ಬೆಂಗಳೂರು, (ಜುಲೈ.04): ಕೆಪಿಸಿಸಿ ಮಾಜಿ ಅಧ್ಯಕ್ಷ, ಶಾಸಕ ದಿನೇಶ್ ಗುಂಡೂರಾವ್ ಅವರ ಭದ್ರತಾ ಸಿಬ್ಬಂದಿಯೊಬ್ಬರಿಗೆ (ಗನ್‌ಮ್ಯಾನ್) ಕೊರೋನಾ ಸೋಂಕು ಪಾಸಿಟಿವ್ ದೃಢಪಟ್ಟಿದೆ.

 ದಿನೇಶ್ ಗುಂಡೂರಾವ್ ಅವರ ಭದ್ರತಾ ಸಿಬ್ಬಂದಿಗೆ ಕೋವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ಸೋಂಕು ತಗುಲಿರುವುದು ದೃಢವಾಗಿದೆ. ಇದೀಗ ದಿನೇಶ್ ಗುಂಡೂರಾವ್ ಅವರಿಗೂ ಕೊರೋನಾ ಭೀತಿ ಎದುರಾಗಿದೆ.

ಮಾಜಿ ಸಚಿವ ಎಚ್‌ ಡಿ ರೇವಣ್ಣಗೆ ಶುರು ಕೊರೊನಾ ಭೀತಿ

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ದಿನೇಶ್ ಗುಂಡೂರಾವ್,  ನಮ್ಮ ಭದ್ರತಾ ಪಡೆಯ ಪೊಲೀಸ್ ಸಿಬ್ಬಂದಿಯೊಬ್ಬರು ನಿನ್ನೆ ಪರೀಕ್ಷೆಗೆ ಒಳಪಟ್ಟಾಗ ಕೊರೋನಾ ಸೋಂಕು ದೃಢಪಟ್ಟಿದೆ.

ನಾನು ಸೇರಿದಂತೆ ನಮ್ಮ ಕುಟುಂಬದ ಎಲ್ಲಾ ಸದಸ್ಯರು ಪರೀಕ್ಷೆಗೆ ಒಳಪಟ್ಟಿದ್ದೇವೆ. ಯಾರಿಗೂ ಸೋಂಕಿನ ಲಕ್ಷಣಗಳಿಲ್ಲ. ಜೊತೆಗೆ ನಿಗದಿತ ಅವಧಿವರೆಗೂ ಹೋಂ ಕ್ವಾರಂಟೈನ್‍ನಲ್ಲಿರಲಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದಷ್ಟೆ ಅಂದರೆ ಜುಲೈ 2ರಂದು ನಡೆದಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ದಿನೇಶ್ ಗುಂಡುರಾವ್ ಭಾಗವಹಿಸಿದ್ದರು.

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಗೆ ಸೇರಿದಂತೆ ಹಲವಾರು ಮುಖಂಡರ ಸಮ್ಮುಖದಲ್ಲಿ ಡಿ.ಕೆ.ಶಿವಕುಮಾರ ಅವರಿಗೆ ಕಾಂಗ್ರೆಸ್ ಬಾವುಟ ಕೊಟ್ಟು ಅಧಿಕಾರ ಹಸ್ತಾಂತರಿಸಿದ್ದರು. ಆ ಕಾರ್ಯಕ್ರಮದಲ್ಲಿ ನೂರಾರು ನಾಯಕರು ಭಾಗವಹಿಸಿದ್ದರು.