ಕರ್ತವ್ಯದ ವೇಳೆ ಮೃತಪಟ್ಟ 100 ಮಂದಿ ಸರ್ಕಾರಿ ನೌಕರರ ಅವಲಂಬಿತರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲಿನ ನೇಮಕಾತಿ ಆದೇಶ ಪತ್ರವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ವಿತರಿಸಿದರು.

ಬೆಂಗಳೂರು (ಸೆ.25): ಕರ್ತವ್ಯದ ವೇಳೆ ಮೃತಪಟ್ಟ 100 ಮಂದಿ ಸರ್ಕಾರಿ ನೌಕರರ ಅವಲಂಬಿತರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲಿನ ನೇಮಕಾತಿ ಆದೇಶ ಪತ್ರವನ್ನು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ವಿತರಿಸಿದರು. ಆರೋಗ್ಯ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ವಿತರಿಸಿ ನಂತರ ಮಾತನಾಡಿದ ದಿನೇಶ್‌ ಗುಂಡೂರಾವ್‌, ನೌಕರರು ಮೃತಪಟ್ಟ ನಂತರ ಅವರ ಕುಟುಂಬದವರು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ನೋಡಿಕೊಳ್ಳಲು ಅನುಕಂಪದ ಆಧಾರದಲ್ಲಿ ಕೆಲಸ ನೀಡಲಾಗುತ್ತಿದೆ. ಈವರೆಗೆ 116 ಮಂದಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗಿದ್ದು, ಇನ್ನೂ 60 ಪ್ರಕರಣಗಳಲ್ಲಿ ಉದ್ಯೋಗ ನೀಡುವುದು ಬಾಕಿಯಿದೆ.

ಶೀಘ್ರದಲ್ಲಿ ಆ ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಿದರು. ಆರೋಗ್ಯ ಇಲಾಖೆಯಲ್ಲಿ ಅನುಕಂಪದ ಆಧಾರದಲ್ಲಿ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಆರೋಗ್ಯಾಧಿಕಾರಿ ಮತ್ತು ಡಿ ದರ್ಜೆ ಹುದ್ದೆಗಳನ್ನು ನೀಡಲಾಗುತ್ತಿದೆ. ಅಭ್ಯರ್ಥಿಗಳ ವಿದ್ಯಾರ್ಹತೆಯನ್ನಾಧರಿಸಿ ಉದ್ಯೋಗ ನೀಡಲಾಗುವುದು ಎಂದರು. ಆರೋಗ್ಯ ಇಲಾಖೆ ಆಯುಕ್ತ ಕೆ.ಬಿ. ಶಿವಕುಮಾರ್‌, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ. ಅವಿನಾಶ್‌ ಮೆನನ್‌ ರಾಜೇಂದ್ರನ್‌, ನಿರ್ದೇಶಕ ವಸಂತ್‌ಕುಮಾರ್‌ ಇತರರಿದ್ದರು.

ವೈಜ್ಞಾನಿಕವಾಗಿಯೇ ರಾಜ್ಯದಲ್ಲಿ ಗಣತಿ

ಇದು ಜಾತಿ ಗಣತಿ ಅಲ್ಲ, ಜಾತಿ ಗಣತಿಯನ್ನು ಕೇಂದ್ರ ಸರ್ಕಾರವೇ ನಡೆಸುತ್ತದೆ. ರಾಜ್ಯ ಸರ್ಕಾರ ನಡೆಸುತ್ತಿರುವುದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಗಣತಿ. ಇದನ್ನು ವೈಜ್ಞಾನಿಕವಾಗಿಯೇ ನಡೆಸಲಾಗುತ್ತಿದೆ. ಹೀಗಾಗಿ ಜನತೆ ಅನಗತ್ಯ ಗೊಂದಲ ಪಡಬೇಕಾಗಿಲ್ಲ ಎಂದು ಹೇಳಿದ್ದಾರೆ. ಸಮಾಜದಲ್ಲಿ ಸರ್ಕಾರ ಯಾರಿಗೆ ಅನುಕೂಲ ಮಾಡಬೇಕು? ನಿಜವಾದ ಹಿಂದುಳಿದವರು ಯಾರು? ಯಾರಿಗೆ ಹೆಚ್ಚಿನ ಸಹಾಯ ಮಾಡಬೇಕು? ಸವಲತ್ತು ಕೊಡಬೇಕಾದರೆ ಅದಕ್ಕೆ ಸಂಬಂಧಿಸಿದ ನಿರ್ದಿಷ್ಟ ಅಂಕಿಅಂಶಗಳನ್ನು ಸುಪ್ರೀಂ ಕೋರ್ಟ್‌ ಕೇಳುತ್ತದೆ.

ಹಾಗಾಗಿ ಈ ಸಮೀಕ್ಷೆ ನಡೆಸಲಾಗುತ್ತದೆ. ಆದರೆ ಇದಕ್ಕೆ ಕೆಲವರು ರಾಜಕೀಯ ಬೆರೆಸುತ್ತಿದ್ದಾರೆ. ವೀರಶೈವ, ಲಿಂಗಾಯತಕ್ಕೂ ಸರ್ಕಾರಕ್ಕೂ ಸಂಬಂಧ ಇಲ್ಲ. ಅದು ಅವರ ವೈಯಕ್ತಿಕ ವಿಚಾರ. ಹಿಂದಿನಿಂದಲೂ ಒಮ್ಮೆ ಅದು ಪ್ರತ್ಯೇಕ ಧರ್ಮ, ಒಮ್ಮೆ ಅದು ಪ್ರತ್ಯೇಕ ಧರ್ಮ ಅಲ್ಲ, ವೀರಶೈವ ಲಿಂಗಾಯತ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ ಎಂದರು. ರಾಜ್ಯ ಸರ್ಕಾರ ನಡೆಸುತ್ತಿರುವ ಈ ಗಣತಿಯಲ್ಲಿ ಜಾತಿ ಹೆಸರಲ್ಲಿ ಏನೇನು ನಮೂದಿಸಬೇಕು ಎಂದು ಜಾತಿ ಮುಖಂಡರು ಹೇಳುತ್ತಿರುವುದು ಸರಿಯೇ ಇದೆ.

ಈ ಮಧ್ಯೆ ಗಣತಿ ಬಗ್ಗೆ ಗೊಂದಲ ಮೂಡಿಸಿ ಲಾಭ ಪಡೆಯಬೇಕು ಎಂದು ಹವಣಿಸುವ ತಂಡವೇ ಇದೆ ಎಂದರು. ರಾಜ್ಯದಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಹಿಂದು ಕ್ರೈಸ್ತರು ಇದ್ದಾರೆ ಎಂದು ತಿಳಿಯಲಾಗಿದೆ. ಅದು ಹಾಗೆ ಇರಬಾರದು, ಮತಾಂತರಗೊಂಡರೆ, ಅವರು ಆ ಧರ್ಮಕ್ಕೆ ಸೇರ್ಪಡೆಯಾದಂತೆ. ಹಿಂದು ಜಾತಿ, ಧರ್ಮ ಎಂದು ಪ್ರತ್ಯೇಕ ಹುಡುಕುವುದರಲ್ಲಿ ಅರ್ಥ ಇಲ್ಲ. ಈ ವಿಚಾರವನ್ನು ನಾನು ಕೂಡ ಹಿಂದುಳಿದ ವರ್ಗಗಳ ಆಯೋಗದ ಗಮನಕ್ಕೆ ತಂದಿದ್ದೇನೆ ಎಂದರು.