ಟಿಕೆಟ್ ವಿಚಾರ ಬಿಜೆಪಿಯಲ್ಲಿ ಭಿನ್ನಮತ; ಅನರ್ಹರು ತಟ್ಟಿದ್ರು ಕಾಂಗ್ರೆಸ್ ಕದ?
ಅತಂತ್ರ ಪರಿಸ್ಥಿತಿಯಲ್ಲಿರುವ ಅನರ್ಹ ಶಾಸಕರು; ಅನರ್ಹರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ ಭಿನ್ನಮತ; ಇತ್ತ ಬಾಗಿಲು ಬಂದ್ ಆಗಿದೆ ಎನ್ನುತ್ತಿದೆ ಕಾಂಗ್ರೆಸ್, ತೂಗುಯ್ಯಾಲೆಯಲ್ಲಿ ಅನರ್ಹರ ರಾಜಕೀಯ ಭವಿಷ್ಯ?
ಬೆಂಗಳೂರು (ಅ.26): ಒಂದು ಕಡೆ ಅಂತ್ಯ ಕಾಣದ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ, ಇನ್ನೊಂದು ಕಡೆ ಸಮೀಪಿಸುತ್ತಿರುವ ಉಪ-ಚುನಾವಣೆ. ಇತ್ತ ಬಿಜೆಪಿಯಲ್ಲಿ ಅನರ್ಹರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಭಿನ್ನಮತ, ಅತ್ತ ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿ ಸೋತವರ ಕಥೆ. ಹೀಗೆ ಅನರ್ಹ ಶಾಸಕರ ಸ್ಥಿತಿ ಅತಂತ್ರವಾಗಿದೆ.
ಅನರ್ಹರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಹುಬ್ಬಳ್ಳಿಯಲ್ಲಿಂದು ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರು ತಕರಾರು ತೆಗೆದಿದ್ದಾರೆ.
ಇನ್ನೊಂದು ಕಡೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಇನ್ನೊಂದು ಬಾಂಬ್ ಸಿಡಿಸಿದ್ದಾರೆ. ಕೆಲವು ಅನರ್ಹ ಶಾಸಕರು ತನ್ನೊಂದಿಗೆ ಮಾತನಾಡಿದ್ದು, ಪಕ್ಷಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ, ಎಂದು ಹೇಳಿದ್ದಾರೆ.
ಅನರ್ಹ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಮೈತ್ರಿ ಸರ್ಕಾರ ಪತನಗೊಳಿಸಿದವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳದಿರಲು ಕಾಂಗ್ರೆಸ್ ತೀರ್ಮಾನಿಸಿದೆ, ಎಂದು ಕೂಡಾ ಅವರು ಹೇಳಿದ್ದಾರೆ.
ಕಳೆದ ಜುಲೈ ತಿಂಗಳಿನಲ್ಲಿ ಆಡಳಿತರೂಢ ಮೈತ್ರಿ ಪಕ್ಷಗಳ 17 ಶಾಸಕರು ರಾಜೀನಾಮೆ ನೀಡಿದ್ದು ಸರ್ಕಾರ ಪತನಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ನಡೆದ ರಾಜಕೀಯ ಹೈಡ್ರಾಮಾದಲ್ಲಿ, ಅಂದಿನ ಸ್ಪೀಕರ್ ರಮೇಶ್ ಕುಮಾರ್ ಆ ಶಾಸಕರನ್ನು ಹಾಲಿ ವಿಧಾನಸಭಾ ಅವಧಿಗೆ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಸ್ಪೀಕರ್ ಕ್ರಮದ ವಿರುದ್ಧ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ವಿಚಾರಣೆ ನಡೆಯುತ್ತಿದೆ.