ ಏಕೆ ಕಳಸಿದರು.

ರಾಜ್ಯದ ಮಂಗಳೂರು, ಕೇರಳಕ್ಕೆ ಕಳಿಸುವ ಮೂಲಕ ರಾಜ್ಯದ ಹಿತಕ್ಕೆ ಸಹಾಯ‌ ಮಾಡಬಹುದಿತ್ತಲ್ಲ. ಕೇಂದ್ರವು ಉತ್ತರ ಭಾರತ ಮಾತ್ರ ನೋಡುತ್ತಿದ್ದಾರೆ. ಅವರಿಗೆ ದಕ್ಷಿಣ ಭಾರತ ನೋಡುತ್ತಿಲ್ಲ ಎಂದು ಹರಿಹಾಯ್ದರು. 2028 ರವರೆಗೂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯಿಸಿ ಸಿಎಂ ಮತ್ತು ನಾನು ಬಿಟ್ಟು ಬೇರೆಯವರ ಹೇಳಿಕೆಗೆ ನಾನು ಉತ್ತರ ನೀಡುವುದಿಲ್ಲ.‌

ಕಾಲವೇ ಉತ್ತರ ಕೊಡಲಿದೆ

ನಮ್ಮಿಬ್ಬರ ಮಾತು ಬಿಟ್ಟು ಬೇರೆಯವರ ಮಾತು ನಗಣ್ಯ. ನನ್ನ ತಾಳ್ಮೆಗೆ ಕಾಲವೇ ಉತ್ತರ ಕೊಡಲಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು. ಕೇರಳ‌ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಯುಡಿಎಫ್ ಮೈತ್ರಿಕೂಟವು ಬಹುಮತದೊಂದಿಗೆ ಗೆಲ್ಲಲಿದೆ. ಕಳೆದ 10 ವರ್ಷಗಳಲ್ಲಿ ಅಲ್ಲಿ ಯಾವುದೇ ಅಭಿವೃದ್ಧಿಗಳಾಗಿಲ್ಲ. ಹೀಗಾಗಿ ನಮ್ಮ ಪರವಾದ ಅಲೆಯಿದೆ ಎಂದರು.