ಬೆಂಗಳೂರಿನಂತೆ ಮಂಗಳೂರನ್ನು ಜಾಗತಿಕ ಹೂಡಿಕೆಗೆ ಆಕರ್ಷಿಸುವ ದಿಶೆಯಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಮಂಗಳೂರು (ಅ.11): ಬೆಂಗಳೂರಿನಂತೆ ಮಂಗಳೂರನ್ನು ಜಾಗತಿಕ ಹೂಡಿಕೆಗೆ ಆಕರ್ಷಿಸುವ ದಿಶೆಯಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಮತ್ತು ಮಹಾನಗರ ಪಾಲಿಕೆಯ ಅಭಿವೃದ್ಧಿ ಕುರಿತಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಮಹಾನಗರ ಪಾಲಿಕೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರಾವಳಿ ಅಭಿವೃದ್ಧಿಯ ಗೇಮ್‌ ಚೇಂಜರ್‌: ಮಂಗಳೂರಿನ ಸೋಮೇಶ್ವರದಿಂದ ಸಸಿಹಿತ್ಲು ವರೆಗಿನ ಸಮುದ್ರ ತೀರದ ರಸ್ತೆಯನ್ನು 24 ಮೀಟರ್‌ಗೆ ಮೀಸಲಿಟ್ಟು ಅದನ್ನು ಕೋಸ್ಟಲ್‌ ರಸ್ತೆಯಾಗಿ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಜತೆಗೆ ಸಚಿವ ಸಂಪುಟದಿಂದ ಅನುಮೋದನೆಗೊಂಡ ಮಂಗಳೂರು ಐಟಿ ಪಾರ್ಕ್ ಕರಾವಳಿಯ ಪ್ರವಾಸೋದ್ಯಮದಲ್ಲಿ ಗೇಮ್‌ ಚೇಂಜರ್‌ ಆಗಲಿದೆ ಎಂದರು.

ಲೇಔಟ್‌ ತ್ವರಿತ ಕಾಮಗಾರಿಗೆ ಸೂಚನೆ: ಮುಡಾ ವ್ಯಾಪ್ತಿಯಲ್ಲಿ ಕೊಣಾಜೆ, ಕುಂಜತ್ತಬೈಲ್‌ ಹಾಗೂ ಚೇಳ್ಯಾರು ಮೂರು ಕಡೆ ವಸತಿ ಬಡಾವಣೆಗೆ ಲೇಔಟ್‌ಗಳನ್ನು ಮಾಡಲಾಗುತ್ತಿದೆ. ಈ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಿ ಸಾರ್ವಜನಿಕರಿಗೆ ಖರೀದಿಗೆ ಅವಕಾಶ ನೀಡಬೇಕು. ಕೊಣಾಜೆಯಲ್ಲಿ ನವೆಂಬರ್‌ನೊಳಗೆ ಕಾಮಗಾರಿ ಪೂರ್ತಿಗೊಳಿಸಲು ಸೂಚಿಸಲಾಗಿದೆ. ಶೇ. 20ರಷ್ಟುಮಾತ್ರವೇ ಬುಕ್ಕಿಂಗ್‌ ಆಗಿದ್ದು, ಕಾಮಗಾರಿ ಶೀಘ್ರ ಮುಗಿದರೆ ಬುಕ್ಕಿಂಗ್‌ಗೆ ವೇಗ ಸಿಗಲಿದೆ. ಇಲ್ಲಿನ ಆದಾಯವನ್ನು ಇನ್ನೊಂದು ಬಡಾವಣೆಯ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ ಆಗಲಿದೆ. ನವೆಂಬರ್‌ ತಿಂಗಳಲ್ಲಿ ಮತ್ತೆ ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕುಂಜತ್ತಬೈಲ್‌ ಲೇಔಟ್‌ನಲ್ಲಿ ಸಮಸ್ಯೆಯಾಗಿದ್ದು, ಅಲ್ಲಿ ಮುಂದೆ ಏನು ಮಾಡಬೇಕು ಎಂದು ತೀರ್ಮಾನಿಸಬೇಕಾಗಿದೆ. ಭೂ ಖರೀದಿಯಾಗಿದೆ. ಅದಕ್ಕೆ ಮಾಡಿರುವ ವೆಚ್ಚ ನಷ್ಟ ಆಗದಂತೆ ಸ್ಪಷ್ಟವಾದ ತೀರ್ಮಾನಕ್ಕೆ ಬರಬೇಕಾಗಿದೆ. ಅವೈಜ್ಞಾನಿಕವಾಗಿ ಹೆಚ್ಚಿನ ಬೆಲೆಗೆ ಖರೀದಿ ಮಾಡಿರುವುದು ಸಮಸ್ಯೆ ಆಗಿದೆ. ಅದು ನಷ್ಟದ ಪ್ರಾಜೆಕ್ಟ್ ಆಗಿ ಕಂಡು ಬರುತ್ತಿದೆ. ಅದರಿಂದ ಯಾವ ರೀತಿಯಲ್ಲಿ ಹೊರ ಬರಬೇಕಾಗಿದೆ ಎಂಬುದನ್ನು ನೋಡಬೇಕಾಗಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ಪ್ರಗತಿಯ ಕುರಿಂತೆ ಇಂದು ಮೇಲ್ನೋಟಕ್ಕೆ ಕೆಲವಷ್ಟೇ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆಯಲು ಸಾಧ್ಯವಾಗಿದೆ. ನವೆಂಬರ್‌ನಲ್ಲಿ ಮತ್ತೆ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ನಿಗದಿತ ಅವಧಿಯಲ್ಲಿ ಅನುಮೋದನೆಗೆ ಸೂಚನೆ

ಮುಡಾದಲ್ಲಿ ಸಾರ್ವಜನಿಕರ ವಿವಿಧ ರೀತಿಯ ಕೆಲಸ ಕಾರ್ಯಗಳಿಗೆ ತೊಂದರೆ ಆಗದಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರಿಂದ ಬರುವ ಅರ್ಜಿಗೆ ನಿಗದಿತ ಅವಧಿಯೊಳಗೆ ಪರಿಶೀಲನೆ ನಡೆಸಿ ಅನುಮೋದನೆ ನೀಡಿ, ಭೂಪರಿವರ್ತನೆ ಅಥವಾ ಎನ್‌ಒಸಿ ನೀಡುವಲ್ಲಿ ಕ್ರಮ ಆಗಬೇಕು. ಸಾರ್ವಜನಿಕರು ಪದೇ ಪದೇ ಕಚೇರಿಗೆ ಅಲೆದಾಡುವಂತಾಗಬಾರದು. ನಗರ ಯೋಜನೆಯಡಿ ಎರಡೆರಡು ಬಾರಿ ತಪಾಸಣೆ ಮಾಡುವ ಕ್ರಮದ ಬದಲು ಏಕಕಾಲಕ್ಕೆ ಮುಗಿಸಿ ನಿಗದಿತ ಅವಧಿಯೊಳಗೆ ಅನುಮೋದನೆ ನೀಡುವಲ್ಲಿ ಕ್ರಮ ವಹಿಸಲು ಮುಡಾ ಆಯುಕ್ತರಿಗೆ ಸ್ಪಷ್ಟಸೂಚನೆ ನೀಡಲಾಗಿದೆ. ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುವಂತೆಯೂ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಮಂಗಳೂರು ಮತ್ತು ಮೈಸೂರು ನಗರವನ್ನು ಪ್ರವಾಸೋದ್ಯಮ ತಾಣವಾಗಿಸಿ ಹೂಡಿಕೆದಾರರನ್ನು ಆಕರ್ಷಿಸುವ ತಾಣವಾಗಿಸುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನೇತೃತ್ವದಲ್ಲಿ ನಿರ್ಧಾರವೂ ಆಗಿದೆ. ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಮಂಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ 135 ಕೋಟಿ ರು.ಗಳ ಐಟಿ ಪಾರ್ಕ್‌ಗೆ ಅನುಮೋದನೆ ನೀಡಲಾಗಿದೆ. ರಾಜ್ಯ ಸರ್ಕಾರ ಹಾಗೂ ಐಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಮಹತ್ವದ ನಿರ್ಧಾರ ಇದಾಗಿದೆ.
-ದಿನೇಶ್‌ ಗುಂಡೂರಾವ್‌, ಜಿಲ್ಲಾ ಉಸ್ತುವಾರಿ ಸಚಿವರು, ದ.ಕ.