Opposition political parties 2024ರ ಚುನಾವಣೆಗೆ ವಿರೋಧಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿರುವುದರ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಅರ್ಜಿ ದಾಖಲಿಸಲಾಗಿತ್ತು. ಈ ಕುರಿತಾಗಿ ದೆಹಲಿ ಹೈಕೋರ್ಟ್‌ ವಿರೋಧ ಪಕ್ಷಗಳ ನಾಯಕರಿಗೆ ನೀಡಿದ್ದ ನೋಟಿಸ್‌ಗೆ ಉತ್ತರವೇ ಬಂದಿರಲಿಲ್ಲ.  

ನವದೆಹಲಿ (ಏ.3): ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದೇಕೆ? ಈ ಪ್ರಶ್ನೆಗೆ ಮುಂದಿನ ಏಳು ದಿನಗಳ ಒಳಗಾಗಿ ಉತ್ತರ ನೀಡುವಂತೆ ವಿರೋಧ ಪಕ್ಷಗಳ ನಾಯಕರಿಗೆ ದೆಹಲು ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ಇದು ತಾನು ನೀಡುತ್ತಿರುವ ಕೊನೆಯ ನೋಟಿಸ್‌ ಆಗಿದ್ದು, ಇನ್ನು ಅವಕಾಶ ನೀಡಲು ಸಾಧ್ಯವಿಲ್ಲ ಎಂದೂ ತಿಳಿಸಿದೆ. ವಿರೋಧ ಪಕ್ಷಗಳೊಂದಿಗೆ ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರದಿಂದಲೂ ಪ್ರತಿಕ್ರಿಯೆ ಕೋರಿ ನೋಟಿಸ್‌ ಜಾರಿ ಮಾಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್‌ 10 ರಂದು ನಡೆಯಲಿದೆ. ದೆಹಲಿ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್‌ ಹಾಗೂ ನ್ಯಾಯಮೂರ್ತಿ ಮನ್ಮೀತ್‌ ಪ್ರೀತಂ ಸಿಂಗ್‌ ಅರೋರಾ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಕಳೆದ ವರ್ಷ ವಿರೋಧ ಪಕ್ಷಗಳ ಒಕ್ಕೂಟ ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರನ್ನು ಇಟ್ಟಿದ್ದರ ವಿರುದ್ಧ ಗಿರೀಶ್‌ ಭಾರದ್ವಾಜ್‌ ಎನ್ನುವ ವ್ಯಕ್ತಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು.

ವಿರೋಧ ಪಕ್ಷಗಳು ‘ಇಂಡಿಯಾ’ ಎಂಬ ಹೆಸರನ್ನು ಬಳಸದಂತೆ ತಡೆಯಬೇಕು ಎಂದು ಭಾರದ್ವಾಜ್ ತಮ್ಮ ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ದೇಶದ ಹೆಸರನ್ನು ತಮ್ಮ ಮೈತ್ರಿಗೆ ಇಟ್ಟುಕೊಳ್ಳುವ ಮೂಲಕ ಇದರ ದೇಶದ ಜನಪ್ರಿಯ ಹೆಸರಿನ ಲಾಭವನ್ನು ಪಡೆದುಕೊಳ್ಳುತ್ತಿದೆ. ಏಪ್ರಿಲ್‌ 19 ರಿಂದ ಲೋಕಸಭೆ ಚುನಾವಣೆಗೆ ಮತದಾನ ಆರಂಭವಾಗಲಿದ್ದು, ಈ ವಿಚಾರವನ್ನು ಆದಷ್ಟು ಶೀಘ್ರವಾಗಿ ವಿಚಾರಣೆ ಮಾಡಬೇಕು ಎಂದಿದ್ದರು. ಆದರೆ, ದೆಹಲಿ ಹೈಕೋರ್ಟ್‌ ಈ ಅರ್ಜಿಯನ್ನು ತಿರಸ್ಕರಿಸಿತ್ತು.

ಕಳೆದ ವರ್ಷ ಜುಲೈನಲ್ಲಿ ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಭಾರತ ಅಂದರೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ ಎಂದು ಹೆಸರಿಸಿದ್ದವು. ಇದರ ವಿರುದ್ಧವಾಗಿ ಗಿರೀಶ್‌ ಭಾರದ್ವಾಜ್‌ ಎನ್ನುವ ವ್ಯಕ್ತಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ದೇಶದ ಹೆಸರನ್ನು ತಮ್ಮ ಮೈತ್ರಿಕೂಟಕ್ಕೆ ಯಾವುದೇ ಕಾರಣಕ್ಕೂ ಇಡಬಾರದು. ಇದಕ್ಕೆ ಕೋರ್ಟ್‌ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದರು. ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗ ಕೂಡ ಈ ರಾಜಕೀಯ ಪಕ್ಷಗಳ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.\

INDIA Alliance: ಕೇಂದ್ರದ ವಿರುದ್ಧ ಇಂಡಿಯಾ ಮೈತ್ರಿಕೂಟ ರಣಕಹಳೆ: ಮೋದಿ ವಿರುದ್ಧ ‘ಲೋಕತಂತ್ರ ಬಚಾವೋ’ ಹೋರಾಟ!

ಜುಲೈ 18 ರಂದು ಬೆಂಗಳೂರಿನಲ್ಲಿ ನಡೆದ ಸಭೆಯ ವೇಳೆ ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದರು. ಈ ಸಭೆಯ ಬಳಿಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ವೇಳೆ, ಬಿಜೆಪಿ ಇಂಡಿಯಾಗೆ ಸವಾಲ್‌ ಹಾಕಲು ಸಾಧ್ಯವಾಗುತ್ತಾ ಎಂದು ಪ್ರಶ್ನೆ ಮಾಡಿದ್ದರು. ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಕೂಡ ಇದು ಎನ್‌ಡಿಎ ಹಾಗೂ ಇಂಡಿಯಾ ನಡುವಿನ ಫೈಟ್‌, ನರೇಂದ್ರ ಮೋದಿ ಹಾಗೂ ಇಂಡಿಯಾ ನಡುವಿನ ಫೈಟ್‌ ಎಂದಿದ್ದರು.

ಖತಂ ಆಗಿಲ್ಲ I.N.D.I.A ಮೈತ್ರಿ ಚದುರಂಗದಾಟ: ಮೋದಿ ವಿರುದ್ಧ ಮತ್ತೆ ಎದ್ದು ನಿಲ್ಲುತ್ತಾ ಮೈತ್ರಿ ವ್ಯೂಹ..?

ದೇಶದ ಹೆಸರನ್ನು ಎಳೆದು ತರುವ ಮೂಲಕ ರಾಹುಲ್ ಗಾಂಧಿ ಬಿಜೆಪಿ ಮತ್ತು ಪ್ರಧಾನಿ ಮೋದಿ ನಡುವಿನ ಹೋರಾಟ ನಮ್ಮ ದೇಶದ ವಿರುದ್ಧ ಎಂದು ತೋರಿಸಲು ಬಹಳ ಜಾಣ್ಮೆಯಿಂದ ಪ್ರಯತ್ನಿಸಿದ್ದಾರೆ ಎಂದು ಭಾರದ್ವಾಜ್ ಹೇಳಿದ್ದಾರೆ. ಇದು 2024 ರ ಹೋರಾಟ ರಾಜಕೀಯ ಪಕ್ಷಗಳು ಅಥವಾ ಮೈತ್ರಿಗಳು ಮತ್ತು ನಮ್ಮ ದೇಶದ ನಡುವೆ ಇರುತ್ತದೆ ಎಂಬ ಗೊಂದಲವನ್ನು ಸೃಷ್ಟಿಸಿದೆ ಎಂದು ವಾದಿಸಿದ್ದರು. ಮೈತ್ರಿಗೆ ದೇಶದ ಹೆಸರನ್ನಿಟ್ಟರೆ ದ್ವೇಷ ಹೆಚ್ಚುತ್ತದೆ ಮತ್ತು ರಾಜಕೀಯ ಹಿಂಸಾಚಾರದ ಅಪಾಯವಿದೆ ಎಂದು ಅವರು ವಾದಿಸಿದರು.

ಲಾಂಛನಗಳು ಮತ್ತು ಹೆಸರುಗಳು (ಅನುಚಿತ ಬಳಕೆ ತಡೆಗಟ್ಟುವಿಕೆ) ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ಮೈತ್ರಿಕೂಟಗಳಿಗೆ ಇಂಡಿಯಾ ಎಂದು ಹೆಸರಿಸುವುದನ್ನು ನಿಷೇಧಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ, ಯಾವುದೇ ವ್ಯಕ್ತಿ ತನ್ನ ವ್ಯಾಪಾರ, ವೃತ್ತಿ, ಪೇಟೆಂಟ್, ಟ್ರೇಡ್‌ಮಾರ್ಕ್ ಅಥವಾ ವಿನ್ಯಾಸಕ್ಕಾಗಿ ರಾಷ್ಟ್ರೀಯ ಲಾಂಛನ, ಹೆಸರು ಅಥವಾ ಚಿಹ್ನೆಗಳನ್ನು ಬಳಸುವಂತಿಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ಅವುಗಳನ್ನು ಬಳಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.