ಹುಬ್ಬಳ್ಳಿ, [ಅ.26]: ಅನರ್ಹರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಇಂದು [ಶನಿವಾರ] ನಡೆದ ಉತ್ತರ ಕರ್ನಾಟಕ ಭಾಗದ 7 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕುರಿತು ಮುಖ್ಯಮಂತ್ರಿ  ಬಿ.ಎಸ್.‌ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಭೆ ನಡೆಯಿತು.

 ಅನರ್ಹರಿಗೆ ಟಿಕೆಟ್ ನೀಡುವ ಬಗ್ಗೆ  ಸಬೆಯಲ್ಲಿ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದರು. 7 ಕ್ಷೇತ್ರಗಳ ಪೈಕಿ ಕೆಲ ಕ್ಷೇತ್ರಗಳ ಬಿಜೆಪಿ ಮುಖಂಡರು ತಕರಾರು ತೆಗೆದಿದ್ದು, ಯಡಿಯೂರಪ್ಪ ಜೊತೆ ಸಹಮತ ವ್ಯಕ್ತಪಡಿಸದೇ ಅಸಮಾಧಾನ ವ್ಯಕ್ತಪಡಿಸಿದರು. 

ಡಿಕೆಶಿಗೆ ಅದ್ಧೂರಿ ಸ್ವಾಗತ, ತಡಬಡಾಯಿಸಿದ ರಶ್ಮಿಕಾ; ಅ.26ರ ಟಾಪ್ 10 ಸುದ್ದಿ!

ಬಳಿಕ ನಡೆದ ಕೋರ್‌ ಕಮಿಟಿ ಸಭೆಯಲ್ಲೂ ಸಹ ಈ ಬಗ್ಗೆ ಒಮ್ಮತ ಮೂಡಲಿಲ್ಲ.  ಇದರಿಂದ ಕೆಂಡಾಮಂಡಲರಾದ ಸಿಎಂ ಯಡಿಯೂರಪ್ಪ  ಮಾಧ್ಯಮಗಳಿಗೆ ಪ್ರತಿಕ್ರಿಯಿಸದೇ ಹೋಟೆಲ್ ನಿಂದ ಹೊರನಡೆದರು. ಮತ್ತೊಂದೆಡೆ ಸಚಿವ ಜಗದೀಶ್ ಶೆಟ್ಟರ್ ಕೂಡ ಈ ಬಗ್ಗೆ ಮಾತನಾಡಲು ನಿರಾಕರಿಸಿದರು.

ಇನ್ನು ಅರವಿಂದ ಲಿಂಬಾವಳಿ ಅವರು ಮಾತನಾಡಿ ಉಪ ಚುನಾವಣೆ ಟಿಕೆಟ್ ಹಂಚಿಕೆ ಬಗ್ಗೆ ಚರ್ಚೆ ಆಗಿಯೇ ಇಲ್ಲ ಎಂದು ಹೇಳುವ ಮೂಲಕ ಯಾವುದೇ ಭಿನ್ನಮತವಿಲ್ಲ ಎನ್ನುವ ಬಗ್ಗೆ ಸಮಜಾಯಿಸಿ ನೀಡಿ ಹೋದರು.

ಒಟ್ಟಿನಲ್ಲಿ ಅನರ್ಹರಿಗೆ ಟಿಕೆಟ್ ನೀಡುವ ಬಗ್ಗೆ ಸಹಮತದ ತೀರ್ಮಾನ ತೆಗೆದುಕೊಳ್ಳಲು ಬಿಜೆಪಿ ಪ್ರಮುಖರ ಸಭೆ ಸಂಪೂರ್ಣ ವಿಫಲವಾಗಿದೆ. ಇದೇ ಡಿಸೆಂಬರ್ 5ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಡಿ. 9ರಂದು ಫಲಿತಾಂಶ ಹೊರಬೀಳಲಿದೆ.

ಸಭೆಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,  ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಡಿಸಿಎಂಗಳಾರದ ಗೋವಿಂದ್  ಕಾರಜೋಳ, ಲಕ್ಷ್ಮಣ್ ಸವದಿ ಮತ್ತು ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಉತ್ತರ ಕರ್ನಾಟಕದ ಬಿಜೆಪಿ ಪಕ್ಷದ ನಾಯಕರುಗಳು ಉಪಸ್ಥಿತರಿದ್ದರು.