ದೇವೇಗೌಡರ ಕುಟುಂಬ ತೆರಿಗೆ ಹಣ ಲೂಟಿ ಮಾಡಿಲ್ಲ: ಎಚ್.ಡಿ.ಕುಮಾರಸ್ವಾಮಿ
ಇತ್ತೀಚೆಗೆ ರಾಜಕಾರಣಕ್ಕೆ ಬಂದಂತಹ ಜನರು ಯಾವ ರೀತಿ ಇದ್ದಾರೆ, ಯಾವ ರೀತಿ ಬೆಳೆದಿದ್ದಾರೆ, ಎಷ್ಟುಸಾವಿರ ಕೋಟಿ ಮಾಡಿದ್ದಾರೆ. ಆ ರೀತಿಯ ಬದುಕು ಕಾಣದ ನಾವು ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ್ದೇವೆ.
ಹೊಳೆನರಸೀಪುರ (ಮಾ.17): ಇತ್ತೀಚೆಗೆ ರಾಜಕಾರಣಕ್ಕೆ ಬಂದಂತಹ ಜನರು ಯಾವ ರೀತಿ ಇದ್ದಾರೆ, ಯಾವ ರೀತಿ ಬೆಳೆದಿದ್ದಾರೆ, ಎಷ್ಟುಸಾವಿರ ಕೋಟಿ ಮಾಡಿದ್ದಾರೆ. ಆ ರೀತಿಯ ಬದುಕು ಕಾಣದ ನಾವು ಪ್ರಾಮಾಣಿಕವಾಗಿ ರಾಜಕಾರಣ ಮಾಡಿದ್ದೇವೆ. ರಾಜ್ಯದ ಜನರ ಭಯಕ್ಕೆ ಬದುಕಿರುವ ಕುಟುಂಬ ನಮ್ಮದು. ಹಣಕ್ಕೆ ಮಾರು ಹೋಗಿ, ರಾಜ್ಯದ ತೆರಿಗೆ ಸಂಪತ್ತನ್ನ ಲೂಟಿ ಮಾಡಿಲ್ಲ. ಈ ವಿಷಯದಲ್ಲಿ ಪ್ರಧಾನ ಮಂತ್ರಿ ಮುಂದೆಯಾಗಲಿ ಅಥವಾ ಕೇಂದ್ರದ ಗೃಹ ಸಚಿವರ ಮುಂದೆಯಾಗಲಿ ತೊಡೆ ತಟ್ಟಿಚರ್ಚೆಗೆ ಆಹ್ವಾನಿಸುವ ದೇವೇಗೌಡರ ಮಕ್ಕಳ ಬಗ್ಗೆ ನೀವು ಯೋಚಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಹೇಮಾವತಿ ಕ್ರೀಡಾಂಗಣದಲ್ಲಿ ಪಂಚರತ್ನ ಯಾತ್ರೆಯ ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಕೆಲವು ರಾಜಕೀಯ ಮುಖಂಡರು ಅಸೂಯೆಯಿಂದ ದೇವೇಗೌಡರ ಕುಟುಂಬ ರಾಜಕೀಯದ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಬಿಜೆಪಿ ಅಥವಾ ಕಾಂಗ್ರೆಸಿನಲ್ಲಿ ಎಷ್ಟುಜನರ ಕುಟುಂಬ ಸದಸ್ಯರುಗಳು ರಾಜಕೀಯದಲ್ಲಿ ಇದ್ದಾರೆ ಎಂಬದೂ ಎಲ್ಲರಿಗೂ ಗೊತ್ತಿದ್ದರೂ ದೇವೇಗೌಡರ ಕುಟುಂಬ ಬಗ್ಗೆ ಮಾತ್ರ ಮಾತನಾಡುತ್ತಾರೆ. ನಾವುಗಳು ಹಿಂಬಾಗಿಲನಿಂದ ರಾಜಕೀಯ ಪ್ರವೇಶ ಮಾಡಿಲ್ಲ, ಜನರ ನೋವಿಗೆ ಸ್ಪಂದಿಸುವ ಮೂಲಕ, ಜನರ ಆಶೀರ್ವಾದದಿಂದ ಬಂದಿರುವ ನಾವುಗಳು ಸಾರ್ಥಕ್ಕಾಗಿ ರಾಜಕೀಯ ಮಾಡದೇ ತಾಯಂದಿರ ಕಣ್ಣೀರು ಒರೆಸುತ್ತಾ, ಉದ್ಯೋಗ ಆಶಿಸಿ ಬರುವ ಯುವಕರ ಸಮಸ್ಯೆಗೆ ಸ್ಪಂದಿಸುತ್ತಾ ಬಂದಿದ್ದೇವೆ ಎಂದರು.
ಸುಮಲತಾ ದೊಡ್ಡವರು, ಅವರ ಬಗ್ಗೆ ಮಾತಾಡುವಷ್ಟು ನಾನು ಬೆಳೆದಿಲ್ಲ: ಎಚ್‌ಡಿಕೆ
ತಾಯಿಯ ನೆರಳಲ್ಲಿ, ಅವರ ಮಾರ್ಗದರ್ಶನದಲ್ಲಿ ಬೆಳೆದಿರುವ ನಾವುಗಳು ತಾಯಿಯಂತೆ ಮೃದು ಹೃದಯದ ಜತೆಗೆ ಹೃದಯ ವೈಶ್ಯಾಲ್ಯತೆಯ ನಡುವಳಿಕೆಯನ್ನು ಕಲಿತಿದ್ದೇವೆ. ರೇವಣ್ಣನವರ ಆದೇಶದ ಮೇರೆಗೆ ಇಂದು ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದರ್ಶನ ಪಡೆದು ಬಂದಿದ್ದೇನೆ. ಹಿಂದಿನ ಹಾಗೂ ಇಂದಿನ ಹೊಳೆನರಸೀಪುರ ಕಂಡಾಗ ದೇವೇಗೌಡರ ಮಾರ್ಗದರ್ಶನದಲ್ಲಿ ರೇವಣ್ಣ ಅವರು ತಾಲೂಕಿನ ಆಭಿವೃದ್ಧಿಯನ್ನು ಸಾಕಷ್ಟುಮಾಡಿರುವುದನ್ನು ಕಾಣಬಹುದಾಗಿದೆ. ರೇವಣ್ಣ ಅವರಿಗೆ ದೊರೆತ ಅವಕಾಶವನ್ನು ಬಳಸಿಕೊಂಡು ರಾಜ್ಯದ, ಜಿಲ್ಲೆಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಶಾಸಕ ರೇವಣ್ಣ ಒರಟ ಇರಬಹುದು ಆದರೆ ಅವರಲ್ಲಿ ಕಲ್ಮಶವಿಲ್ಲ, ಗಿಡವಾಗಿ ನೆಟ್ಟು, ಅವರನ್ನು ಬೆಳೆಸಿದ್ದೀರಿ ಎಂದರು.
ದೇವೇಗೌಡರು ನಮ್ಮ ತಾಯಿಯ ಒಡವೆಯನ್ನು ಅಡವಿಟ್ಟು ಭೂಮಿಯನ್ನು ಖರೀದಿಸಿ, ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ತೋರಿದ ದಾರಿಯಲ್ಲಿ ರೇವಣ್ಣ ಸಾಗುವ ಮೂಲಕ ಇಂದು ಪ್ರಗತಿಪರ ರೈತರಾಗಿದ್ದಾರೆ. ಪಡುವಲಹಿಪ್ಪೆ ಗ್ರಾಮದ ಜಮೀನಿನಲ್ಲಿ ನಿಂತು ದೇವೇಗೌಡರು ನಮ್ಮಗಳ ಜತೆ ಮಾತನಾಡುತ್ತಾ. ಥಿಯೇಟರ್ ಕಟ್ಟಿ, ಅಲ್ಲಿ ನೀವು ಮಾಡುವ ಸಂಪಾದನೆ ನಿಮ್ಮನ್ನು ಹಾಳು ಮಾಡಲು ಪ್ರಭಾವ ಬೀರುತ್ತೆ, ಆದರೆ ಈ ಭೂಮಿಯಲ್ಲಿ ಇಂದು ನೀವು ಕಷ್ಟಅಥವಾ ಶ್ರಮ ಪಡುತ್ತೀರಿ, ಅದು ನಿಮ್ಮ ಬದುಕನ್ನು ಕಟ್ಟುತ್ತೆ ಎಂದು ನೀಡಿದ ಸಲಹೆ ಇಂದಿಗೂ ನಮಗೆ ಮಾರ್ಗದರ್ಶನ ನೀಡುತ್ತಿರುತ್ತದೆ.
ದೇವೇಗೌಡರ ಇತಿಹಾಸದಲ್ಲಿ ಹರದನಹಳ್ಳಿ ಆಂಜನೇಯ ಸೊಸೈಟಿಯ ಸದಸ್ಯರಾಗಿ ರಾಜಕಾರಣ ಪ್ರಾರಂಭ ಮಾಡಿದ ದೇವೇಗೌಡರಿಗೆ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜ ಹಾರಿಸುವ ಅವಕಾಶ ನೀವುಗಳು ನೀಡಿದ್ದೀರಿ ಎಂದು ಸ್ಮರಿಸಿದರು. ರಾಜ್ಯದ ಜನತೆಯ ತೆರಿಗೆ ಹಣ ಲೂಟಿಯಾಗುತ್ತಿದೆ, ಆದ್ದರಿಂದ ಇಂದು ಜೆಡಿಎಸ್ ಆಡಳಿತದ ಚುಕ್ಕಾಣಿ ಹಿಡಿಯುವುದು ಅನಿವಾರ್ಯವಾಗಿದೆ. ಇದರಿಂದಾಗಿ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿ, ಹಲವಾರು ಯೋಜನೆಗಳ ಬಗ್ಗೆ ವಿವರಿಸಿದರು. ಈ ವೇಳೆ ಶಾಸಕ ಎಚ್.ಡಿ.ರೇವಣ್ಣ, ಶಾಸಕ ಬಾಲಕೃಷ್ಣ ಹಾಗೂ ಮಾಜಿ ಸಚಿವ ಎ.ಮಂಜು ಮಾತನಾಡಿದರು. ಸಂಸದ ಪ್ರಜ್ವಲ್ ರೇವಣ್ಣ, ಎಂಎಲ್‌ಸಿ ಸೂರಜ್ ರೇವಣ್ಣ, ಜಿ.ಪಂ. ಮಾಜಿ ಸದಸ್ಯೆ ಭವಾನಿ ರೇವಣ್ಣ, ಪುರಸಭಾಧ್ಯಕ್ಷೆ ಜ್ಯೋತಿ ಮಂಜುನಾಥ್, ಎಂ.ಎಲ್.ಸಿ. ರಮೇಶ್‌ಗೌಡ, ಉದ್ಯಮಿ ಟಿ.ಶಿವಕುಮಾರ್, ಇತರರು ಇದ್ದರು.
ಮಾಗಡಿಗೆ ಕುಮಾರಸ್ವಾಮಿ ಕೊಡುಗೆ ಏನು: ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ
ಲಕ್ಷಾಂತರ ಜನರಿಗೆ ಮನೆ ಇಲ್ಲ: ಸ್ವಾತಂತ್ರ ಬಂದು 75 ವರ್ಷವಾದರೂ ರೈತ ಕುಟುಂಬಕ್ಕೆ ನೆಮ್ಮದಿಯಿಂದ ಇಲ್ಲ. ಕೆಲವು ಅಡಿಕೆ ಬೆಳೆಗಾರರ ಹೊರತಾಗಿ ಉಳಿದ ಬೆಳೆ ಬೆಳೆದಿರುವ ಬೆಳಗಾರರು ನೆಮ್ಮದಿಯಿಂದ ಇಲ್ಲ. ಪಟ್ಟಣದಲ್ಲಿ 3 ಸಾವಿರ ಸ್ವಂತ ಮನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದು ತಾಲೂಕಿನ ಒಂದೇ ಸಮಸ್ಯೆಯಲ್ಲ ರಾಜ್ಯದಲ್ಲಿ ಮನೆ ಇಲ್ಲದ ಲಕ್ಷಾಂತರ ಜನರು ಇದ್ದಾರೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಸುವರ್ಣ ಕರ್ನಾಟಕವಾಗುತ್ತದೆ: ಜನತಾದಳ ಪಕ್ಷ 123 ಸ್ಥಾನಗಳಿಸುವುದು ಕಷ್ಟವಿರಬಹುದು, ಆದರೆ ನೀವುಗಳು 5 ವರ್ಷ ಸಂಪೂರ್ಣ ಆಡಳಿತ ನೀಡಿದ್ದಲ್ಲಿ ಪಂಚರತ್ನ ಯಾತ್ರೆಯ ಐದು ಮಹತ್ವದ ಭರವಸೆಗಳು ರಾಜ್ಯವನ್ನು ಸುವರ್ಣ ಕರ್ನಾಟಕಗೊಳಿಸುತ್ತದೆ ಎಂದು ಅಂಕಣಕಾರರು ಅಭಿಪ್ರಾಯಪಟ್ಟಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.